

ಅರಕಲಗೂಡು: ತಾಲೂಕಿನಲ್ಲಿ ಸುರಿಯುತ್ತಿರುವ ನಿರಂತರ ಸೋನೆ ಮಳೆಗೆ ಮೂರು ದಿನಗಳಲ್ಲಿ 49 ಮನೆಗಳ ಗೋಡೆ ಕುಸಿದು ಬಿದ್ದಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ.
ಧಾರಾಕಾರ ಮಳೆಗೆ ಶಿಥಿಲಾವಸ್ಥೆ ತಲುಪಿದ್ದ ಮನೆಯ ಗೋಡೆಗಳು ಕುಸಿದು ಬಿದ್ದಿವೆ. ಹಲವು ಗ್ರಾಮಗಳಲ್ಲಿನ ಬೆಳೆಗಳು ಕೂಡ ಜಲಾವೃತಗೊಂಡಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಶುಕ್ರವಾರ ಇಡೀ ದಿನ ಮಳೆ ಸುರಿಯಿತು. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ವಾಸದ ಮನೆಗಳ ಗೋಡೆ, ಛಾವಣಿ ಕುಸಿತದಿದ್ದು, ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಮನೆಗಳಲ್ಲಿದ್ದ ದವಸ ಧಾನ್ಯಗಳು, ಬಟ್ಟೆ, ಇತರ ಪರಿಕರಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಜೂನ್‌ನಿಂದ ಈವರೆಗೆ ಮಳೆಯಿಂದ ಒಟ್ಟು 71 ಮನೆಗಳಿಗೆ ಹಾನಿಯಾಗಿದೆ. ಮುಸುಕಿನ ಜೋಳ, ತಂಬಾಕು, ಆಲೂಗಡ್ಡೆ, ಶುಂಠಿ ಸೇರಿದಂತೆ ಪ್ರಮುಖ ವಾಣಿಜ್ಯ ಬೆಳೆಗಳು, ತೋಟಗಾರಿಕಾ ಬೆಳೆಗಳಲ್ಲಿ ನೀರು ನಿಂತು ಬೆಳೆ ಹಾನಿಯಾಗುವುದರ ಜತೆಗೆ ರೋಗ ಬಾಧೆಗೆ ಆತಂಕ ಉಂಟಾಗಿದೆ.
ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿರುವ ಕಾರಣ ಜಲಾನಯನ ಪ್ರದೇಶಧ ಅಡಕೆ ತೋಟಗಳಿಗೆ ನೀರು ನುಗ್ಗಿದೆ. ಒಂದೆರಡು ದಿನದಲ್ಲಿ ಮಳೆ ಕಡಿಮೆಯಾಗಿ ನೀರು ಇಳಿಕೆಯಾದಲ್ಲಿ ಸಮಸ್ಯೆ ಇಲ್ಲ. ಮಳೆ ಮುಂದುವರಿದು ನೀರು ಇಳಿಕೆಯಾಗದಿದ್ದಲ್ಲಿ ಇಳುವರಿಯ ಮೇಲೆ ತೀವ್ರ ಹೊಡೆತ ಬೀಳಲಿದೆ.
ತಾಲೂಕಿನ ಮಳೆ ಮಾಪನ ಕೇಂದ್ರಗಳಲ್ಲಿ ದಾಖಲಾಗಿರುವ ಮಳೆ ವಿವರ ಹೀಗಿದೆ. ಅರಕಲಗೂಡು 4. 6 ಸೆಂ.ಮೀ, ಮಲ್ಲಿಪಟ್ಟಣ 5.2 ಸೆಂ.ಮೀ, ದೊಡ್ಡಮಗ್ಗೆ 4.4 ಸೆಂ.ಮೀ, ರಾಮನಾಥಪುರ 4.1 ಸೆಂ.ಮೀ, ಕೊಣನೂರು 4.2 ಸೆಂ.ಮೀ, ಬಸವಾಪಟ್ಟಣ 4.7 ಸೆಂ.ಮೀ, ದೊಡ್ಡಬೆಮ್ಮತ್ತಿಯಲ್ಲಿ 2.2 ಸೆಂ.ಮೀ ಮಳೆ ದಾಖಲಾಗಿದೆ.