

ಶಿರಸಿ: ರಾಜ್ಯದ 12 ಜಿಲ್ಲೆಗಳಲ್ಲಿ ಬರುವ ದಿನಗಳಲ್ಲಿ 400 ಕಾಲು ಸಂಕ ನಿರ್ಮಾಣ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೋಳಿ ಹೇಳಿದರು.
ಶಾಲಾ ಸಂಪರ್ಕ ಸೇತು ಯೋಜನೆಯಲ್ಲಿ ತಾಲೂಕಿನ ಶಿವಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಹೆಗ್ಗಾರ ಗ್ರಾಮದಲ್ಲಿ ನಿರ್ಮಾಣವಾದ ಕಾಲು ಸಂಕವನ್ನು ಅದರ ಜತೆಗೆ 2021-22 ನೇ ಸಾಲಿನ ಅನುದಾನದಲ್ಲಿ ನಿರ್ಮಾಣವಾದ ಇತರೆಡೆಗಳ ಕಾಲು ಸಂಕಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಲೆನಾಡಿನ ಭಾಗದಲ್ಲಿ ಸಣ್ಣ ತೊರೆಗಳಿಂದ ಮಕ್ಕಳ ಓಡಾಟಕ್ಕೆ ತೊಂದರೆ ಆಗಿರುವುದನ್ನು ಕೇಳಿದ್ದೇನೆ. ಇದರಿಂದ ಜಾರಿಗೆ ತಂದ ಶಾಲಾ ಸಂಪರ್ಕ ಸೇತು ಯೋಜನೆಯಲ್ಲಿ 12 ಜಿಲ್ಲೆಗಳಲ್ಲಿ 485 ಕಾಲು ಸಂಕಗಳನ್ನು ಗುರುತಿಸಲಾಗಿತ್ತು. ಮುಂದಿನ ದಿನದಲ್ಲಿ ಇತರ ಎಲ್ಲ ಕಾಲು ಸಂಕಗಳನ್ನು ಪೂರ್ಣ ಮಾಡಲಾಗುವುದು. ಮುಂದಿನ ಎರಡು ವರ್ಷಗಳಲ್ಲಿ ಜಿಲ್ಲೆಯಲ್ಲಿರುವ ಕಾಲುಸಂಕಗಳ ಸಮಸ್ಯೆ ಗೆ ಸಂಪೂರ್ಣ ಮುಕ್ತಿ ಸಿಗಲಿದೆ ಎಂದರು.
ರಾಜ್ಯದ12ಜಿಲ್ಲೆಯಲ್ಲಿ ಕಾಲು ಸಂಕಗಳ ನಿರ್ಮಾಣ ಕಾಮಗಾರಿ ನಡೆಯಲಿದೆ . ಕಾಲು ಸಂಕ ನಿರ್ಮಾಣ ದಿಂದ ವಿದ್ಯಾರ್ಥಿಗಳಿಗೆ ಬಹಳ ಅನುಕೂಲ ವಾಗಲಿದೆ. ಈಗಾಗಲೇ ಹಲವುಕಡೆ ಟೆಂಡರ್ ಪ್ರಕ್ರಿಯೆ ಮುಗಿದಿದೆ.ಇನ್ನೂ ಕೆಲವು ಕಡೆ ಪ್ರಕ್ರಿಯೆ ನಡೆಯುತ್ತಿದೆ.ಮುಂದಿನ ಮಳೆಗಾಲದೊಳಗೆ ಕಾಮಗಾರಿ ಮುಗಿಸುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ರಾಜ್ಯದಲ್ಲಿ ಎಲ್ಲೆಲ್ಲಿ ಕಾಲುಸಂಕಗಳು ಬೇಕೋ ಎಲ್ಲ ಕಡೆ ಕಾಲು ಸಂಕ ನಿರ್ಮಾಣ ಆಗಲಿದೆ. ಉತ್ತರ ಕನ್ನಡ ಜಿಲ್ಲೆಯ ಬಗ್ಗೆ ಹೆಚ್ಚಿನ ಗಮನ ಹರಿಸುತ್ತೇನೆ. ಮಲೆನಾಡು ಭಾಗದಲ್ಲಿ ರಸ್ತೆ ಸಮಸ್ಯೆ ಸಾಕಷ್ಟಿವೆ.ಐದು ವರ್ಷಗಳ ವರೆಗೆ ಗುತ್ತಿಗೆದಾರರೇ ರಸ್ತೆಯನ್ನು ನಿರ್ವಹಣೆ ಮಾಡಬೇಕು.ರಸ್ತೆ ರಕ್ಷಣೆಗಾಗಿ ಮೈಲುಗೂಲಿ ಗಳನ್ನು ತರಲು ಚಿಂತನೆ ನಡೆಸಲಾಗಿದೆ ಎಂದರು.
ಇದನ್ನೂ ಓದಿ: ರಾಜ್ಯದಲ್ಲಿ ದಲಿತ ಸಿಎಂ ಮಾಡಲು ಇನ್ನೂ ಕಾಲ ಕೂಡಿ ಬಂದಿಲ್ಲ
ಗ್ಯಾರಂಟಿಗೂ ಅಭಿವೃದ್ಧಿಗೂ ಸಂಬಂಧವಿಲ್ಲ. ಹೆಚ್ಚು ಕಾಮಗಾರಿಗಳನ್ನು ಹಿಂದಿನ ಬಿಜೆಪಿ ಸರ್ಕಾರ ನೀಡಿರುವುದರಿಂದ ಬಿಲ್ ಪಾವತಿಗೆ ವಿಳಂಬ ವಾಗುತ್ತಿದೆ. ಆದಷ್ಟು ಬೇಗ ಬಿಲ್ ಪಾವತಿ ಮಾಡಲಾಗುವುದು. ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ವಿಶೇಷ ಗಮನ ಹರಿಸಲಾಗುವುದು ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮಾತನಾಡಿ, 100ಕಾಲು ಸಂಕಗಳಲ್ಲಿ 21ಕಾಲು ಕಾಲುಸಂಕಗಳನ್ನು ನಮ್ಮ ಜಿಲ್ಲೆಯಲ್ಲಿ ನಿರ್ಮಾಣ ಮಾಡಲಾಗಿದೆ. ಶಾಲಾ ವಿದ್ಯಾರ್ಥಿಗಳು ಅನುಕೂಲವಾಗುವ ಉದ್ದೆಶದಿಂದ ಈ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದರು.
ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಮಳೆಗಾಲದಲ್ಲಿ ಹಳ್ಳ ತುಂಬಿ ಹರಿಯುವಾಗ ಶಾಲಾ ಮಕ್ಕಳಿಗೆ ಶಾಲೆಗೆ ಬರಲು ತೊಂದರೆ ಆಗುತ್ತಿತ್ತು.ಇನ್ನುಮುಂದೆ ಅಂತಹ ಸಮಸ್ಯೆ ಗಳು ರಾಜ್ಯದಲ್ಲಿ ಆಗಬಾರದು ಎಂಬ ಉದ್ದೇಶದಿಂದ 100ಕಾಲು ಸಂಕಗಳ ನಿರ್ಮಾಣ ಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ.ಸಿದ್ದಾಪುರ ತಾಲೂಕಿನಲ್ಲಿ 10ಕಾಲು ಸಂಕಗಳ ನಿರ್ಮಾಣ ಆಗಲಿದೆ. ಗ್ರಾಮೀಣ ಭಾಗದಲ್ಲಿ ರಸ್ತೆ, ಹಾಗೂ ಸೇತುವೆ ಗಳ ಅಗತ್ಯತೆ ಇದೆ.ಮುಂದಿನ ದಿನಗಳಲ್ಲಿ ಅನುದಾನ ನೀಡಬೇಕು ಎಂದು ಸಚಿವರಲ್ಲಿ ವಿನಂತಿಸಿದರು. ಕಾರವಾರ ಶಾಸಕ ಸತೀಶ್ ಸೈಲ್, ಹೆಚ್. ಸುರೇಶ್,ಸಂಜೀವ ಕುಮಾರ, ಡಿಡಿಪಿಐ. ಪಿ. ಬಸವರಾಜ, ಶಿವಳ್ಳಿ ಗ್ರಾ ಪಂ ಅಧ್ಯಕ್ಷೆ ರೇಣುಕಾ ಗಣಪತಿ ಹರಿಜನ ಇದ್ದರು.