49 ಗ್ರಾಮಗಳಲ್ಲಿ ಹೈರಿಸ್ಕ್ ಘೊಷಣೆ

5sdp1
Published on

ರಮೇಶ ಹಾರ್ಸಿಮನೆ ಸಿದ್ದಾಪುರ

ಸಿದ್ದಾಪುರ ತಾಲೂಕಿನಲ್ಲಿ ಮಾರಣಾಂತಿಕವಾಗಿ ಕಾಡುತ್ತಿರುವ ಮಂಗನ ಕಾಯಿಲೆಯಿಂದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಅದರಲ್ಲೂ ತಾಲೂಕಿನ 49ಗ್ರಾಮಗಳನ್ನು ಮಂಗನ ಕಾಯಿಲೆಯ ಹೈರಿಸ್ಕ್ ಗ್ರಾಮಗಳೆಂದು ತಾಲೂಕು ಆರೋಗ್ಯ ಇಲಾಖೆ ಗುರುತಿಸಿರುವುದು ಜನರ ಭೀತಿ ಹೆಚ್ಚಾಗುವಂತೆ ಮಾಡಿದೆ.

ಸ್ಥಳೀಯ ಆಡಳಿತ ಜಾಗೃತಿ ಕಾರ್ಯಕ್ರಮ ನಡೆಸುತ್ತಿದ್ದರೂ ಲಸಿಕೆ ಪಡೆಯುವುದಕ್ಕೆ ಜನ ಹಿಂದೇಟು ಹಾಕುತ್ತಿದ್ದಾರೆ. ಆರೋಗ್ಯ ಇಲಾಖೆ ಜನತೆಗೆ ಲಸಿಕೆ ಪಡೆದುಕೊಳ್ಳುವಂತೆ ಮನವೊಲಿಸುವುದರೊಂದಿಗೆ ಕಾಯಿಲೆಗೆ ಸೂಕ್ತ ಚಿಕಿತ್ಸೆ ನೀಡುವ ಸಂಶೋಧನಾ ಕೇಂದ್ರ ಸ್ಥಾಪಿಸುವುದಕ್ಕೆ ಮುಂದಾಗಬೇಕು. ಮರಣ ಹೊಂದಿದ ಮೇಲೆ ಪರಿಹಾರ ನೀಡುವ ಬದಲು ಸಾವು ತಡೆಯುವುದಕ್ಕೆ ಇಲಾಖೆ ಮುಂದಾಗಬೇಕಿದೆ.

2020ರ ಏಪ್ರಿಲ್​ನಲ್ಲಿ ಕ್ಯಾದಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಭೆ ನಡೆಸಿದ್ದ ಸಚಿವ ಶಿವರಾಮ ಹೆಬ್ಬಾರ, ಕಾಯಿಲೆ ಪೀಡಿತರು ಹೆಚ್ಚಾಗಿರುವ ಸಿದ್ದಾಪುರಕ್ಕೆ ಒಂದು ಹೆಚ್ಚುವರಿ ಅಂಬುಲೆನ್ಸ್ ಹಾಗೂ ಒಂದು ವೆಂಟಿಲೇಟರ್ ವ್ಯವಸ್ಥೆ ಹೊಂದಿರುವ ಅಂಬುಲೆನ್ಸ್ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಆ ಭರವಸೆ ವರ್ಷ ಕಳೆದರೂ ಈಡೇರಿಲ್ಲ.

2019ರಲ್ಲಿ ಮಂಗನ ಕಾಯಿಲೆಯಿಂದ 11 ಜನ ಮೃತಪಟ್ಟಿದ್ದಾರೆ. 2020ರಲ್ಲಿ ಆರೋಗ್ಯ ಇಲಾಖೆ ಮುತುವರ್ಜಿ ವಹಿಸಿ ಕೆಲಸ ನಿರ್ವಹಿಸಿದ್ದರಿಂದ ಕೇವಲ ಒಬ್ಬ ಮೃತಪಟ್ಟಿದ್ದ. 2021ರ ಫೆಬ್ರವರಿಯಲ್ಲಿ ಒಬ್ಬರಲ್ಲಿ ಕಾಯಿಲೆ ಕಾಣಿಸಿಕೊಂಡಿದ್ದು, ಮಣಿಪಾಲದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ವರ್ಷದ ಹಿಂದೆ ಕಾಯಿಲೆಯಿಂದ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದವರು ದೈಹಿಕವಾಗಿ ಮೊದಲಿನಂತೆ ಚೇತರಿಸಿಕೊಂಡಿಲ್ಲ. ಈ ಕುರಿತು ಜಿಲ್ಲಾಡಳಿತ ಕ್ರಮ ಕೈಗೊಂಡು ಅವರ ಆರೋಗ್ಯದ ಕುರಿತು ಹೆಚ್ಚಿನ ಗಮನ ನೀಡಬೇಕಾಗಿದೆ.

ಡಿಸಿ ಅಧ್ಯಕ್ಷತೆಯಲ್ಲಿ ಸಭೆ ಇಂದು: ಪಟ್ಟಣದ ತಾಪಂ ಸಭಾಂಗಣದಲ್ಲಿ ಮಾ. 6ರಂದು ಬೆಳಗ್ಗೆ 11ಕ್ಕೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧ್ಯಕ್ಷತೆಯಲ್ಲಿ ಮಂಗನ ಕಾಯಿಲೆ ಕುರಿತು ಸಭೆ ನಡೆಯಲಿದೆ ಎಂದು ತಹಸೀಲ್ದಾರ ಪ್ರಸಾದ ಎಸ್.ಎ. ತಿಳಿಸಿದ್ದಾರೆ.

ಶೇ. 28 ಜನರಿಗೆ ಲಸಿಕೆ: ಮಂಗನ ಕಾಯಿಲೆ ಕಂಡು ಬರುವ ಪ್ರದೇಶದಲ್ಲಿ ಮಾತ್ರ ಲಸಿಕೆ ನೀಡುತ್ತಿದ್ದೇವೆ. ಅನುಮಾನಾಸ್ಪದವಾಗಿ ಮಂಗ ಸತ್ತರೂ ಆ ಭಾಗದ ಸುತ್ತಲಿನ 3 ಕಿ.ಮೀ. ವ್ಯಾಪ್ತಿಯಲ್ಲಿನ ಜನರಿಗೆ ಲಸಿಕೆ ನೀಡುತ್ತೇವೆ. ಈ ವರ್ಷ 68,000 ಜನರಿಗೆ ಲಸಿಕೆ ನೀಡುವ ಗುರಿ ಇದೆ. ಫೆಬ್ರವರಿಯಿಂದ ಆರಂಭವಾದ ಡೋಸ್ ನೀಡುವ ಕಾರ್ಯದಲ್ಲಿ ಈವರೆಗೆ 18234 ( ಶೇ. 28) ಜನರಿಗೆ ಲಸಿಕೆ ನೀಡಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಲಕ್ಷ್ಮೀಕಾಂತ ನಾಯಕ ತಿಳಿಸಿದ್ದಾರೆ.

ತಾಲೂಕಿನಲ್ಲಿ ಈಗಾಗಲೇ ಮಂಗನ ಕಾಯಿಲೆ ಕಾಣಿಸಿಕೊಂಡಿದೆ. ಉಸ್ತುವಾರಿ ಸಚಿವರ ಭರವಸೆಗೆ ತೃಪ್ತಿ ಪಡುವ ಸ್ಥಿತಿ ನಮ್ಮದಾಗಿದೆ. ಜನತೆ ಲಸಿಕೆ ಪಡೆಯುವಂತೆ ಸಮರ್ಪಕ ಮಾಹಿತಿ ನೀಡುವುದರೊಂದಿಗೆ ರೋಗ ಹರಡದಂತೆ ಎಲ್ಲ ರೀತಿಯ ಕ್ರಮಕೈಗೊಳ್ಳುವುದಕ್ಕೆ ಸರ್ಕಾರ ಮುಂದಾಗಬೇಕು. | ಲಂಬೋಧರ ಹೆಗಡೆ ಬಾಳಗೋಡ

ಈ ವರ್ಷ ಒಬ್ಬರಲ್ಲಿ ಮಾತ್ರ ಮಂಗನ ಕಾಯಿಲೆ ಕಂಡುಬಂದಿದೆ. ಅದರ ನಿಯಂತ್ರಣಕ್ಕೆ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಲಸಿಕೆ ಪಡೆದುಕೊಳ್ಳುವಂತೆ ಜನರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. | ಡಾ. ಲಕ್ಷ್ಮೀಕಾಂತ ನಾಯ್ಕ ತಾಲೂಕು ಆರೋಗ್ಯಾಧಿಕಾರಿ ಸಿದ್ದಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net