41 ಕುಟುಂಬಗಳಿಗೆ ಹಕ್ಕುಪತ್ರ

Srp_Mla Program 1
Published on

ಶ್ರೀರಂಗಪಟ್ಟಣ: ತಾಲೂಕಿನ ಶ್ರೀರಾಂಪುರ ಗ್ರಾಮದಲ್ಲಿ ಐದಾರು ದಶಕಗಳಿಂದ ಹಿಂದುಳಿದ ವರ್ಗದ ಭೋವಿ ಸಮುದಾಯದವರಿಗೆ ಸರ್ಕಾರದಿಂದ ಇ-ಖಾತೆ ಜತೆಗೆ ಅಧಿಕೃತ ಹಕ್ಕುಪತ್ರ ದಾಖಲೆಗಳನ್ನು ಒದಗಿಸುವ ಮೂಲಕ ಶಾಶ್ವತ ಸೂರು ಕಲ್ಪಿಸಲಾಗಿದೆ ಎಂದು ಶಾಸಕರೂ ಆದ ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

ತಾಲೂಕಿನ ಟಿ.ಎಂ.ಹೊಸೂರು ಗ್ರಾಮದಲ್ಲಿ ಶುಕ್ರವಾರ ಗ್ರಾಮ ಪಂಚಾಯಿತಿ ಕಾರ್ಯಾಲಯದ ನೂತನ ಕಟ್ಟಡ ಉದ್ಘಾಟನೆ, 41 ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಿದ ಬಳಿಕ ಮಾತನಾಡಿದರು. ಟಿ.ಎಂ.ಹೊಸೂರು ಗ್ರಾಪಂ ವ್ಯಾಪ್ತಿಯ ಶ್ರೀರಾಂಪುರ ಗ್ರಾಮದ ಸರ್ಕಾರಿ ಜಾಗದಲ್ಲಿ ಹಲವು ದಶಕಗಳಿಂದ ಮನೆ ನಿರ್ಮಿಸಿಕೊಂಡಿರುವ ಭೋವಿ ಸಮುದಾಯದ 41 ಕುಟುಂಬಗಳ ಜನರು ಐದಾರು ದಶಕಗಳಿಂದ ಆತಂಕದಲ್ಲೇ ಜೀವನ ಮಾಡುತ್ತಿದ್ದರು. ಇದೀಗ ಸರ್ಕಾರದ ಉಪ ಗ್ರಾಮ ಯೋಜನೆಯಡಿ ಅಲ್ಲಿನ ಪ್ರತಿ ಮನೆಗೂ ಇ ಖಾತೆಯ ಡಿಜಿಟಲ್ ದಾಖಲೆಯನ್ನು ವಿತರಿಸಿ ಹಕ್ಕು ನೀಡಲಾಗಿದೆ. ಗ್ರಾಪಂ ವ್ಯಾಪ್ತಿಯ ಕಾಳೇನಹಳ್ಳಿ ಗ್ರಾಮದ ಬಳಿ ಶೆಡ್ಡು ಎಂಬ ಸ್ಥಳದಲ್ಲೂ ಹಿಂದುಳಿದ ವರ್ಗದ 50ಕ್ಕೂ ಹೆಚ್ಚು ಭೋವಿ ಸಮಾಜದ ಕುಟುಂಬಗಳು ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸಿಸುತ್ತಿವೆ. ಆ ಕುಟುಂಬಗಳಿಗೂ ಇನ್ನು 6 ತಿಂಗಳೊಳಗೆ ಹಕ್ಕುಪತ್ರ ವಿತರಿಸಲಾಗುವುದು ಎಂದು ಭರವಸೆ ನೀಡಿದರು.

ಎರಡು ಕೃಷಿ ಪಂಪ್‌ಸೆಟ್‌ಗಳು ಇದ್ದರೆ ಒಂದು ವಿದ್ಯುತ್ ಪರಿವರ್ತಕ ಅಳವಡಿಸುವ ಯೋಜನೆಯನ್ನು ಸೆಸ್ಕ್ ಜಾರಿಗೆ ತಂದಿದೆ. ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಮಾತನಾಡಿ, ಗ್ರಾಮ ವಿಕಾಸ್ ಯೋಜನೆ, ಪಿಜಿಎಸ್‌ಎ ಯೋಜನೆ ಮತ್ತು 15ನೇ ಹಣಕಾಸು ಯೋಜನೆಗಳ ಒಟ್ಟು 45 ಲಕ್ಷ ರೂ.ಅನುದಾನದಲ್ಲಿ ಗ್ರಾಪಂ ಕಟ್ಟಡವನ್ನು ನಿರ್ಮಿಸಲಾಗಿದೆ. ಹಲವು ದಶಕಗಳ ಬೇಡಿಕೆ ಈಡೇರಿದ್ದು, ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷ ಶಿವಮೂರ್ತಿ, ಉಪಾಧ್ಯಕ್ಷ ಸಿ.ಕೆ. ಶಿವಕುಮಾರ್, ತಹಸೀಲ್ದಾರ್ ಚೇತನಾ ಯಾದವ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎ.ಬಿ.ವೇಣು, ಸದಸ್ಯರಾದ ರತ್ನಮ್ಮ, ಮಹಾಲಕ್ಷ್ಮೀ, ಚನ್ನನಕೆರೆ ರತ್ನಮ್ಮ, ಕುಮಾರಸ್ವಾಮಿ, ಶಾಂತಮ್ಮ, ಚಂದ್ರಶೇಖರ್, ಶಿವಮ್ಮ, ಶಿವಸ್ವಾಮಿ, ಎನ್.ಕೆ. ಶಿವಕುಮಾರ್, ಸಂಜೀವಮ್ಮ, ವಸಂತಮ್ಮ, ವಿಶಾಲಾಕ್ಷಮ್ಮ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಮಹದೇವು, ಎಪಿಎಂಸಿ ಮಾಜಿ ಅಧ್ಯಕ್ಷ ದೇವರಾಜು, ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜು, ಮಹಿಳಾ ಒಕ್ಕೂಟದ ಅಧ್ಯಕ್ಷೆ ಜ್ಯೋತಿಲಕ್ಷ್ಮೀ, ಮುಖಂಡರಾದ ನಟರಾಜು, ಮೆರವೇಗೌಡ, ಚಂದ್ರೇಗೌಡ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net