

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯುತ್ತಿರುವ 26ನೇ ವರ್ಷದ ಭಜನಾ ಕಮ್ಮಟದ 3ನೇ ದಿನದ ಕಾರ್ಯಕ್ರಮದಲ್ಲಿ ಮಣಿಪಾಲದ ಸಂಗೀತ ವಿದುಷಿ ಉಷಾ ಹೆಬ್ಬಾರ್ ಹಾಗೂ ಮಣಿಪಾಲದ ಆಕಾಶವಾಣಿ ಎ ಗ್ರೇಡ್ ಕಲಾವಿದ ಕೆ.ಆರ್.ರಾಘವೇಂದ್ರ ಭಜನಾ ತರಬೇತಿ ನೀಡಿದರು.
ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಧಾರ್ಮಿಕ ಉಪನ್ಯಾಸ ನೀಡಿ, ಭಗವಂತನ ಅನುಗ್ರಹಕ್ಕೆ ಪಾತ್ರರಾಗಲು ಅತ್ಯಂತ ಸರಳ ಹಾಗೂ ಸುಲಭ ಮಾಧ್ಯಮ ಭಜನೆ. ಭಜನಾ ಮಂದಿರಗಳು ಧರ್ಮ ಮತ್ತು ಸಂಸ್ಕೃತಿಯ ಪ್ರಭಾವದೊಂದಿಗೆ ಧಾರ್ಮಿಕ ಚಿಂತನ-ಮಂಥನ, ಸತ್ಸಂಗ ಹಾಗೂ ಸಾಮೂಹಿಕ ಆಚರಣೆಗಳ ಕೇಂದ್ರಗಳಾಗಬೇಕು. ಭಜನೆ ಜನತಾ ವೇದವಾಗಿದ್ದು ಮನ, ವಚನ, ಕಾಯದಿಂದ ಪರಿಶುದ್ಧರಾಗಿ ಶ್ರದ್ಧಾ-ಭಕ್ತಿಯಿಂದ ಭಜನೆ ಮಾಡಿದರೆ ಪರಮಾತ್ಮನ ಸಾಕ್ಷಾತ್ಕಾರ ಸಾಧ್ಯವಾಗುತ್ತದೆ ಎಂದರು.
ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ.ಹೆಗ್ಗಡೆ, ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಶಿಬಿರಾರ್ಥಿಗಳನ್ನು ಅನುಗ್ರಹಿಸಿದರು. ಧರ್ಮಸ್ಥಳ ರಂಗಶಿವ ಕಲಾಬಳಗದಿಂದ ರಂಗಗೀತೆ ಹಾಗೂ ವಿವಿಧ ಗೀತೆಗಳ ಪ್ರಾತ್ಯಕ್ಷಿಕೆ ನಡೆಯಿತು. ಯೋಗ ತರಬೇತಿಯನ್ನು ಡಾ.ಐ.ಶಶಿಕಾಂತ್ ಜೈನ್ ನಡೆಸಿಕೊಟ್ಟರು.
ಭಜನಾ ಕಮ್ಮಟದ ರಾಜ್ಯ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್, ಕಾರ್ಯದರ್ಶಿ ಎ.ವೀರು ಶೆಟ್ಟಿ, ಕೋಶಾಧಿಕಾರಿ ಧನ್ಯಕುಮಾರ್, ಸದಸ್ಯರಾದ ಶ್ರೀನಿವಾಸರಾವ್, ರತ್ನವರ್ಮ ಜೈನ್ ಸಂಘಟಿಸಿದರು. ಶ್ರೀಜಾ ಕಾರ್ಯಕ್ರಮ ನಿರೂಪಿಸಿದರು.
ಭಜನಾ ಪರಿಷತ್ ಅಧ್ಯಕ್ಷ ಚಂದ್ರಶೇಖರ ಸಾಲ್ಯಾನ್, ಉಪಾಧ್ಯಕ್ಷ ರಾಜೇಂದ್ರ ಕುಮಾರ್, ಸದಸ್ಯರಾದ ವಸಂತ್ ಭಟ್, ಮಹಾವೀರ ಅಜ್ರಿ, ಸೀತಾರಾಮ ತೋಳ್ಪಾಡಿತ್ತಾಯ, ಪದ್ಮರಾಜ್ ಜೈನ್ ಸಹಕರಿಸಿದರು. ಕುಣಿತ ಭಜನೆ ತರಬೇತಿಯನ್ನು ಸಂದೇಶ, ವಿನ್ಯಾಸ್, ನಾಗೇಶ್ ಹಾಗೂ ಚೈತ್ರಾ ನಡೆಸಿಕೊಟ್ಟರು. ಸಮನ್ವಯ ಅಧಿಕಾರಿಗಳಾದ ರಾಘವೇಂದ್ರ ಮತ್ತು ಸಂತೋಷ್ ಪಿ. ಕರ್ತವ್ಯ ನಿರ್ವಹಿಸಿದರು.
ಭಜನೆ ಭಕ್ತಿಯ ಪ್ರಧಾನ ಸಾಧನವಾಗಿದ್ದು, ಶಿಸ್ತುಬದ್ಧವಾಗಿ ರಾಗ, ತಾಳ, ಲಯಬದ್ಧವಾಗಿ ಭಜನೆ ಹಾಡಲು ಕಲಿಸುವುದೇ ಭಜನಾ ತರಬೇತಿಯ ಉದ್ದೇಶ. ಭಜನೆಯ ಮೂಲಕ ಧಾರ್ಮಿಕ ಅಂತ್ಯೋದಯದಿಂದ ಧಾರ್ಮಿಕ ಸರ್ವೋದಯವಾಗಬೇಕು. ಭಜನಾಪಟುಗಳೆಲ್ಲ ಧಾರ್ಮಿಕ ಯೋಧರಾಗಿ, ಧರ್ಮ ಮತ್ತು ಸಂಸ್ಕೃತಿಯ ವಕ್ತಾರರಾಗಬೇಕು, ರಾಯಭಾರಿಗಳಾಗಬೇಕು. - ಉಜಿರೆ ಅಶೋಕ ಭಟ್, ಹವ್ಯಾಸಿ ಯಕ್ಷಗಾನ ಕಲಾವಿದ