

ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ಮೊದಲ ಬಾರಿ ದಾಖಲೆ ಉಷ್ಣಾಂಶ ಕಂಡುಬಂದಿದೆ.ಬುಧವಾರ ನಗರದಲ್ಲಿ 41.3 ಡಿ.ಸೆ.ತಾಪಮಾನ ವರದಿಯಾಗಿದೆ. ಈ ಮೂಲಕ ಹಿಂದಿನ ಎಲ್ಲ ದಾಖಲೆ ಮುರಿದಿದೆ.
2017ರಲ್ಲಿ 39.6, 2018ರಲ್ಲಿ 38.1, 2019ರಲ್ಲಿ 39.9, 2020ರಲ್ಲಿ 38.9, 2021ರಲ್ಲಿ 38.9, 2022ರಲ್ಲಿ 39.7 ಡಿ.ಸೆ.ಉಷ್ಣಾಂಶ ದಾಖಲಾಗಿತ್ತು. ಈವರೆಗೆ ದಾಖಲಾದ ಅತ್ಯಾಧಿಕ ತಾಪಮಾನ ಇದಾಗಿತ್ತು. ಮಾರ್ಚ್ ಮತ್ತು ಏಪ್ರಿಲ್ನಲ್ಲಿ ಗರಿಷ್ಠ ತಾಪಮಾನದಲ್ಲಿ 37-38ರ ಅಸುಪಾಸಿನಲ್ಲಿ ಉಷ್ಣಾಂಶ ದಾಖಲಾಗುತ್ತಿತ್ತು. ವಾಡಿಕೆಯಂತೆ 34-35 ಡಿ.ಸೆ. ದಾಖಲಾಗಬೇಕಿತ್ತು. ಆದರೆ, 41.3 ಡಿ.ಸೆ.ತಾಪಮಾನ ವರದಿಯಾಗಿದ್ದು, ವಾಡಿಕೆಗಿಂತ 7 ಡಿ.ಸೆ. ಹೆಚ್ಚು ಉಷ್ಣಾಂಶ ದಾಖಲಾಗಿದೆ. ಉಷ್ಣಾಂಶ ಹೆಚ್ಚಳ,ಗಾಳಿಯಲ್ಲಿ ತೇವಾಂಶ ಕುಂಠಿತ ಹಿನ್ನೆಲೆಯಲ್ಲಿ ದಿನೇದಿನೆ ತಾಪಮಾನ ಹೆಚ್ಚುತ್ತಿದ್ದು, ನಗರದಲ್ಲಿ ಉತ್ತರ ಕರ್ನಾಟಕದ ಮಾದರಿ ಉರಿ ಬಿಸಿಲು ಕಾಣಿಸಿಕೊಂಡಿದೆ. ಇದರಿಂದಾಗಿ ಬಿಸಿಲಿನ ಝಳಕ್ಕೆ ಜನರು ಥಂಡಾ ಹೊಡೆದಿದ್ದಾರೆ. ಮುಂದಿನ ಐದು ದಿನಗಳ ಕಾಲ ನಗರದಲ್ಲಿ ಇದೇ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ.
ಬೆಂ.ಗ್ರಾಮಾಂತರ ವ್ಯಾಪ್ತಿ ಬರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 41.2 ಡಿ.ಸೆ. ಉಷ್ಣಾಂಶ ದಾಖಲಾಗಿದೆ. ವಾಡಿಕೆಗಿಂತ ಹೆಚ್ಚು ಉಷ್ಣಾಂಶ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ನೂರಾರು ಜನರಿಗೆ ರ್ನಿಜಲೀಕರಣ ಸೇರಿ ಹಲವು ಆರೋಗ್ಯ ಸಮಸ್ಯೆ ಕಾಡುತ್ತಿವೆ. ಊತ, ತಲೆನೋವು, ವಾಕರಿಕೆ, ಸುಸ್ತು, ವಾಂತಿ ಮತ್ತು ಬೆವರು ಸೇರಿ ಇತರೆ ಆರೋಗ್ಯ ಸಮಸ್ಯೆಯಿಂದ ರೋಗಿಗಳು ಆಸ್ಪತ್ರೆಗೆ ದಾಖಲಾಗುವಂತಾಗಿದೆ. ತೀವ್ರವಾದ ಜ್ವರ ಬಂದರೆ ಪ್ರಜ್ಞೆ ಬೀಳುವ ಅಪಾಯ ಜತೆಗೆ ಕೋಮಾಕ್ಕೂ ಹೋಗಬಹುದು. ಹಾಗಾಗಿ, ಜನರು ಎಚ್ಚರವಹಿಸುವುದು ಅಗತ್ಯವಿದೆ.
ಐದು ದಿನಗಳ ಉಷ್ಣಾಂಶ ವಿವರ
ದಿನಾಂಕ ತಾಪಮಾನ
ಏ.26 37.4
ಏ.27 37.4
ಏ.28 38.0
ಏ.29 38.5
ಏ.30 38.5
ಮೇ 1 41.3