

ಬೆಂಗಳೂರು: ನಿಯಮ ಮೀರಿ ಚಿನ್ನದ ಮೇಲೆ 19.03 ಕೋಟಿ ರೂ. ಸಾಲ ಮಂಜೂರು ಪ್ರಕರಣ ಸಂಬಂಧ ಬ್ಯಾಂಕ್ ಆಫ್ ಬರೋಡಾ ವ್ಯವಸ್ಥಾಪಕ ಮತ್ತು ಇತರರಿಗೆ ಸೇರಿದ 4.83 ಕೋಟಿ ರೂ. ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಜಪ್ತಿ ಮಾಡಿದೆ.
ಬ್ಯಾಂಕ್ ಆಫ್ ಬರೋಡಾದ (ಬಿಒಬಿ) ಕೆಂಗೇರಿ ಶಾಖೆ ಮಾಜಿ ಹಿರಿಯ ವ್ಯವಸ್ಥಾಪಕ ಟಿ.ಎಲ್. ಪ್ರವೀಣ್ ಕುಮಾರ್ ಮತ್ತು ಶ್ರೀ ಗೋಕುಲಂ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಎಸ್.ಕೆ. ಸುಬ್ರಮಣ್ಯ ರೆಡ್ಡಿ ಸೇರಿ ಇನ್ನಿತರರ ವಿರುದ್ಧ ಬಿಒಬಿ ಪ್ರಾದೇಶಿಕ ಕಚೇರಿ ಸಹಾಯಕ ವ್ಯವಸ್ಥಾಪಕ ಲಲಿತ್ ತ್ಯಾಗಿ ಎಂಬುವರು ಸಿಬಿಐಗೆ ದೂರು ನೀಡಿದ್ದರು.
2017ರ ಡಿ.13ರಿಂದ 2018ರ ಜು.7ರ ನಡುವೆ ಬಿಒಬಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರವೀಣ್, ಸುಬ್ರಮಣ್ಯ ರೆಡ್ಡಿ ಜತೆ ಸೇರಿ 57 ಜನರಿಗೆ ಒಟ್ಟು 19.03 ಕೋಟಿ ರೂ. ಮೊತ್ತದ 186 ಚಿನ್ನದ ಸಾಲ ಮಂಜೂರು ಮಾಡಿದ್ದರು. 10 ಲಕ್ಷ ರೂ. ವರೆಗಿನ ಸಾಲ ಮಂಜೂರು ಮಾಡುವ ಅಧಿಕಾರ ಹೊಂದಿದ್ದ ಪ್ರವೀಣ್, ಬ್ಯಾಂಕ್ ನಿಯಮ ಉಲ್ಲಂಸಿ 44 ಖಾತೆಗಳಿಗೆ ಸಾಲ ನೀಡಿದ್ದರು. ಬ್ಯಾಂಕ್‌ನ ಉನ್ನತ ಅಧಿಕಾರಿಗಳ ನಕಲಿ ಸಹಿ ಮಾಡಿದ್ದರು.
ಸುಬ್ರಮಣ್ಯ ರೆಡ್ಡಿ, ಸಾಲಗಾರರು, ಗ್ಯಾರಂಟಿದಾರರು ಮತ್ತು ಇತರ ವ್ಯಕ್ತಿಗಳ ಜತೆ ಒಳಸಂಚು ರೂಪಿಸಿ ಪ್ರವೀಣ್, 186 ಚಿನ್ನದ ಸಾಲ ಮಂಜೂರು ಮಾಡಿ ಬ್ಯಾಂಕಿಗೆ ನಷ್ಟ ಉಂಟು ಮಾಡಿದ್ದರು. ಈ ಕುರಿತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಮತ್ತು ವಂಚನೆ ಆರೋಪದಡಿ ಸಿಬಿಐ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಅಕ್ರಮ ಹಣ ವಹಿವಾಟು ಆರೋಪದ ಮೇಲೆ ಇದೀಗ ಇಡಿ ಅಧಿಕಾರಿಗಳು ಆರೋಪಿತರ 4.83 ಕೋಟಿ ರೂ. ಮೌಲ್ಯದ ಸ್ಥಿರಾ ಮತ್ತು ಚರಾಸ್ತಿಯನ್ನು ಜಪ್ತಿ ಮಾಡಿದ್ದಾರೆ.