

ರಾಜಕೀಯ ಪಕ್ಷಗಳ ನಡುವೆ ಪ್ರಬಲ ಪೈಪೋಟಿ
ಅಭ್ಯರ್ಥಿ ಘೋಷಣೆಯಲ್ಲಿ ಕೈ ಭವಿಷ್ಯ
ಗಂಗಾಧರ್ ಬೈರಾಪಟ್ಟಣ
ಚನ್ನಪಟ್ಟಣ ಸದಾಕಾಲ ಹೈ ವೋಲ್ಟೇಜ್ ಚುನಾವಣೆಗೆ ಸಾಯಾದ ಕ್ಷೇತ್ರ. ಅದೇ ರೀತಿ ಒಂದೂವರೆ ದಶಕದಲ್ಲಿ ಮೂರನೇ ಉಪಚುನಾವಣೆಯನ್ನು ಕಾಣುತ್ತಿದೆ.
2009ರಿಂದ ಆರಂಭಗೊಂಡು ಇಲ್ಲಿಯವರೆಗೆ ಇದು ಮೂರನೇ ಉಪಚುನಾವಣೆಯಾಗಿದ್ದು, ಈಗಲೂ ರಾಜಕೀಯ ಪಕ್ಷಗಳ ನಡುವೆ ಪ್ರಬಲ ಸೆಣಸಾಟ ಏರ್ಪಟ್ಟಿದೆ.
ಆಪರೇಷನ್ ಕಮಲದಿಂದ ಆರಂಭ: ಚನ್ನಪಟ್ಟಣದಲ್ಲಿ ಉಪಚುನಾವಣೆ ಆರಂಭಗೊಂಡಿದ್ದು, ಆಪರೇಷನ್ ಕಮಲದಿಂದಲೇ. 2008ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಚನ್ನಪಟ್ಟಣದ ಕಾಂಗ್ರೆಸ್ ಶಾಸಕರಾಗಿದ್ದ ಸಿ.ಪಿ.ಯೋಗೇಶ್ವರ್ ರಾಜೀನಾಮೆ ನೀಡಿ, ಕಮಲ ಪಾಳಯಕ್ಕೆ ಹಾರುತ್ತಾರೆ. ಇದರಿಂದಾಗಿ ಕ್ಷೇತ್ರದ ಇತಿಹಾಸದಲ್ಲಿ ಮೊದಲ ಉಪಚುನಾವಣೆಗೆ ಮುನ್ನುಡಿ ಬರೆಯುತ್ತಾರೆ.
ಇದಾದ ನಂತರ ನಡೆದ ಉಪಚುನಾವಣೆಯಲ್ಲಿ ಯೋಗೇಶ್ವರ್ ವಿರುದ್ಧವೇ ಗೆಲುವು ಸಾಧಿಸಿ ಶಾಸಕರಾಗುವ ಜೆಡಿಎಸ್ನ ಎಂ.ಸಿ.ಅಶ್ವತ್ಥ್ ಸಹ ಆಪರೇಷನ್ ಕಮಲಕ್ಕೆ ತುತ್ತಾಗಿ ರಾಜೀನಾಮೆ ನೀಡುವುದರಿಂದ 2011ರ ಏಪ್ರಿಲ್ನಲ್ಲಿ ಮತ್ತೊಂದು ಉಪಚುನಾವಣೆ ಎದುರಾಗುತ್ತದೆ.
ಕುಮಾರಸ್ವಾಮಿ, ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಸ್ಪರ್ಧಿಸಿ ಗೆದ್ದ ಬಳಿಕ ತಮ್ಮ ಶಾಸಕ ಸ್ಥಾನಕ್ಕೆ ಜೂನ್ 14ರಂದು ರಾಜೀನಾಮೆ ಕೊಟ್ಟಿದ್ದರು. ಅವರಿಂದ ತೆರವಾಗಿರುವ ಕ್ಷೇತ್ರವಿಗ ಮೂರನೇ ಉಪ ಚುನಾವಣೆಗೆ ಸಾಕ್ಷಿಯಾಗಿದೆ.
ಸಿಪಿವೈ ಸ್ಫರ್ಧೆ: ಈ ಎರಡೂ ಚುನಾವಣೆ ಸ್ಪರ್ಧೆಯ ವಿಶೇಷ ಏನಂದರೆ, ಸಿ.ಪಿ.ಯೋಗೇಶ್ವರ್ ಬಿಜೆಪಿಯಿಂದ ಸ್ಪರ್ಧಿಸಿ, ಒಂದರಲ್ಲಿ ಸೋಲು ಮತ್ತು ಮತ್ತೊಂದರಲ್ಲಿ ಗೆಲುವು ಸಾಧಿಸುತ್ತಾರೆ.
2009ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆದ ಸಿ.ಪಿ.ವೈಗೆ ಜೆಡಿಎಸ್ನ ಎಂ.ಸಿ.ಅಶ್ವತ್ಥ್ ಎದುರಾಳಿ. ಕಾಂಗ್ರೆಸ್ನಿಂದ ಮಾಜಿ ಶಾಸಕ ಟಿ.ವಿ.ಕೃಷ್ಣಪ್ಪ ಅವರ ಮಗ ಟಿ.ಕೆ.ಯೋಗೇಶ್ ಅವರಿಗೆ ಟಿಕೆಟ್ ನೀಡಲಾಗಿತ್ತು. ಜಿದ್ದಾಜಿದ್ದಿನಿಂದ ಕೂಡಿದ್ದ ಚುನಾವಣೆಯಲ್ಲಿ ಗೆಲುವು ಅಶ್ವತ್ಥ್ಗೆ ಒಲಿಯುತ್ತದೆ. ಯೋಗೇಶ್ವರ್ 2,282 ಮತಗಳ ಅಂತರದಿಂದ ಸೋಲುಕಾಣುತ್ತಾರೆ.
ನಂತರ ಕೇವಲ ಒಂದೇ ವರ್ಷದಲ್ಲಿ ಅಶ್ವತ್ಥ್ ಸಹ ರಾಜೀನಾಮೆ ನೀಡುವುದರಿಂದ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವ ಸಿ.ಪಿ.ಯೋಗೇಶ್ವರ್ಗೆ ಜೆಡಿಎಸ್ನ ಸಿಂ.ಲಿಂ.ನಾಗರಾಜು ಎದುರಾಳಿ. ಆಗ ಕಾಂಗ್ರೆಸ್ನಿಂದ ಹಾಲಿ ಬಿಎಂಐಸಿಪಿಐ ಅಧ್ಯಕ್ಷ ರುನಂದನ್ ರಾಮಣ್ಣ ಹುರಿಯಾಳು. ಈ ಚುನಾವಣೆಯಲ್ಲಿ ಸಿಪಿವೈ 17,803 ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ.
ಈಗ ಮೂರನೇ ಚುನಾವಣೆ ಎದುರಾಗಿದ್ದು, ಈ ಚುನಾವಣೆಯಲ್ಲಿಯೂ ಯೋಗೇಶ್ವರ್ ಸ್ಪರ್ಧೆ ಮಾಡುವ ಸ್ಪಷ್ಟ ನಿರ್ಧಾರಕ್ಕೆ ಬಂದಿರುವುದರಿಂದ, ಮೂರು ಉಪಚುನಾವಣೆಯಲ್ಲಿ ಯೋಗೇಶ್ವರ್ ಸ್ಪರ್ಧೆ ಮಾಡಿದಂತೆ ಆಗುತ್ತದೆ.
ಬಾಕ್ಸ್
ಪುಟಿದೇಳುವುದೇ ಕೈ ಪಾಳಯ
ಕಳೆದ ಎರಡೂ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕಾಣುವ ಮೂಲಕ ತನ್ನ ನೆಲೆಯನ್ನು ಹಂತ ಹಂತವಾಗಿ ಕಳೆದುಕೊಳ್ಳುತ್ತಾ ಬಂದಿದೆ. ಆದರೆ, ಈ ಬಾರಿ ಡಿಸಿಎಂ ಡಿ.ಕೆ.ಶಿವಕುಮಾರ್ ಕ್ಷೇತ್ರದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗಾಡುತ್ತಿರುವುದು ಪಕ್ಷಕ್ಕೆ ಬಲ ನೀಡುವ ಸೂಚನೆ ನೀಡಿದೆ. ಆದರೆ, ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡದೆ ಇರುವುದು ಉಪಚುನಾವಣೆ ಕಾಂಗ್ರೆಸ್ ಪಾಲಿಗೆ ಕೈ ಹಿಡಿಯುವುದೋ ಇಲ್ಲ, ಕೈ ಕೊಡುವುದೋ ಎನ್ನುವುದು ಅಭ್ಯರ್ಥಿ ಮೇಲೆ ನಿರ್ಧಾರವಾಗಲಿದೆ.
ಪಟ್ಟಿ...
ಉಪ ಚುನಾವಣೆಗಳ ಹಿನ್ನೋಟ
2009ರ ಉಪಚುನಾವಣೆ
ಅಭ್ಯರ್ಥಿ ಪಕ್ಷ ಪಡೆದ ಮತ
ಎಂ.ಸಿ.ಅಶ್ವತ್ಥ್ ಜೆಡಿಎಸ್ 64,517
ಸಿ.ಪಿ.ಯೋಗೇಶ್ವರ್ ಬಿಜೆಪಿ 62,235
ಟಿ.ಕೆ.ಯೋಗೇಶ್ ಕಾಂಗ್ರೆಸ್ 17299
2011ರ ಉಪಚುನಾವಣೆ
ಅಭ್ಯರ್ಥಿ ಪಕ್ಷ ಪಡೆದ ಮತ
ಸಿ.ಪಿ.ಯೋಗೇಶ್ವರ್ ಬಿಜೆಪಿ 75275
ಸಿಂ.ಲಿಂ.ನಾಗರಾಜು ಜೆಡಿಎಸ್ 57472
ರಘುನಂದನ್ ಕಾಂಗ್ರೆಸ್ 12687