45 ಸಾವಿರ ರೂ. ಎಗರಿಸಿದ ಚಾಲಾಕಿ ಮಹಿಳೆ!

Fraud
Published on

ಯಳಂದೂರು: ಪಟ್ಟಣ ಬಸ್ ನಿಲ್ದಾಣದ ಎಟಿಎಂನಲ್ಲಿ ಹಣವನ್ನು ಡ್ರಾ ಮಾಡಿಕೊಡುವ ನೆಪದಲ್ಲಿ ಬೇರೆ ಎಟಿಎಂ ಕಾರ್ಡ್ ನೀಡಿದ ಅಪರಿಚಿತ ಮಹಿಳೆಯೊಬ್ಬಳು ಹಣವನ್ನು ಡ್ರಾ ಮಾಡಿಕೊಂಡು ಹೋಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಸಂತೆಮರಹಳ್ಳಿ ಮೋಳೆ ಗ್ರಾಮದ ಶಾಂತರಾಜು ಹಣ ಕಳೆದುಕೊಂಡವರು. ಶಾಂತರಾಜು ಸಂತೆಮರಹಳ್ಳಿ ಗ್ರಾಮದ ಎಸ್‌ಬಿಎಂನಲ್ಲಿ ಖಾತೆ ಹೊಂದಿದ್ದು, ಅಲ್ಲಿಂದ ಎಟಿಎಂ ಕಾರ್ಡ್ ಪಡೆದುಕೊಂಡಿದ್ದಾರೆ. ಮೇ 30ರಂದು ಇವರು ಯಳಂದೂರಿನ ಇಂಡಿಯಾ-1 ಎಟಿಎಂಗೆ ಭೇಟಿ ನೀಡಿದ್ದಾರೆ. ಇವರಿಗೆ ಎಟಿಎಂನಲ್ಲಿ ಹಣ ಡ್ರಾ ಮಾಡುವುದು ಗೊತ್ತಿಲ್ಲದ ಕಾರಣ ಅಲ್ಲೇ ಇದ್ದ ಮಧ್ಯವಯಸ್ಕ ಹೆಂಗಸಿಗೆ ಎಟಿಎಂ ಕಾರ್ಡ್ ಕೊಟ್ಟು ಹಣವನ್ನು ಡ್ರಾ ಮಾಡಿಕೊಡುವಂತೆ ಕೋರಿದ್ದಾರೆ. ಆಕೆ ಕಾರ್ಡ್ ಪಡೆದು ಪಿನ್ ನಂಬರ್ ಒತ್ತುವಂತೆ ಹೇಳಿದ್ದಾಳೆ. ನಂತರ ಶಾಂತರಾಜು ಪಿನ್ ನಂಬರ್ ಒತ್ತಿದ್ದಾರೆ. ಶಾಂತರಾಜುಗೆ 5000 ರೂ. ಡ್ರಾ ಮಾಡಿಕೊಟ್ಟ ನಂತರ ಮಹಿಳೆ ತನ್ನ ಬಳಿ ಇದ್ದ ಬೇರೆ ಬ್ಯಾಂಕಿನ ಎಟಿಎಂ ಕಾರ್ಡ್ ಕೊಟ್ಟು ಯಾಮಾರಿಸಿದ್ದಾಳೆ. ಮಗಳ ಮದುವೆಯ ಲಗ್ನಪತ್ರಿಕೆ ಹಂಚುವ ಆತುರದಲ್ಲಿದ್ದ ಶಾಂತರಾಜು ಎಟಿಎಂ ಕಾರ್ಡ್ ಗಮನಿಸದೆ ಜೇಬಿಗಿಳಿಸಿಕೊಂಡು ವಾಪಸ್ಸಾಗಿದ್ದಾರೆ. ನಂತರ ಜೂ.5 ರಂದು ಇದೇ ಎಟಿಎಂನಲ್ಲಿ ಹಣ ಪಡೆಯಲು ತೆರಳಿದಾಗ ಹಣ ಬರಲಿಲ್ಲ. ನಂತರ ಸಂತೇಮರಹಳ್ಳಿ ಬ್ಯಾಂಕಿನಲ್ಲಿ ವಿಚಾರಿಸಿದ್ದಾರೆ. ಆಗ ಅವರ ಬಳಿ ಇರುವುದು ತಮಿಳುನಾಡಿನ ವಿಜಯನ್ ಎಂಬುವರ ಹೆಸರಿನಲ್ಲಿದ್ದ ಎಟಿಎಂ ಕಾರ್ಡ್ ಎಂದು ತಿಳಿದುಬಂದಿದ್ದು, ಅದರಲ್ಲಿ 290 ರೂ. ಮಾತ್ರ ಇದೆ. ಶಾಂತರಾಜು ಅವರ ಖಾತೆಯಿಂದ ವಂಚಕಿ ಮಹಿಳೆ 45,000 ರೂ. ಡ್ರಾ ಮಾಡಿದ್ದಾಳೆ ಎಂಬುದಾಗಿ ಬ್ಯಾಂಕಿನವರು ಮಾಹಿತಿ ನೀಡಿದ್ದಾರೆ.

45 ವರ್ಷದ ಅಪರಿಚಿತ ಮಹಿಳೆಯ ವಿರುದ್ಧ ಶಾಂತರಾಜು ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net