

ಬೆಂಗಳೂರು: ರಾಜ್ಯದಲ್ಲಿ ಬುಧವಾರ 443 ಹೊಸ ಡೆಂಘೆ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 3,303 ತಲುಪಿದ್ದು, ಒಟ್ಟು ಸೋಂಕಿತರ ಸಂಖ್ಯೆ 15,544ಕ್ಕೆ ಏರಿಕೆಯಾಗಿದೆ. ಸೋಂಕಿತರಲ್ಲಿ ಈವರೆಗೂ ಹತ್ತು ಮಂದಿ ಮೃತಪಟ್ಟಿದ್ದಾರೆ.
ಕಳೆದ 24 ಗಂಟೆಗಳಲ್ಲಿ 3,523 ಶಂಕಿತರನ್ನು ಡೆಂಘೆ ಪರೀಕ್ಷೆಗೆ ಒಳಪಡಿಸಲಾಗಿದ್ದು, ಬೆಂಗಳೂರಿನಲ್ಲಿ 203, ಹಾಸನ 33, ಮಂಡ್ಯ 22, ಚಿತ್ರದುರ್ಗ 21, ಬೆಳಗಾವಿ 20 ಸೇರಿ 443 ಮಂದಿ ಡೆಂಘೆ ಪೀಡಿತರಾಗಿದ್ದಾರೆ. ಡೆಂಘೆ ಜ್ವರದಿಂದ ಬಳಲುತ್ತಿರುವವರಲ್ಲಿ 2,655 ಮಂದಿ ಮನೆ ಆರೈಕೆಯಲ್ಲಿದ್ದು, 648 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದು, ಇವರಲ್ಲಿ 15 ಮಂದಿಯ ಸ್ಥಿತಿ ಗಂಭೀರವಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.