

ಮಾಕವಳ್ಳಿ ಸಿ.ರವಿ ಕೆ.ಆರ್.ಪೇಟೆ
ತಾಲೂಕಿನಲ್ಲಿ ಸರ್ಕಾರಿ ಶಾಲೆಗಳು ವಿವಿಧ ಕಾರಣಗಳಿಂದ ಮುಚ್ಚುತ್ತಿವೆ. ಈವರೆಗೆ 47 ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳು ಬಾಗಿಲು ಮುಚ್ಚಿವೆ. ಈ ನಡುವೆ ಮುಚ್ಚಿರುವ ಶಾಲೆಗಳನ್ನು ಮರು ಪ್ರಾರಂಭಿಸಿದರೂ ವಿದ್ಯಾರ್ಥಿಗಳಿಲ್ಲದ ಕಾರಣ ಮತ್ತೆ ಬೀಗ ಹಾಕಲಾಗಿದೆ.
ತಾಲೂಕಿನ ನಂದಿಪುರ, ರಾಜೇನಹಳ್ಳಿ, ಭದ್ರನಕೊಪ್ಪಲು, ದಡದಹಳ್ಳಿ, ಹರಪನಹಳ್ಳಿ, ಸಿಂಗಾಪುರ, ಗುಡ್ಡೇನಹಳ್ಳಿ, ಮರುಕನಹಳ್ಳಿ ಆಶ್ರಮ ವಸತಿ, ಹೊಸಹಳ್ಳಿ, ದಾಸೇಗೌಡನಕೊಪ್ಪಲು, ದೊಡ್ಡಯಾಚೇನಹಳ್ಳಿ, ಕೋಡಿಹಳ್ಳಿ, ಸಂತೇಬಾಚಹಳ್ಳಿ ಉರ್ದು ಶಾಲೆ, ಮದ್ದಿಕ್ಯಾತನಹಳ್ಳಿ, ಮಾವಿನಕಟ್ಟೆಕೊಪ್ಪಲು, ಹಡವನಹಳ್ಳಿ, ಅರೇನಹಳ್ಳಿ, ಕಾಗೆಪುರ, ಗಾಣದಹಳ್ಳಿ, ಗದ್ದೆಹೊಸೂರು, ಕರ್ತೆನಹಳ್ಳಿ, ಬೊಮ್ಮನಾಯಕನಹಳ್ಳಿ, ಹಳೆ ಹತ್ತಿಗುಪ್ಪೆ, ಮಡುವಿನಕೋಡಿ ಉರ್ದು ಶಾಲೆ, ಗುಡ್ಡೆಹೊಸಹಳ್ಳಿ, ಹೊಸೂರು, ಸಾಸಲುಕೊಪ್ಪಲು, ಹೊಡಕೆಶೆಟ್ಟಿಹಳ್ಳಿ, ಐನೋರಹಳ್ಳಿ, ಸಂತೇಬಾಚಹಳ್ಳಿ, ಚಿಕ್ಕಸಂದ್ರ, ಚೌಡಘಟ್ಟ, ಬೆವಿನಹಳ್ಳಿ ಕೊಪ್ಪಲು, ತುರಕನಕೊಪ್ಪಲು, ಸಿಂಧಘಟ್ಟ ಉರ್ದು ಶಾಲೆ, ಮಂದಗೆರೆ, ಚಿಕ್ಕನಾಯಕನಕೊಪ್ಪಲು, ಚೌಡೇನಹಳ್ಳಿ, ಹಳೆ ಮಾದಾಪುರ, ಚುಜಲಕ್ಯಾತನಹಳ್ಳಿ, ಬಿಲ್ಲೇನಹಳ್ಳಿ ಶಾಲೆಗಳು ಮುಚ್ಚಿವೆ.
ಸರ್ಕಾರಿ ಶಾಲೆಗಳು 2011-12ನೇ ಸಾಲಿನಿಂದ ಮುಚ್ಚಲು ಪ್ರಾರಂಭವಾಗಿ ಪ್ರತಿವರ್ಷ ಅದರ ಸಂಖ್ಯೆ ಹೆಚ್ಚಾಗುತ್ತಲೆ ಬರುತ್ತಿವೆ. 2011-12ರಲ್ಲಿ 1, 2012-13ರಲ್ಲಿ 1, 2013-14 ರಲ್ಲಿ 3, 2014-15ರಲ್ಲಿ-3, 2015-16ರಲ್ಲಿ 2, 2016-17ರಲ್ಲಿ-6, 2017-18ರಲ್ಲಿ 2, 2018-19ರಲ್ಲಿ 4, 2019-20ರಲ್ಲಿ 4, 2020-21ರಲ್ಲಿ 2, 2021-22ರಲ್ಲಿ 2, 2022-23ರಲ್ಲಿ 6, 2023-24ರಲ್ಲಿ 3, 2024-25ರಲ್ಲಿ 7 ಶಾಲೆಗಳು ಮುಚ್ಚಿವೆ.
ಹೊಸಹಳ್ಳಿ ಶಾಲೆ 2019-20ರಲ್ಲಿ ಮುಚ್ಚಲಾಗಿತ್ತು. 2021-22ರಲ್ಲಿ ಮರುಪ್ರಾರಂಭ ಮಾಡಿ 2023-24ರಲ್ಲಿ ಮತ್ತೆ ಬೀಗಹಾಕಲಾಗಿದೆ. ಅಂತೆಯೇ ಮದ್ದಿಕ್ಯಾತನಹಳ್ಳಿ ಶಾಲೆ 2016-17ರಲ್ಲಿ ಮುಚ್ಚಿ, 2021-22ರಲ್ಲಿ ಮರು ಪ್ರಾರಂಭಿಸಿ 2024-25ರಲ್ಲಿ ಮತ್ತೆ ಮುಚ್ಚಿದ್ದಾರೆ. ಇದರಲ್ಲಿ ಮಡುವಿನಕೋಡಿ, ಸಿಂಧುಘಟ್ಟ ಎರಡು ಉರ್ದು ಶಾಲೆಗಳೂ ಮುಚ್ಚಿವೆ.
ವಸತಿ ಶಾಲೆಗಳ ಹೆಚ್ಚಳ ಹಾಗೂ ಖಾಸಗಿ ಶಾಲೆಗಳಿಗೆ ಹೆಚ್ಚಿನ ಅನುಮತಿ ನೀಡುತ್ತಿರುವುದರಿಂದ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಕಡಿಮೆಯಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಹಂತದಿಂದಲೇ ಇಂಗ್ಲಿಷ್ ಮಾಧ್ಯಮ ಶಿಕ್ಷಣಕ್ಕೆ ಅವಕಾಶವಿಲ್ಲ. ಜತೆಗೆ ಇಂಗ್ಲಿಷ್ ಭಾಷಾ ಶಿಕ್ಷಕರ ಕೊರತೆ ಇರುವುದರಿಂದ ಗುಣಮಟ್ಟದ ಶಿಕ್ಷಣ ಮಕ್ಕಳಿಗೆ ಲಭಿಸದಿರುವುದು, ಪಾಲಕರ ನಿರುತ್ಸಾಹ ಹಾಗೂ ಖಾಸಗಿ ಶಾಲೆ ಮೇಲಿನ ವ್ಯಾಮೋಹ ಸರ್ಕಾರಿ ಶಾಲೆಗಳನ್ನು ಮುಚ್ಚುವಂತೆ ಮಾಡಿದೆ.
ಪಾಲಕರಿಗೆ ಮನವರಿಕೆ ಮಾಡಿಕೊಡಲಿ: ಮುಚ್ಚಿರುವ ಸರ್ಕಾರಿ ಶಾಲೆಗಳನ್ನು ಮರು ಪ್ರಾರಂಭಿಸಲು ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮದ ಪರಿಕಲ್ಪನೆ, ಉದ್ದೇಶ ಮತ್ತು ಸರ್ಕಾರಿ ಶಾಲೆಯಲ್ಲಿ ಒದಗಿಸುತ್ತಿರುವ ಶೈಕ್ಷಣಿಕ ಸೌಲಭ್ಯಗಳನ್ನು ಪಾಲಕರಿಗೆ ಮನವರಿಕೆ ಮಾಡಿಕೊಡಬೇಕು. ಮಕ್ಕಳ ಕಲಿಕಾ ಗುಣಮಟ್ಟ ಉತ್ತಮಪಡಿಸಲು ಸರ್ಕಾರ ಕೈಗೊಂಡ ಹಲವು ಯೋಜನೆಗಳ ಫಲಿತಾಂಶವನ್ನು ತಿಳಿಸಬೇಕು. ನಮ್ಮ ಶಾಲೆ ನಮ್ಮ ಜವಾಬ್ದಾರಿ ಕಾರ್ಯಕ್ರಮ ಕೇವಲ ವೇದಿಕೆಗೆ ಸೀಮಿತವಾಗದೆ ಪ್ರತಿಯೊಬ್ಬರೂ ಕೈಜೋಡಿಸಿ ಕಾರ್ಯಕ್ರಮವು ಯಶಸ್ವಿಯಾಗುವಂತೆ ನೋಡಿಕೊಂಡು ಪಾಲಕರ ಮನವೊಲಿಸಿ ಸರ್ಕಾರಿ ಶಾಲೆಗೆ ದಾಖಲಿಸಿದರೆ ಮುಚ್ಚಿರುವ ಶಾಲೆಗಳು ಮರುಪ್ರಾರಂಭಿಸಬಹುದು.