

ಮೂಡುಬಿದಿರೆ: ಗ್ಯಾರೇಜ್ ಮಾಲೀಕರು ತಮ್ಮ ವೃತ್ತಿ ಬದುಕಿನ ಜತೆಗೆ ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದೇವೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಅದರ ಅಂಗವಾಗಿ ಗಾಂಧಿನಗರ ಶಾಲೆಗೆ ಕೊಡುಗೆ ನೀಡಿದ್ದೇವೆ ಎಂದು ಗ್ಯಾರೇಜ್ ಮಾಲೀಕರ ಸಂಘದ ಅಧ್ಯಕ್ಷ ಗುರುಪ್ರಸಾದ್ ಹೇಳಿದರು.
ಮೂಡುಬಿದಿರೆ ವಲಯ ಗ್ಯಾರೇಜ್ ಮಾಲೀಕ ಸಂಘದಿಂದ ಗಾಂಧಿನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 40 ಕುರ್ಚಿ ಕೊಡುಗೆ ನೀಡಿ ಮಾತನಾಡಿದರು.
ಸರ್ಕಾರದಿಂದ ಕೊಡಮಾಡಿದ ಶೂ-ಸಾಕ್ಸ್‌ಗಳನ್ನು ಪುರಸಭೆ ಸದಸ್ಯೆ ದಿವ್ಯಾ ಜಗದೀಶ್ ವಿದ್ಯಾರ್ಥಿಗಳಿಗೆ ವಿತರಿಸಿದರು. ಸಂಘದ ಕೋಶಾಧಿಕಾರಿ ಶಂಕರ್ ಕೋಟ್ಯಾನ್, ಎಸ್‌ಡಿಎಂಸಿ ಉಪಾಧ್ಯಕ್ಷ ಯಶೋದರ ಪ್ರಸ್ತಾವನೆಗೈದರು. ಸಂಘದ ಉಪಾಧ್ಯಕ್ಷ ನಿತ್ಯಾನಂದ ಸಾಲ್ಯಾನ್, ಸಂಘಟನಾ ಕಾರ್ಯದರ್ಶಿ ಪ್ರಕಾಶ್ ಅಮೀನ್, ಎಸ್‌ಡಿಎಂಸಿ ಅಧ್ಯಕ್ಷೆ ಸುನೀತಾ ಶೆಟ್ಟಿ, ಮುಖ್ಯಶಿಕ್ಷಕಿ ಕಸ್ತೂರಿ ಎಚ್., ಶಿಕ್ಷಕಿಯರಾದ ಭವ್ಯಾ, ಸುಪ್ರಿತಾ, ಅಕ್ಷತಾ ಉಪಸ್ಥಿತರಿದ್ದರು.
ಶ್ರಮಿಕ ವರ್ಗದವರ ಗ್ಯಾರೇಜ್ ಮಾಲೀಕರು ತಮ್ಮ ದುಡಿಮೆಯಲ್ಲಿ ಉಳಿಸಿದ ಹಣವನ್ನು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮುಡಿಪಾಗಿಟ್ಟಿರುವುದು ಶ್ಲಾಘನೀಯ. ಅವರ ಈ ಪ್ರಯತ್ನಗಳು ವ್ಯರ್ಥವಾಗಬಾರದು. ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಸರ್ಕಾರಿ ಶಾಲೆ ಉಳಿಸುವುದು ಮಾತ್ರವಲ್ಲ, ದಾನಿಗಳ ನೆರವು ಸಾರ್ಥಕಗೊಳಿಸಬೇಕು. ಯಶೋಧರ, ಎಸ್‌ಡಿಎಂಸಿ ಉಪಾಧ್ಯಕ್ಷ