ಕೊಳವೆಬಾವಿ ಕಾಮಗಾರಿ ಗುತ್ತಿಗೆ 431 ಕೋಟಿ ರೂ. ಹಗರಣ

Joint Session
Published on

ಬೆಳಗಾವಿ: ಹಿಂದಿನ ಸರ್ಕಾರದ ಅವಧಿಯಲ್ಲಿ ಕೊಳವೆಬಾವಿ ಕೊರೆಯುವ ಕಾಮಗಾರಿ ಗುತ್ತಿಗೆಯಲ್ಲಿ 431 ಕೋಟಿ ರೂ. ಹಗರಣವಾಗಿದೆ. ದಾಖಲೆಗಳನ್ನು ಇಟ್ಟುಕೊಂಡು ಇದನ್ನು ಪ್ರಸ್ತಾಪಿಸುತ್ತಿದ್ದು, ವೃಥಾ ಆರೋಪ ಮಾಡುತ್ತಿಲ್ಲವೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ವಿಧಾನ ಪರಿಷತ್​ನಲ್ಲಿ ಬಿಜೆಪಿ ಕೋಟ ಶ್ರೀನಿವಾಸ ಪೂಜಾರಿ ಬರಗಾಲದ ತೀವ್ರತೆಯತ್ತ ಸರ್ಕಾರದ ಗಮನಸೆಳೆಯುವ ವೇಳೆ ಕೊಳವೆ ಬಾವಿ ಸಕಾಲಕ್ಕೆ ಕೊರೆಸಿದ್ದರೆ ಸಮಸ್ಯೆ ಸ್ವಲ್ಪಮಟ್ಟಿಗೆ ಬಗೆಹರಿಯುತ್ತಿತ್ತು ಎಂದರು. ಮಧ್ಯೆ ಪ್ರವೇಶಿಸಿದ ಪ್ರಿಯಾಂಕ್, ಈ ಹಿಂದೆ ಕೊಳವೆಬಾವಿ ಅವ್ಯವಹಾರದ ಬಗ್ಗೆ ದಾಖಲೆ ಸಹಿತ ಬಹಿರಂಗಪಡಿಸಿದ್ದು, ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ಹೂಡಲಾಗಿದೆ. ಅಲ್ಲದೆ, ಒಂದಿಬ್ಬರ ಬಂಧನವಾಗಿದ್ದು, ಆಗಿನ ಸಿಎಂ ತನಿಖೆಗೂ ಆದೇಶಿಸಿದ್ದಾರೆ. ಬಿಜೆಪಿ ಆಡಳಿತಾವಧಿಯಲ್ಲಿ ನಡೆದಿರುವ ಈ ಹಗರಣ ಯಾವ ಹಂತದಲ್ಲಿ ನಡೆದಿದೆ ಎನ್ನುವುದು ತನಿಖೆ ನಂತರ ಗೊತ್ತಾಗುತ್ತದೆ ಎಂದರು.

ಪೂಜಾರಿ ಸವಾಲು: ಕೋಟ ಶ್ರೀನಿವಾಸ ಪೂಜಾರಿ ಮಾತು ಮುಂದುವರಿಸಿ, ಹಿಂದಿನ ಕಾಂಗ್ರೆಸ್ ಆಡಳಿತಾವಧಿಯ ಗುತ್ತಿಗೆ ಸಂಸ್ಥೆಗಳನ್ನೇ ಬಿಜೆಪಿ ಆಡಳಿತಾವಧಿಯಲ್ಲಿ ಮುಂದು ವರಿಸಲಾಗಿತ್ತು. ಅಕ್ರಮವಾಗಿದೆ ಎಂದು ತಾವು ಗಮನಕ್ಕೆ ತಂದ ಮೇಲೆ ಪರಿಶೀಲಿಸಲಾಗಿದೆ. ಒಂದೆರಡು ಪ್ರಕರಣಗಳಲ್ಲಿ ಲೋಪ ಪತ್ತೆಯಾಗಿದ್ದರಿಂದ ಕಾನೂನು ಕ್ರಮವಹಿಸಿ, ಸದನದಲ್ಲಿ ಸಿಎಂ ಮುಖೇನ ತನಿಖೆಯ ಹೇಳಿಕೆ ನೀಡಿಸಿದ್ದೆ ಎಂದು ನೆನಪಿಸಿದರು. ಹಗರಣವಾಗಿದ್ದರೆ ತನಿಖೆ ನಡೆಸಿ ಕ್ರಮಕೈಗೊಳ್ಳಿ ಎಂದು ಸವಾಲು ಹಾಕಿದರು. ಒಂದೆರಡು ಪ್ರಕರಣದ ಲೋಪ ಮುಂದಿಟ್ಟುಕೊಂಡು 17 ಸಾವಿರ ಕೊಳವೆಬಾವಿ ಕೊರೆಯುವುದನ್ನು ನಿಲ್ಲಿಸುವುದು ಸರಿಯಲ್ಲವೆಂದು ಆಕ್ಷೇಪಿಸಿದರು.

ದೇವಸ್ಥಾನ ಹಣ ದುರ್ಬಳಕೆ ತನಿಖೆಗೆ

ಮುಜರಾಯಿ ದೇವಸ್ಥಾನ ನಿರ್ವಣ, ಜೀಣೋದ್ಧಾರ ಕಾಮಗಾರಿಯಲ್ಲಿ ಹಣ ದುರ್ಬಳಕೆ ಬಗ್ಗೆ ತನಿಖೆ ನಡೆಸುವುದಾಗಿ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.ಜೆಡಿಎಸ್​ನ ಕರೆಮ್ಮ ಪ್ರಶ್ನೆಗೆ ಉತ್ತರಿಸಿದ ಸಚಿವರು, ದೇವದುರ್ಗ ಸೇರಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಅನುದಾನ ದುರ್ಬಳಕೆಯಾಗಿರುವ ದೂರುಗಳು ಬಂದಿದ್ದು ಸಮಗ್ರ ತನಿಖೆ ನಡೆಸುವುದಾಗಿ ಹೇಳಿದರು. ಬಿಜೆಪಿಯ ಸುರೇಶ್​ಗೌಡ, ನನ್ನ ಕ್ಷೇತ್ರದಲ್ಲೂ ಗುತ್ತಿಗೆದಾರರು ದೇವಸ್ಥಾನಗಳ ಹಣ ಬಿಡುಗಡೆ ಮಾಡಿಸಿಕೊಂಡಿದ್ದಾರೆ. ಕೆಲಸವನ್ನೇ ಮಾಡಿಲ್ಲ. ಏನು ಕ್ರಮ ತೆಗೆದುಕೊಳ್ಳುತ್ತೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪರಿಹಾರ ಕೊಡಿ, ಇಲ್ಲವೇ ಅಧಿಕಾರ ಬಿಡಿ

ರಾಜ್ಯದ ಬರ ಸಂಕಷ್ಟಕ್ಕೆ ತುರ್ತಾಗಿ ಸ್ಪಂದಿಸಿ ಪರಿಹಾರ ಕಾರ್ಯನಿರ್ವಹಣೆಗೆ 10 ಸಾವಿರ ಕೋಟಿ ರೂ. ಕೊಡಿ ಇಲ್ಲವೇ ಅಧಿಕಾರ ಬಿಟ್ಟು ಬಿಡಿ ಎಂದು ವಿಧಾನ ಪರಿಷತ್​ನಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯಿಸಿದರು. ಬರಗಾಲದ ಬಗ್ಗೆ ಸೋಮವಾರ ನಿಲುವಳಿ ಸೂಚನೆ ಮಂಡಿಸಿ ವಿಷಯ ಪ್ರಸ್ತಾಪಿಸಿದ ಅವರು, 216 ತಾಲೂಕುಗಳಲ್ಲಿ ತೀವ್ರ ಬರ ಎಂದು ಸರ್ಕಾರವೇ ಹೇಳುತ್ತದೆ. ಆದರೆ ಯುದ್ಧೋಪಾದಿ ಬರ ಪರಿಹಾರ ಕಾಮಗಾರಿಗೆ ನಯಾ ಪೈಸೆಯೂ ಬಿಡುಗಡೆ ಮಾಡಿಲ್ಲ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ತೋರಿಸಿ ಕಾಲ ಕಳೆಯುವುದು ಬಿಟ್ಟು, ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸಲಿ ಎಂದು ಆಗ್ರಹಿಸಿದರು.

ವಿಕಸಿತ ಭಾರತ ಜಟಾಪಟಿ: ಕೇಂದ್ರ ಸರ್ಕಾರದ 78 ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ಆರಂಭಿಸಿರುವ ವಿಕಸಿತ ಭಾರತ ಕಾರ್ಯಕ್ರಮಕ್ಕೆ ಅಧಿಕಾರಿಗಳು ಗೈರಾಗುತ್ತಿರುವ ಬಗ್ಗೆ ಜಟಾಪಟಿ ನಡೆಯಿತು. ಜಿಲ್ಲಾಧಿಕಾರಿ, ಜಿ.ಪಂ. ಸಿಇಒ ಕೂಡಾ ಹಾಜರಾಗಿಲ್ಲ. ಸಿಎಂ ಕಚೇರಿಯಿಂದಲೇ ಹಾಜರಾಗಬೇಡಿ ಎಂಬ ಸೂಚನೆ ನೀಡಿರುವುದು ತಿಳಿಯಿತು ಎಂದು ಕೋಟ ಶ್ರೀನಿವಾಸ ಪೂಜಾರಿ ಗಂಭೀರ ಆರೋಪ ಮಾಡಿದರು. ಕೇಂದ್ರ ಸರ್ಕಾರದ ಪ್ರಮೋಷನ್ ಕಾರ್ಯಕ್ರಮವೆಂದು ಸಚಿವ ಪ್ರಿಯಾಂಕ್ ಖರ್ಗೆ ಕುಟುಕಿದ್ದು ಮಾತಿನ ಜಟಾಪಟಿಗೆ ಕಾರಣವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net