40,953 ಎಕರೆ ಪ್ರದೇಶಕ್ಕೆ ನೀರಾವರಿ ಸೌಕರ್ಯ

14 HANUR 1
??????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಹನೂರು: ಕ್ಷೇತ್ರ ವ್ಯಾಪ್ತಿಯ 40,953 ಎಕರೆ ಅಚ್ಚುಕಟ್ಟು ಪ್ರದೇಶಕ್ಕೂ ನೀರಾವರಿ ಸೌಕರ್ಯವನ್ನು ಒದಗಿಸಿ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂಬುದು ನನ್ನ ಮುಖ್ಯ ಧ್ಯೇಯವಾಗಿದೆ ಎಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.

ತಾಲೂಕಿನ ಉದ್ದನೂರು ಸಮೀಪದ ಹುಬ್ಬೆಹುಣಸೆ ಹೊಸಕೆರೆಗೆ ನದಿ ಮೂಲದಿಂದ ನೀರು ತುಂಬಿಸುವ ಸಂಬಂಧ ಭಾನುವಾರ ಕೆರೆ ಆವರಣದಲ್ಲಿ ಆಯೋಜಿಸಿದ್ದ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದರು. ಕ್ಷೇತ್ರ ವ್ಯಾಪ್ತಿಯ ಗುಂಡಾಲ್ ಜಲಾಶಯವು 15 ಸಾವಿರ ಎಕರೆ ಅಚ್ಚಕಟ್ಟು ಪ್ರದೇಶಕ್ಕೆ ನೀರಾವರಿ ಸೌಕರ್ಯ ಒದಗಿಸುವ ಸಾಮರ್ಥ್ಯ ಹೊಂದಿದೆ. ನೀರಿನ ಲಭ್ಯತೆ ಇದ್ದರೂ ನಾಲೆಗಳ ದುರಸ್ತಿಯಿಂದಾಗಿ ಸುಮಾರು 3 ಎಕರೆಗೆ ಮಾತ್ರ ನೀರೊದಗಿಸಲಾಗುತ್ತಿತ್ತು. ಇದರಿಂದ ಬಹುತೇಕ ರೈತರು ನೀರಾವರಿ ಸೌಕರ್ಯದಿಂದ ವಂಚಿತರಾಗಿದ್ದರು. ಇದೀಗ ಡ್ಯಾಂ ಭರ್ತಿಯಾಗಿದ್ದು, ರೈತರು ಪ್ರಯೋಜನ ಪಡೆಯಬಹುದಾಗಿದೆ ಎಂದರು.

ರೈತರಿಗೆ ಸಮರ್ಪಕ ನೀರಾವರಿ ಸೌಕರ್ಯ ಒದಗಿಸುವ ಉದ್ದೇಶದಿಂದ ಡ್ಯಾಂ ಅಭಿವೃದ್ಧಿಗೆ 50 ಕೋಟಿ ರೂ.ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ. ಹಾಗೆಯೇ ನಾಲೆಗಳ ಅಭಿವೃದ್ಧಿಗೆ 80 ಕೋಟಿ ರೂ.ವೆಚ್ಚದಲ್ಲಿ ಕ್ರಿಯಾ ಯೋಜನೆಯನ್ನು ತಯಾರಿಸಿ ಸರ್ಕಾರಕ್ಕೆ ಪ್ರಸ್ತಾಪನೆ ಸಲ್ಲಿಸಲಾಗಿದೆ. ಅನುದಾನ ದೊರೆತ ಕೂಡಲೇ ಕಾರ್ಯರೂಪಕ್ಕೆ ಬರಲಿದೆ. ಇನ್ನು ಕ್ಷೇತ್ರ ವ್ಯಾಪ್ತಿಯಲ್ಲಿ 40,953 ಎಕರೆ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. ಆದರೆ ನೀರಾವರಿ ಸೌಕರ್ಯ ದೊರಕುತ್ತಿರುವುದು 17 ಎಕರೆ ಪ್ರದೇಶಕ್ಕೆ ಮಾತ್ರ. ಆದ್ದರಿಂದ ಎಲ್ಲ ಅಚ್ಚುಕಟ್ಟು ಪ್ರದೇಶಕ್ಕೂ ನೀರಾವರಿ ಸೌಕರ್ಯವನ್ನು ಒದಗಿಸಲು ಈಗಾಗಲೇ ಯೋಜನೆ ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತಂದು ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ನೀರಾವರಿಗಾಗಿ ವಿಸ್ತೃತ ಯೋಜನೆ:

ಕ್ಷೇತ್ರ ವ್ಯಾಪ್ತಿಯ ತೆಳ್ಳನೂರು ಅಚ್ಚುಕಟ್ಟು ಪ್ರದೇಶದಲ್ಲಿ ನೀರಾವರಿಗಾಗಿ ಭೂಮಿ ಸ್ವಾಧೀನ ಸಂಬಂಧ ಪರಿಹಾರ ನೀಡದ ಪರಿಣಾಮ ನಾಲೆಗಳ ಮೂಲಕ ನೀರಾವರಿ ಸೌಕರ್ಯವನ್ನು ಒದಗಿಸಲು ಸಾಧ್ಯವಾಗಿರಲಿಲ್ಲ. ಈ ಬಗ್ಗೆ ಅಗತ್ಯ ಕ್ರಮವಹಿಸಲಾಗಿದೆ. ಇನ್ನು ನದಿ ಮೂಲದಿಂದ ನೀರು ತುಂಬಿಸುವ ಯೋಜನೆಗೆ ಒಳಪಟ್ಟಿದ್ದ ರಾಮನಗುಡ್ಡೆ ಕೆರೆಗೆ ಅಂದಿನ ಅವೈಜ್ಞಾನಿಕ ಪೈಪ್‌ಲೈನ್ ಕಾಮಗಾರಿಯಿಂದಾಗಿ ನೀರು ತುಂಬಿಸಲು ಸಾಧ್ಯವಾಗಿರಲಿಲ್ಲ. ಇದೀಗ 1.57 ಕಿ.ಮೀ ಪೈಪ್‌ಲೈನ್ ಕಾಮಗಾರಿ ಕೈಗೊಂಡು ನೀರು ತುಂಬಿಸಲು ಕ್ರಮವಹಿಸಲಾಗಿದ್ದು, ಪ್ರಕ್ರಿಯೆ ಟೆಂಡರ್ ಹಂತದಲ್ಲಿದೆ. ಸದ್ಯದಲ್ಲೇ ಕಾಮಗಾರಿ ಆರಂಭಿಸಿ ತಿಂಗಳೊಳಗೆ ನೀರು ತುಂಬಿಸಲಾಗುವುದು ಎಂದರು.

ಈ ಭಾಗದ 964 ಎಕರೆ ಪ್ರದೇಶಕ್ಕೂ ನೀರಾವರಿ ಸೌಕರ್ಯ ಒದಗಿಸಲಾಗುವುದು. ಇನ್ನು ಜಮೀನು ಸ್ವಾಧೀನ ಪರಿಹಾರ ಸೇರಿದಂತೆ 9.8 ಕಿ.ಮೀ ಪೈಪ್‌ಲೈನ್ ಕಾಮಗಾರಿ ಕೈಗೊಂಡು ಹುಬ್ಬೆಹುಣಸೆ ಹೊಸಕೆರೆಗೆ ನದಿ ಮೂಲದಿಂದ ನೀರು ತುಂಬಿಸಲು 18 ಕೋಟಿ ರೂ. ಅನುದಾನ ಅಗತ್ಯವಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುದಾನ ದೊರೆತ ಕೂಡಲೇ ಕಾರ್ಯ ಆರಭಿಸಲಾಗುವುದು. ಹಾಗೆಯೇ ಉಡುತೊರೆ ಜಲಾಶಯಕ್ಕೆ ನೀರು ತುಂಬಿಸಲು 330 ಕೋಟಿ ರೂ.ವೆಚ್ಚದಲ್ಲಿ ಮರು ಕ್ರಿಯಾ ಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸಿಎಂ, ಡಿಸಿಎಂ ಗಮನಕ್ಕೆ ತರಲಾಗುವುದು. ಮಿನ್ನುತ್ತು ಹಳ್ಳ ಸೇರಿದಂತೆ ಇನ್ನುಳಿದ ಜಲಾಶಯ ಹಾಗೂ ಕೆರೆಗಳಿಗೆ ನೀರು ತುಂಬಿಸುವ ದಿಸೆಯಲ್ಲಿ ವಿಸ್ತೃತ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಹುಬ್ಬೆಹುಣಸೆ ನೀರಾವರಿ ಯೋಜನೆಯಡಿ ಜಮೀನು ಸ್ವಾಧೀನಕ್ಕೆ ಒಳಗಾದವರಿಗೆ ಸರ್ಕಾರಿದಂದ ಸೂಕ್ತ ಪರಿಹಾರ ದೊರಕಿಸಿ ಕೊಡಬೇಕು. ನಾಲೆಯ ಆಸುಪಾಸು ಒತ್ತುವರಿ ಜಾಗ ತೆರವುಗೊಳಿಸಬೇಕು. ಉದ್ದನೂರು ಕೆರೆಗೆ ನೀರು ತುಂಬಿಸಬೇಕು. ಹನೂರಿನಲ್ಲಿ ತರಕಾರಿ ಮಾರುಕಟ್ಟೆ ಸ್ಥಾಪಿಸಬೇಕು ಎಂದು ರೈತರು ಬೇಡಿಕೆ ಮುಂದಿಟ್ಟರು.

ನೀರಾವರಿ ಇಲಾಖೆಯ ಎಇಇ ರಾಮಕೃಷ್ಣ, ಎಇ ಬಸವೇಶ್, ಚಾಮುಲ್ ನಿರ್ದೇಶಕ ಉದ್ದನೂರು ಪ್ರಸಾದ್, ಗೌತಮ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರವೀಂದ್ರ, ಶಿಕ್ಷಕ ಮಲ್ಲಣ್ಣ, ನಿವೃತ್ತ ಶಿಕ್ಷಕ ಶಿವರಾಜಶೆಟ್ಟಿ, ಮುಖಂಡರಾದ ವಿಜಯಕುಮಾರ್, ಮಾದಪ್ಪ, ರಾಜಶೇಖರಮೂರ್ತಿ, ಗಿರೀಶ್, ಪ್ರಕಾಶ್, ನಿಂಗಶೆಟ್ಟಿ, ರಾಜುಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net