ವೈಯಕ್ತಿಕ ಕಾಮಗಾರಿ ಮೊತ್ತ ಹೆಚ್ಚಳ 5 ಲಕ್ಷ ರೂ. ಕಾಮಗಾರಿ ಮಾಡಲು ಅವಕಾಶ

Rmgm-Ph-001-Narega 5 Laks Owne Works Styory News Photo-(sangraha Chitra) -21-10-2023
Published on

ವಿಭೂತಿಕೆರೆ ಶಿವಲಿಂಗಯ್ಯ ರಾಮನಗರ

ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ವೈಯಕ್ತಿಕ ಕಾಮಗಾರಿಗಿದ್ದ 2.50 ಲಕ್ಷ ರೂ. ಮಿತಿಯನ್ನು ರಾಜ್ಯ ಸರ್ಕಾರ 5 ಲಕ್ಷ ರೂ.ಗೆ ಹೆಚ್ಚಿಸಿ ನರೇಗಾ ಫಲಾನುಭವಿಗಳಿಗೆ ವಿಜಯದಶಮಿ ಗಿಫ್ಟ್ ನೀಡಿದೆ.

ಜಾಬ್‌ಕಾರ್ಡ್ ಹೊಂದಿರುವ ಸದರಿ ಕುಟುಂಬ ಈ ಹಿಂದೆ ಜೀವಿತಾವಧಿಯಲ್ಲಿ 2.50 ಲಕ್ಷ ರೂ. ಮಾತ್ರ ಯೋಜನೆ ಲಾಭ ಪಡೆಯಬಹುದಾಗಿತ್ತು. ಪ್ರಸ್ತುತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವೈಯಕ್ತಿಕ ಕಾಮಗಾರಿಗಳಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳಿಗೆ ಜೀವಿತಾವಧಿಗೆ 5 ಲಕ ್ಷ ರೂ.ಗಳವರೆಗೆ ಕಾಮಗಾರಿ ನಡೆಸಲು ಆದೇಶ ಹೊರಡಿಸಿದೆ.

ಕೂಲಿಕಾರರಿಗೆ ಅಕುಶಲ ಕೆಲಸ ಒದಗಿಸುವುದರ ಜತೆಗೆ ಫಲಾನುಭವಿಗಳಿಗೆ ಜೀವನಾಧಾರಕ್ಕೆ ನೆರವಾಗುವ ವೈಯಕ್ತಿಕ ಆಸ್ತಿಗಳನ್ನು ಸೃಜನೆ ಮಾಡುವ ಮೂಲಕ ಅವರ ಆರ್ಥಿಕ ಪರಿಸ್ಥಿತಿ ಹೆಚ್ಚಿಸುವುದು ಯೋಜನೆಯ ಉದ್ದೇಶವಾಗಿದೆ.

ಜಾಬ್‌ಕಾರ್ಡ್ ಹೊಂದಿರುವ ಕುಟುಂಬಗಳು ಒಂದು ಕುಟುಂಬದ ಜಾಬ್ ಕಾರ್ಡಿನಲ್ಲಿ ವೈಯಕ್ತಿಕ ಕಾಮಗಾರಿ ನಡೆಸಲು ಇಬ್ಬರು, ಮೂವರು, ನಾಲ್ಕು, ಐದು, ಆರು ಜನರಿದ್ದರೂ ಜೀವಿತಾವಧಿಯಲ್ಲಿ 2.50 ಲಕ್ಷ ರೂ. ಮಾತ್ರ ನೆರವು ಯೋಜನೆಯಲ್ಲಿ ಸಿಗುತ್ತಿತ್ತು.

ಯೋಜನೆಯ ನೆರವು ಹೆಚ್ಚಿಸಬೇಕು, ನೆರವಿನ ಹಣದಿಂದ ಒಂದೆರಡು ವರ್ಷ ಕೃಷಿ ಚಟುವಟಿಕೆಗೆ ಪೂರಕವಾದ ಕೆಲಸಗಳನ್ನು ಮಾತ್ರ ಕೈಗೊಳ್ಳಬಹುದು. ಮುಂದಿನ ಕೃಷಿ ಚಟುವಟಿಕೆ ಸಹಾಯಕವಾಗಲು ಯೋಜನೆ ಹಣ ದುಪ್ಪಟ್ಟು ಮಾಡಬೇಕು ಎಂಬ ಕೂಗು ರೈತಾಪಿ ವರ್ಗಗಳಿಂದ ಕೇಳಿಬಂದಿತ್ತು. ಈಗಾಗಲೇ ಹಲವಾರು ಜಾಬ್‌ಕಾರ್ಡ್ ಹೊಂದಿರುವ ಕುಟುಂಬಗಳು 2.50 ಲಕ್ಷ ರೂ. ಮಿತಿ ಪೂರ್ಣಗೊಳಿಸಿ ಯೋಜನೆ ನೆರವು ಸಿಗದ ಪರಿಸ್ಥಿತಿಯಲ್ಲಿದ್ದರು.

ಜತೆಗೆ ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿರುವ ಕಾರಣ ಬರಪರಿಸ್ಥಿತಿ ಎದುರಾಗಿದ್ದು, ಕೃಷಿ ಚಟುವಟಿಕೆ ವಿಸ್ತರಣೆ ಯೋಜನೆಗಳು ರೈತರಿಗೆ ಆರ್ಥಿಕ ಹೊರೆ ತಂದೊಡ್ಡಿದ್ದವು. ಇಂಥ ಸನ್ನಿವೇಶದಲ್ಲಿ ನರೇಗಾ ಮೂಲಕ ಕುಟುಂಬಗಳಿಗೆ ಹಿಂದಿದ್ದ ನೆರವಿನ ಮಿತಿಯನ್ನು ದ್ವಿಗುಣಗೊಳಿಸಿ ಸಹಾಯ ಹಸ್ತ ಚಾಚಿದ್ದು ಯೋಜನೆಯಿಂದ ಬಹಳಷ್ಟು ಜನರಿಗೆ ಉಪಯೋಗವಾಗಲಿದೆ ಎನ್ನುತ್ತಾರೆ ಗೌಡಯ್ಯನದೊಡ್ಡಿ ವೆಂಕಟೇಶ್.

ವೈಯಕ್ತಿಕ ಕಾಮಗಾರಿಗಳು

ದನದ ಕೊಟ್ಟಿಗೆ, ಕೃಷಿ ಹೊಂಡ, ಬಚ್ಚಲು ಗುಂಡಿ, ಕೋಳಿಶೆಡ್, ಬದು ನಿರ್ಮಾಣ, ಮಾವು, ತೆಂಗು, ಅಡಕೆ ತೋಟ ಪುನಶ್ಚೇತನ, ಬದು ನಿರ್ಮಾಣ, ಗಿಡ ನೆಡುವುದು, ಹಿಪ್ಪು ನೇರಳೆ ನರ್ಸರಿ, ಗೊಬ್ಬರದ ಗುಂಡಿ ಸೇರಿದಂತೆ 89 ಕಾಮಗಾರಿಗಳು ಯೋಜನೆಯಲ್ಲಿ ಸೇರಿವೆ. ಕಾಮಗಾರಿ ಕೈಗೊಳ್ಳಲು ಗ್ರಾಪಂನಲ್ಲಿ ಜಾಬ್‌ಕಾರ್ಡ್ ಹೊಂದಿರಬೇಕು. ಫಲಾನುಭವಿ ಕುಟುಂಬದ ಒಬ್ಬ ಸದಸ್ಯ ಕೆಲಸ ನಿರ್ವಹಿಸಬೇಕು ಎಂಬ ನಿಯಮ ವಿಧಿಸಿದೆ.

ಸಮುದಾಯ ಕಾಮಗಾರಿಗಳಿಗೆ ವೆಚ್ಚದ ಮಿತಿಯಿಲ್ಲ

ನರೇಗಾ ವೈಯಕ್ತಿಕ ಕಾಮಗಾರಿಗಳಿಗಷ್ಟೇ ವೆಚ್ಚದ ಮಿತಿ ಇದೆ. ಆದರೆ, ಸಮುದಾಯ ಕಾಮಗಾರಿಗಳಿಗೆ ಯಾವ ವೆಚ್ಚದ ಮಿತಿ ಇಲ್ಲ. ಜಾಬ್‌ಕಾರ್ಡ್ ಹೊಂದಿರುವ ಕುಟುಂಬದ ಯಾವ ಸದಸ್ಯರಾದರೂ ಕೆಲಸ ಕೇಳಿ ಗ್ರಾಪಂನಲ್ಲಿ ಅರ್ಜಿ ಸಲ್ಲಿಸಿದರೆ ಯೋಜನೆ ಲಾಭ ಪಡೆಯಬಹುದು. ಕೆಲಸ ನಿರ್ವಹಿಸಿ ಕೆಲಸದ ಕೂಲಿ ಪಡೆಯಬಹುದು. ಸಮುದಾಯ ಕಾಮಗಾರಿಗಳೆಂದರೆ ರಸ್ತೆ, ಚರಂಡಿ, ಓಣಿ ರಸ್ತೆ, ಕೆರೆ, ಕಾಲುವೆ, ಅಂಗನವಾಡಿ, ಶಾಲೆ ಆಟದ ಮೈದಾನ ಶಾಲಾ ಕಟ್ಟಡ ಅಭಿವೃದ್ಧಿ ಮುಂತಾದವುಗಳು.

ನರೇಗಾ ಯೋಜನೆ ಲಾಭ ಪಡೆಯಲು ಅರ್ಹ ಕುಟುಂಬಗಳು

ಪ.ಜಾತಿ, ಪಂಗಡ, ಅಲೆಮಾರಿ ಬುಡಕಟ್ಟುಗಳು, ಅಧಿಸೂಚನೆಯಿಂದ ಕೈಬಿಟ್ಟ ಬುಡಕಟ್ಟುಗಳು, ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳು, ಮಹಿಳಾ ಪ್ರಧಾನ ಕುಟುಂಬಗಳು, ವಿಕಲಚೇತನ ಕುಟುಂಬಗಳು, ಭೂ ಸುಧಾರಣಾ ಫಲಾನುಭವಿಗಳು, ವಸತಿ ಯೋಜನೆಗಳ ಫಲಾನುಭವಿಗಳು, ಅರಣ್ಯಹಕ್ಕು ಕಾಯ್ದೆ 2006ರ ಫಲಾನುಭವಿಗಳು ಸಣ್ಣ ಮತ್ತು ಅತೀ ಸಣ್ಣ ರೈತರು.

ನರೇಗಾ ಯೋಜನೆಯಲ್ಲಿ ವೈಯಕ್ತಿಕ ಕಾಮಗಾರಿಗೆ ಪ್ರಸ್ತುತ 5 ಲಕ್ಷ ರೂ.ಮಿತಿ ಒಂದಷ್ಟು ರೈತಾಪಿ ವರ್ಗಕ್ಕೆ ನೆರವು ಸಿಕ್ಕಂತಾಗಿದ್ದರೂ ಜೀವಿತಾವಧಿಯವರೆಗೆ ಮಿತಿ ನಿಗದಿಗೊಳಿಸಿದೆ. ರೈತ ಪ್ರತೀ ವರ್ಷ ಕೃಷಿ ಚಟುವಟಿಕೆ ನಡೆಸಬೇಕು ಒಂದಿಲ್ಲೊಂದು ಕೃಷಿ ಚಟುವಟಿಕೆ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿರುತ್ತವೆ. ಜೀವಿತಾವಧಿಯವರೆಗೆ ಎಂದಿರುವುದನ್ನು ತೆಗೆದು ಮೂರು ಅಥವಾ ಐದು ವರ್ಷಗಳಿಗಷ್ಟೇ ಸೀಮಿತಗೊಳಿಸಿಬೇಕು. ಆಗ ಮಾತ್ರ ಯೋಜನೆ ನೆರವು ರೈತರಿಗೆ ಮತ್ತಷ್ಟು ಸಿಗಲು ಸಾಧ್ಯ.ಎಂ.ಪಿ. ಮಹೇಶ್, ಮೊಟ್ಟೆದೊಡ್ಡಿ, ಅಧ್ಯಕ್ಷ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ
ಪ್ರತಿ ಗ್ರಾಪಂನಲ್ಲಿ ನರೇಗಾ ಯೋಜನೆ ಯಶಸ್ವಿ ಅನುಷ್ಠಾನ ಮಾಡಲಾಗುತ್ತಿದೆ. ಯೋಜನೆಯಲ್ಲಿ ಹಲವು ಸಮುದಾಯ ಕೆಲಸಗಳು ಭರದಿಂದ ಸಾಗಿವೆ. ವೈಯಕ್ತಿಕ ಕಾಮಗಾರಿ ಕೈಗೊಳ್ಳುವ ಫಲಾನುಭವಿಗಳಿಗೆ ವಾರ್ಡ್ ಸಭೆ ನಡೆಸಿ ಯೋಜನೆಯಲ್ಲಿ ಸಿಗುವ ಸವಲತ್ತುಗಳನ್ನು ತಿಳಿಸಿಕೊಟ್ಟು ಯೋಜನೆಯ ಲಾಭ ಪ್ರತಿಯೊಬ್ಬರು ಪಡೆಯಲು ಅನುಕೂಲ ಕಲ್ಪಿಸಲಾಗಿದೆ.ಟಿ. ಪ್ರದೀಪ್, ತಾಪಂ ಇಒ ರಾಮನಗರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net