

ಶಶಿ ಕುತ್ಯಾಳ ಈಶ್ವರಮಂಗಲ
ದಕ್ಷಿಣ ಭಾರತದ ಏಕೈಕ ಬಿಸಿನೀರಿನ ಚಿಲುಮೆ ಎಂದೇ ಖ್ಯಾತಿ ಪಡೆದಿದ್ದ ಮತ್ತು ಪ್ರಸ್ತುತ ತಣ್ಣೀರ ಗುಂಡಿಯಾಗಿ ಪರಿವರ್ತನೆಗೊಂಡು ಪಾಳುಬಿದ್ದಿರುವ ಪುತ್ತೂರು ತಾಲೂಕಿನ ಇರ್ದೆ ಗ್ರಾಮದ ‘ಬೆಂದ್ರ್‌ತೀರ್ಥ’ ಪ್ರವಾಸಿ ತಾಣವನ್ನು ಪುನಶ್ಚೇತನಗೊಳಿಸುವ ಜತೆಗೆ ದಶಕದ ಹಿಂದೆ ನಿರ್ಮಿಸಲಾಗಿರುವ ‘ಅತಿಥಿ ಗೃಹ’ಕ್ಕೆ ಕಾಯಕಲ್ಪ ನೀಡಬೇಕಾಗಿದೆ.
ಇರ್ದೆ ಸೀರೆ ಹೊಳೆ ಬದಿಯಲ್ಲಿ ಈ ಬೆಂದ್ರ್‌ತೀರ್ಥ ತಾಣವಿದೆ. ಕೆಲವು ವರ್ಷಗಳ ಹಿಂದೆ ಬೆಂದ್ರ್‌ತೀರ್ಥ ಪುಷ್ಕರಿಣಿ(ಗುಂಡಿ)ಯಲ್ಲಿ ಗಂಟೆಗೆ 1350ರಿಂದ 4600 ಲೀಟರ್‌ನಷ್ಟು ಬಿಸಿ ನೀರು ಚಿಮ್ಮುತ್ತಿತ್ತು. ಗುಂಡಿಯಲ್ಲಿ ಸದಾ ಬಿಸಿ ನೀರಿನ ಗುಳ್ಳೆಗಳು ಪುಟಿದೇಳುತ್ತಿದ್ದವು. ಅಲ್ಲಿನ ಬಿಸಿ ನೀರಿನ ಉಷ್ಣಾಂಶ 99ರಿಂದ 106 ಡಿಗ್ರಿ ಫ್ಯಾರನ್ ಹೀಟ್ ಇತ್ತು. ಬಹಳಷ್ಟು ಮಂದಿ ಇಲ್ಲಿಗೆ ಬಂದು ಬಿಸಿ ನೀರಿನ ಸ್ನಾನ ಮಾಡುತ್ತಿದ್ದರು. ಅಮರನಾಥ ಶೆಟ್ಟಿ ಪ್ರವಾಸೋದ್ಯಮ ಇಲಾಖೆ ಸಚಿವರಾಗಿದ್ದ ಅವಧಿಯಲ್ಲಿ ಬೆಂದ್ರ್‌ತೀರ್ಥವನ್ನು ಪ್ರವಾಸಿತಾಣವನ್ನಾಗಿಸುವ ಪ್ರಯತ್ನ ನಡೆದಿತ್ತು.
ಬೆಂದ್ರ್‌ತೀರ್ಥ ತಾಣಕ್ಕೆ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸ್ಥಳೀಯ ಪ್ರಮುಖರು ಸೇರಿಕೊಂಡು ಅಭಿವೃದ್ಧಿ ಸಮಿತಿ ರಚಿಸಿಕೊಂಡು, ಸಮಿತಿ ಮೂಲಕ ಹಲವು ವ್ಯವಸ್ಥೆಗಳನ್ನು ಮಾಡಿದ್ದರು. ಬೆಂದ್ರ್‌ತೀರ್ಥ ಗುಂಡಿಯ ಸುತ್ತಲೂ ಮೆಟ್ಟಿಲು, ಕೈತೋಟ ನಿರ್ಮಿಸಿ ಆಕರ್ಷಣೀಯಗೊಳಿಸಲಾಗಿತ್ತು. ಮಹಿಳೆಯರಿಗೆ ಹಾಗೂ ಪುರುಷರಿಗೆ ಬಟ್ಟೆ ಬದಲಾಯಿಸಲು ಪ್ರತ್ಯೇಕ ಎರಡು ಕೋಣೆ ಹಾಗೂ ವಿಶ್ರಾಂತಿ ಕೊಠಡಿಯನ್ನು ನಿರ್ಮಿಸಲಾಗಿತ್ತು.
ಇತ್ತೀಚಿನ ವರ್ಷಗಳಲ್ಲಿ ಸ್ಥಳೀಯ ಕೃಷಿಕರು ಕೃಷಿ ಬಳಕೆಗಾಗಿ ಕೊಳವೆ ಬಾವಿ ಕೊರೆಯಲು ಆರಂಭಿಸಿದ ಬಳಿಕ ಬೆಂದ್ರ್‌ತೀರ್ಥ ಗುಂಡಿಯಲ್ಲಿ ಪುಟಿದೇಳುತ್ತಿದ್ದ ಬಿಸಿನೀರಿನ ಗುಳ್ಳೆಗಳು ಮಾಯವಾದವು. ಗುಂಡಿಯಲ್ಲಿ ಸದಾ ಇರುತ್ತಿದ್ದ ಬಿಸಿ ನೀರು ತಣ್ಣಗಾಯಿತು. ಪರಿಣಾಮ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಯಿತು. ಕಾಲಕ್ರಮೇಣ ಬೆಂದ್ರ್‌ತೀರ್ಥ ಯಾರಿಗೂ ಬೇಡವಾಗಿ ಪಾಳುಬಿತ್ತು. ಅಲ್ಲಿನ ವ್ಯವಸ್ಥೆಗಳು ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿತು.
ಆಕರ್ಷಣೆ ಕಳಕೊಂಡ ಬೆಂದ್ರ್‌ತೀರ್ಥ ತಾಣವನ್ನು ಮತ್ತೆ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಅಲ್ಲಿನ ಮಂದಿ ಪ್ರಯತ್ನ ಮುಂದುವರಿಸಿದ್ದರು. ಬೆಂದ್ರ್‌ತೀರ್ಥವನ್ನು ಪ್ರವಾಸೋದ್ಯಮ ತಾಣವಾಗಿಸಬೇಕು ಎಂದು ಬೆಟ್ಟಂಪಾಡಿ ಗ್ರಾಪಂ ವತಿಯಿಂದ ಸಲ್ಲಿಸಲಾಗಿದ್ದ ಮನವಿ ಹಾಗೂ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸಿದ್ದ ಅಂದಿನ ಶಾಸಕಿ ಮಲ್ಲಿಕಾ ಪ್ರಸಾದ್, ಬೆಂದ್ರ್‌ತೀರ್ಥದ ಹೊರಭಾಗದಲ್ಲಿ ಅತಿಥಿ ಗೃಹ ನಿರ್ಮಾಣಕ್ಕಾಗಿ ರೂ.25 ಲಕ್ಷ ಅನುದಾನ ಒದಗಿಸಿದ್ದರು. ಕಾಮಗಾರಿ ಗುತ್ತಿಗೆಯನ್ನು ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿತ್ತು.
ನಿರ್ಮಿತಿ ಕೇಂದ್ರ ವತಿಯಿಂದ 20 ಲಕ್ಷ ರೂ.ವೆಚ್ಚದಲ್ಲಿ ಎರಡು ಹಾಲ್, ಮೂರು ಕೊಠಡಿಗಳು, ಎರಡು ಶೌಚಗೃಹ ಹಾಗೂ ಎರಡು ಸ್ನಾನಗೃಹ ಒಳಗೊಂಡ ಅತಿಥಿಗೃಹ ಕಟ್ಟಡ ನಿರ್ಮಾಣವಾಗಿತ್ತು. ಅತಿಥಿಗೃಹ ನಿರ್ಮಿಸಿ 11 ವರ್ಷವಾದರೂ ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಉಪಯೋಗಕ್ಕೆ ಬರುವ ಮೊದಲೇ ಕಟ್ಟಡದ ಗೋಡೆಗಳು ಬಿರುಕುಬಿಟ್ಟಿವೆ.
ಬೆಂದ್ರ್‌ತೀರ್ಥದ ಪುನಶ್ಚೇತನ ಉದ್ದೇಶದಿಂದ ಕಳೆದ ವರ್ಷ ಬೆಟ್ಟಂಪಾಡಿ ಗ್ರಾಪಂ ಮತ್ತೆ ಪ್ರಯತ್ನ ನಡೆಸಿತ್ತು. ಗ್ರಾಪಂ ಹಾಗೂ ಗ್ರಾಮಸ್ಥರ ಸಹಭಾಗಿತ್ವದೊಂದಿಗೆ ತಾಣವನ್ನು ನರೇಗಾ ಯೋಜನೆಯಡಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸುವ ಕೆಲಸವೂ ನಡೆದಿತ್ತು. ಪುತ್ತೂರು ತಾ.ಪಂ. ಸಹಾಯಕ ನಿರ್ದೇಶಕರಾಗಿದ್ದ ಶೈಲಜಾ ಭಟ್ ಈ ವಿಚಾರದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಿದ್ದರು. ಬೆಂದ್ರ್‌ತೀರ್ಥ ಪುಷ್ಕರಿಣಿಯಲ್ಲಿ ಈ ಹಿಂದಿನಂತೆಯೇ ಬಿಸಿನೀರು ಚಿಮ್ಮುವಂತೆ ಯಾವ ರೀತಿಯಲ್ಲಿ ಮಾಡಬಹುದು ಎಂಬ ಕುರಿತು ಜಿಯಾಲಜಿಸ್ಟ್‌ಗಳನ್ನು ಕರೆದುಕೊಂಡು ಬಂದು ಪರಿಶೀಲನೆ ನಡೆಸುವ ಕಾರ್ಯವೂ ನಡೆದಿತ್ತು. ಆದರೆ ಯಾವುದೇ ಪ್ರಗತಿ ಇಲ್ಲ. ಬೆಂದ್ರ್‌ತೀರ್ಥ ಜಾಗದ ಪಹಣಿ ಪತ್ರ ಅಭಿವೃದ್ಧಿ ಸಮಿತಿ ಹೆಸರಿನಲ್ಲಿರುವುದರಿಂದ ಗ್ರಾಪಂ ವತಿಯಿಂದ ನರೇಗಾ ಯೋಜನೆಯಡಿ ಕಾಮಗಾರಿ ನಡೆಸಲು ತಾಂತ್ರಿಕ ಸಮಸ್ಯೆ ಎದುರಾಗಿದೆ.
ಪ್ರವಾಸೋದ್ಯಮ ಇಲಾಖೆಯವರು ಬೆಂದ್ರ್‌ತೀರ್ಥ ತಾಣದ ಅಭಿವೃದ್ಧಿ ಬಗ್ಗೆ ಯಾವುದೇ ಯೋಜನೆ ರೂಪಿಸುತ್ತಿಲ್ಲ. ಗ್ರಾಮ ಪಂಚಾಯಿತಿಯ ಹಲವು ಸಾಮಾನ್ಯ ಸಭೆಗಳಲ್ಲಿ ಬೆಂದ್ರ್‌ತೀರ್ಥ ಹಾಗೂ ಸಂಪರ್ಕ ರಸ್ತೆ ಅಭಿವೃದ್ಧಿ ವಿಚಾರವಾಗಿ ನಿರ್ಣಯ ಕೈಗೊಂಡು ಪ್ರವಾಸೋದ್ಯಮ ಇಲಾಖೆಗೆ ಕಳುಹಿಸಲಾಗಿದೆ. ಸ್ಥಳೀಯ ಶಾಸಕರಿಗೂ ಮನವಿ ಸಲ್ಲಿಸಲಾಗಿದೆ. ಆದರೆ ಈ ತನಕ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಬೆಂದ್ರ್‌ತೀರ್ಥ ಸ್ಥಳದ ಪಹಣಿಪತ್ರ ಸಮಿತಿ ಹೆಸರಿನಲ್ಲಿರುವುದರಿಂದ ನರೇಗಾ ಯೋಜನೆ ಹಣ ಬಳಸಿಕೊಂಡು ಪಂಚಾಯಿತಿ ವತಿಯಿಂದ ಅಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಪ್ರಕಾಶ್ ರೈ ಬೈಲಾಡಿ, ಬೆಟ್ಟಂಪಾಡಿ ಗ್ರಾ.ಪಂ.ಸದಸ್ಯ. ಬೆಂದ್ರ್‌ತೀರ್ಥದಲ್ಲಿ ಈ ಹಿಂದಿನಂತೆ ಬಿಸಿ ನೀರು ಬರಲು ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂಬುದರ ಬಗ್ಗೆ ಮೊದಲು ಅಧ್ಯಯನ ನಡೆಸಬೇಕಾಗಿದೆ. ಈ ವಿಚಾರದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಸರದ ಮಂದಿಯ ಅಭಿಪ್ರಾಯ ಪಡೆಯುವ ಜತೆಗೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೊದಲಿನಂತೆ ಬೆಂದ್ರ್‌ತೀರ್ಥದಲ್ಲಿ ಬಿಸಿ ನೀರು ಬರಲು ಏನೆಲ್ಲಾ ಮಾಡಬಹುದು ಎಂಬುವುದರ ಬಗ್ಗೆ ತಿಳಿದುಕೊಳ್ಳಲಾಗುವುದು. - ಜುಬಿನ್ ಮೊಹಾಪಾತ್ರ, ಉಪವಿಭಾಗಾಧಿಕಾರಿ, ಪುತ್ತೂರು.