

ಪಾಂಡವಪುರ: ತಾಲೂಕಿನ ಕೆನ್ನಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ನಿವಾಸಿಗಳಿಗೆ ಸರ್ಕಾರಿ ಸೇವೆಗಳನ್ನು ಮನೆ ಬಾಗಿಲಿಗೆ ಒದಗಿಸುವ ನಿಟ್ಟಿನಲ್ಲಿ ಆಯೋಜಿಸಿರುವ ‘ಸರ್ಕಾರಿ ಸೇವೆಗಳು ನಿಮ್ಮನೆ ಬಾಗಿಲಿಗೆ’ ಇದು ಸೇವೆಯಲ್ಲ, ನಮ್ಮ ಕರ್ತವ್ಯ ಕಾರ್ಯಕ್ರಮದಲ್ಲಿ ಈವರೆಗೂ ವಿವಿಧ ಸೇವೆಗಳಿಗಾಗಿ 400ಕ್ಕೂ ಹೆಚ್ಚು ಅರ್ಜಿಗಳು ಸ್ವೀಕಾರವಾಗಿದ್ದು, ಕೆಲ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗಿದೆ.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಲಹೆಯಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಂಗಳವಾರವೂ ಕಾರ್ಯಕ್ರಮ ಮುಂದುವರಿದಿದ್ದು, ತಾಲೂಕು ಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು ಭಾಗಿಯಾಗಿ ಜನರಿಗೆ ಅಗತ್ಯವಿರುವ ಸೇವೆಗಳನ್ನು ನೋಂದಣಿ ಮಾಡಿಕೊಂಡು ಸೇವೆಗಳನ್ನು ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಶನಿವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಡಿ ಸ್ವೀಕರಿಸಲಾದ ಅರ್ಜಿಗಳನ್ನು ಹೊರತುಪಡಿಸಿ 400ಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತವಾಗಿವೆ. ಕೆಲ ಕ್ಲಿಷ್ಟಕರ ಸಮಸ್ಯೆಗಳಿಗೂ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿರುವುದು ಈ ಭಾಗದ ನಿವಾಸಿಗಳಲ್ಲಿ ಸಂತಸ ತಂದಿದೆ.
ರಸ್ತೆ, ಕೆರೆ ಜಮೀನು, ಪೌತಿ ಖಾತೆ, ಸರ್ಕಾರಿ ನಿವೇಶನ ಅತಿಕ್ರಮಣ, ಗೋಮಾಳ, ಖರಾಬು ಇತ್ಯಾದಿಗಳನ್ನು ಸರ್ವೇ ಮಾಡಿ ಗಡಿ ಗುರುತಿಸುವಿಕೆ ಸೇರಿದಂತೆ ಸೆಸ್ಕ್ ಇಲಾಖೆಯಿಂದ ಶಿಥಿಲಗೊಂಡ ವಿದ್ಯುತ್ ಕಂಬಗಳ ತೆರವು, ಜೋತು ಬಿದ್ದ ವಿದ್ಯುತ್ ತಂತಿ ಬದಲಾವಣೆ, ಅಗತ್ಯವಿರುವ ಕಡೆಗಳಲ್ಲಿ ವಿದ್ಯುತ್ ಪರಿವರ್ತಕ ಅಳವಡಿಕೆ ಕಾರ್ಯಗಳು ನಡೆಯುತ್ತಿದೆ. ತೋಟಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆಯಿಂದ ಸರ್ಕಾರದಿಂದ ಸಿಗಬಹುದಾದ ಸವಲತ್ತುಗಳು, ಕೃಷಿ ಯಂತ್ರೋಪಕರಣಗಳು ಖರೀದಿ ಮತ್ತು ಇತರ ವಿಚಾರಗಳ ಮಾಹಿತಿ ಒದಗಿಸಲಾಗುತ್ತಿದೆ. ಅಂಗನವಾಡಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಕುಟುಂಬಗಳಿಗೆ ಅಗತ್ಯವಿರುವ ಸೌಲಭ್ಯಗಳ ಮಾಹಿತಿ ಪಡೆದುಕೊಂಡು ಆ ಮಾಹಿತಿ ಆಧಾರದ ಮೇಲೆ ಸೇವೆಗಳನ್ನು ಒದಗಿಸಲಾಗುತ್ತಿದೆ.
ಜನರಿಂದ ಅಹವಾಲು ಸ್ವೀಕರಿಸಿದ ಬಳಿಕ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಜನರಿಗೆ ಕಾರ್ಯಕ್ರಮದ ಬಗ್ಗೆ ಗೊಂದಲವಿದೆ. ಇದಕ್ಕಾಗಿಯೇ ಪೂರ್ಣ ಪ್ರಮಾಣದಲ್ಲಿ ತಯಾರಿ ಮಾಡಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ಅಧಿಕಾರಿ ವರ್ಗ ಶ್ರಮಿಸುತ್ತಿದೆ. ಸರ್ವೇ ಕೆಲಸಕ್ಕೆ ಸೇರಿದಂತೆ ಎರಡು ತಂಡಗಳನ್ನು ಸಿದ್ಧ ಮಾಡಿಕೊಳ್ಳಲಾಗಿದೆ. ಒಂದು ತಂಡ ರಸ್ತೆ, ಗೋಮಾಳ ಮತ್ತು ಇತರ ಸರ್ಕಾರಿ ಜಾಗಗಳನ್ನು ಗುರುತಿಸಿ ಸರ್ವೇ ಕಾರ್ಯ ಮಾಡುತ್ತಿದೆ. ಜನರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಮತ್ತೊಂದು ತಂಡ ಗ್ರಾಮ ಠಾಣಾ ಹೆಚ್ಚಿಸಲು ಕೆಲಸ ಮಾಡುತ್ತಿದೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರು ನೀಡುವ ಮಾಹಿತಿ ಆಧಾರದ ಮೇಲೆ ಖಾತೆ, ಪೌತಿ ಖಾತೆ, ಜಾತಿ ಮತ್ತು ಆದಾಯ ದೃಢೀಕರಣ ಪತ್ರ, ಪಹಣಿ ತಿದ್ದುಪಡಿ, ಪೋಡು, ದುರಸ್ತು ಕೆಲಸಗಳನ್ನು ಅಧಿಕಾರಿಗಳು ನಿರ್ವಹಿಸುತ್ತಿದ್ದಾರೆ. ಸಮಸ್ಯೆ ಮತ್ತು ಗೊಂದಲವಿರುವ ಪ್ರಕರಣಗಳನ್ನು ಗ್ರಾಮದ ಮುಖಂಡರ ಸಮ್ಮುಖದಲ್ಲಿ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುತ್ತಿದೆ. ಇದರಲ್ಲಿ ಸಫಲತೆ ಕೂಡ ಕಂಡಿದ್ದೇವೆ. ಪ್ರತಿ ಮನೆಗೂ ನೀರು ಒದಗಿಸುವ ಕೆಲಸ ಮಾಡಲಾಗುತ್ತಿದೆ. ಒಂದು ಕೆಲಸಕ್ಕೆ ಕಚೇರಿಗೆ ಹೋಗಿದ್ದರೆ ಮೂರ‌್ನಾಲ್ಕು ತಿಂಗಳು ಆಗುತ್ತಿತ್ತು. ಆದರೆ, ಇಲ್ಲಿ ಒಂದೇ ದಿನದಲ್ಲಿ ಆಗಿದೆ. ಎಲ್ಲ ಇಲಾಖೆ ಅಧಿಕಾರಿಗಳು ಒಂದೇ ಸ್ಥಳದಲ್ಲಿರುವುದರಿಂದ ಈ ಕೆಲಸ ಸಾಧ್ಯವಾಗಿದೆ. ಈ ಕಾರ್ಯಕ್ರಮದಿಂದ ಅನುಭವ ಸಿಕ್ಕಿದ್ದು, ಮುಂದಿನ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡಲು ಅನುಕೂಲವಾಗಲಿದೆ ಎಂದರು.
ತಹಸೀಲ್ದಾರ್ ಜಿ.ಎಸ್.ಶ್ರೇಯಸ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಟಿ.ಎಸ್.ಮಂಜುನಾಥ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಸೌಮ್ಯಾ, ಸಿಡಿಪಿಒ ಪೂರ್ಣಿಮಾ, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.