ನಲಿಕೆ ಸಮುದಾಯದ ಕಡೆಗಣನೆ : ಮುನ್ನೂರು ಗ್ರಾಪಂ ಅಧಿಕಾರಿಗಳ ವಿರುದ್ಧ ಆಕ್ರೋಶ : ಸ್ಪೀಕರ್ ಸುತ್ತುವರಿದು ಅಸಮಾಧಾನ

03
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಕುತ್ತಾರು ಸಮೀಪದ ದೇವಿಪುರದಲ್ಲಿ ನಿರ್ಮಾಣಗೊಂಡ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ಭೀಮ ಸೌಧದ ಉದ್ಘಾಟನೆ ಶನಿವಾರ ಸ್ಪೀಕರ್ ಯು.ಟಿ.ಖಾದರ್ ನಡೆಸಿದರು. ಈ ಸಂದರ್ಭ ಅಧಿಕಾರಿಗಳು ನಲಿಕೆ ಸಮುದಾಯವನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಆರೋಪಿಸಿ ಸ್ಪೀಕರ್ ಅವರನ್ನು ಸುತ್ತುವರಿದು ಅಸಮಾಧಾನ ವ್ಯಕ್ತಪಡಿಸಲಾಯಿತು.

ದೇವಿಪುರದ ನಲಿಕೆ ಸಮುದಾಯಕ್ಕೆ ಸೇರಿದ ಜಾಗದಲ್ಲಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಿಸಲಾಗಿದ್ದು, ನಿರ್ವಹಣೆ ಜವಾಬ್ದಾರಿ ನಲಿಕೆ ಸಮುದಾಯಕ್ಕೆ ನೀಡಬೇಕು. ಆದರೆ ಮುನ್ನೂರು ಗ್ರಾಪಂ ಆಡಳಿತ ನಲಿಕೆ ಸಮುದಾಯವನ್ನು ಗಣನೆಗೆ ತೆಗೆದುಕೊಳ್ಳದೆ ಭವನ ಉದ್ಘಾಟನಾ ಸಮಾರಂಭ ಏರ್ಪಡಿಸಿದೆ ಎಂದು ಪಂಚಾಯಿತಿ ವಿರುದ್ಧ ದೂರು ನೀಡಿದರು.

ಪಿಡಿಒ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮ ಆಯೋಜಿಸಬೇಕು. ಸ್ಥಳೀಯರೇ ಸಮುದಾಯ ಭವನದ ನಿರ್ವಹಣೆ ವಹಿಸಿದರೆ ಮುಂದೆ ಕಟ್ಟಡ ದುರಸ್ತಿಗೆ ಸಮಸ್ಯೆಯಾಗುತ್ತದೆ. ನಿಮ್ಮಲ್ಲೇ ಎರಡು ಗುಂಪುಗಳಾದರೆ ಮತ್ತೆ ಕಟ್ಟಡದ ನಿರ್ವಹಣೆ ಕಷ್ಟ. ಕಟ್ಟಡ ಪಂಚಾಯಿತಿ ಸುಪರ್ದಿಯಲ್ಲಿದ್ದರೆ ಎಲ್ಲ ನಿರ್ವಹಣೆ ಪಂಚಾಯಿತಿಯೇ ನೋಡಿಕೊಳ್ಳುತ್ತದೆ ಎಂದು ಖಾದರ್ ಹೇಳಿದರು. ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಹಿರಿಯ ದೈವ ನರ್ತಕ ಮಾಯಿಲ, ರಾಣಿಪುರ ಚರ್ಚ್ ಧರ್ಮಗುರು ಫಾ.ಜಯಪ್ರಕಾಶ್ ಡಿಸೋಜ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಮತಾ ಡಿ.ಎಸ್.ಗಟ್ಟಿ, ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್, ಮುನ್ನೂರು ಗ್ರಾಪಂ ಅಧ್ಯಕ್ಷೆ ರೆಹನಾ ಬಾನು, ಉಪಾಧ್ಯಕ್ಷ ಮಹಾಬಲ ಟಿ.ದೆಪ್ಪೆಲಿಮಾರ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಡೆ ವಿನಾಯಕ ಕಾರ್ಬಾರಿ, ಜಿಪಂ ಯೋಜನಾ ನಿರ್ದೇಶಕ ಜಯರಾಮ್, ಉಳ್ಳಾಲ ತಾಪಂ ಕಾರ್ಯನಿರ್ವಹಣಾಧಿಕಾರಿ ಗುರುದತ್, ಸ್ಥಳೀಯ ಮುಖಂಡ ಮಾದಪ್ಪ, ಗ್ರಾಪಂ ಸದಸ್ಯರಾದ ಬಾಬು ಶೆಟ್ಟಿ, ಲೀಲಾವತಿ, ಸುರೇಖ, ತಾಪಂ ಮಾಜಿ ಸದಸ್ಯೆ ವಿಲ್ಮಾ ಡಿಸೋಜ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಜಾನಪದ ಕಲಾವಿದೆ ತಿಮ್ಮಕ್ಕ, ಮಾಜಿ ಜಿಪಂ ಸದಸ್ಯರಾದ ಧನಲಕ್ಷ್ಮೀ ಗಟ್ಟಿ, ಮುನ್ನೂರು ಗ್ರಾಪಂ ಮಾಜಿ ಅಧ್ಯಕ್ಷ ವಿಲ್ರೈಡ್ ಡಿಸೋಜ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ರಫೀಕ್ ಅಂಬ್ಲಮೊಗರು ಮೊದಲಾದವರು ಉಪಸ್ಥಿತರಿದ್ದರು. ಪಿಡಿಒ ಶ್ರೀಕಾಂತ್ ಸಿಂಪಿಗೇರ ಸ್ವಾಗತಿಸಿದರು. ಮುಸ್ತಾಫ ಪ್ರಸ್ತಾವಿಕವಾಗಿ ಮಾತನಾಡಿದರು.

ಕಾನೂನು ರೀತಿಯಲ್ಲೇ ನಿರ್ವಹಣೆ

ಯಾರಿಗೂ ಅನ್ಯಾಯವಾಗಲು ಬಿಡದೆ ಕಾನೂನು ರೀತಿಯಲ್ಲೇ ಸಮುದಾಯ ಭವನದ ನಿರ್ವಹಣೆ ನಡೆಸಲಾಗುವುದು. ಸ್ಥಳೀಯ ನಲಿಕೆ ಸಮುದಾಯದವರ ದೈವ ನರ್ತನ ಸಂಬಂಧಿ ಸಾಮಗ್ರಿ ಇಡಲು ಶೀಘ್ರ ಕಟ್ಟಡದ ಮೇಲೆ ಸಿಲಿಕಾನ್ ಶೀಟ್ ಛಾವಣಿ ಅಳವಡಿಸಲಾಗುವುದು ಎಂದು ಖಾದರ್ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net