3ಡಿ ವಿನ್ಯಾಸಕ್ಕೆ ಹೆಚ್ಚಿದ ಬೇಡಿಕೆ

3d print - 4
Published on

ಬೆಂಗಳೂರು: ಕಟ್ಟಡ ಸಾಮಗ್ರಿಗಳ ದರ ಗಗನಕ್ಕೇರಿರುವ ಈ ದಿನಗಳಲ್ಲಿ ಮನೆ ಕಟ್ಟುವುದು ಸುಲಭದ ಮಾತಲ್ಲ. ಹಾಗೆಂದು ತಲೆ ಮೇಲೆ ಕೈಹೊತ್ತು ಕೂರುವ ಅಗತ್ಯವೂ ಇಲ್ಲ. ಏಕೆಂದರೆ ಇಂದು ಮನೆ ನಿರ್ಮಾಣ ಸರಳಗೊಳಿಸುವ ಹಲವಾರು ಆಯ್ಕೆಗಳಿದ್ದು, ಮನೆ ನಿರ್ಮಾಣಕ್ಕೂ ಮುನ್ನ 3ಡಿ ವಿನ್ಯಾಸದ (ಕಟ್ಟಡ ಸ್ವರೂಪದ ಆಯಾಮಗಳ ಚಿತ್ರ) ಮೂಲಕ ಖರ್ಚುವೆಚ್ಚ ಅಂದಾಜು ಮಾಡಬಹುದಾಗಿದೆ.

ಈ ವಿಧಾನದಿಂದ ಇಡೀ ಮನೆ ನಿರ್ಮಾಣಗೊಂಡ ನಂತರ ಹೇಗೆ ಕಾಣುತ್ತದೆ ಎಂಬುದನ್ನು ಮೊದಲೇ ಕಂಪ್ಯೂಟರ್‌ನಲ್ಲಿ ನಕ್ಷೆಯ ಮೂಲಕ ಸ್ಪಷ್ಟ ಚಿತ್ರಣ ಕಂಡುಕೊಳ್ಳಬಹುದಾಗಿದೆ. ನಿಮ್ಮ ಕನಸಿನ ಮನೆ ಯೋಜನಾಬದ್ಧವಾಗಿ ನಿರ್ಮಿಸಲು 3ಡಿ ತಂತ್ರಜ್ಞಾನ ಉತ್ತಮ ರೀತಿ ನೆರವಾಗಲಿದೆ. ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರು, ಮೈಸೂರು ಸೇರಿ ಮಹಾನಗರಗಳಲ್ಲಿ ಈ ವಿನ್ಯಾಸ ಆಧರಿಸಿ ಕಟ್ಟಡ ನಿರ್ಮಾಣ ಮಾಡುವುದು ಹೆಚ್ಚಾಗಿದೆ. ಹಾಗಾಗಿ ನಿವೇಶನ ಖರೀದಿಸಿದ ತಕ್ಷಣವೇ ಜನರು ಮನೆಯ ಮಾದರಿ ರೂಪಿಸಲು ಮನೆಯ ನೀಲಿನಕ್ಷೆಯ ಜತೆಗೆ 3ಡಿ ಮಾದರಿ ವಿನ್ಯಾಸಗಾರರ ಮೊರೆ ಹೋಗುತ್ತಿದ್ದಾರೆ. 2ನೇ ಹಂತದ ನಗರಗಳಲ್ಲೂ ಈಗ 3ಡಿ ಮನೆಗಳ ವಿನ್ಯಾಸಗಳಿಗೆ ಬೇಡಿಕೆ ಹೆಚ್ಚಿದೆ.

ಅನುಕೂಲತೆಗಳೇನು?: ಯೋಜನಾಬದ್ಧವಾಗಿ ಮನೆ ನಿರ್ಮಿಸಲು ಹಾಗೂ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡವರು ಮೋಸ ಮಾಡುವ ಶಂಕೆ ಇದ್ದರೆ ಅದನ್ನು ಮೊದಲೇ ತಡೆಯಲು ಈ 3ಡಿ ವಿನ್ಯಾಸ ಪ್ರಯೋಜನಕಾರಿ. ಈ ವಿಧಾನದಲ್ಲಿ ಮೊದಲು ನೀಲಿನಕ್ಷೆಯನ್ನೇ ಹೋಲುವ ಎಲೆಕ್ಟ್ರಿಕಲ್ ವಿನ್ಯಾಸ ರೂಪಿಸಲಾಗುತ್ತದೆ. ಒಳಾಂಗಣ ಹಾಗೂ ಹೊರಾಂಗಣ ಹೇಗಿರುತ್ತದೆ, ಗೋಡೆಗಳಿಗೆ ಬಣ್ಣಗಳನ್ನು ಬಳಿದಾಗ ಹೇಗೆ ಕಾಣುತ್ತದೆ ಎಂಬುದನ್ನು ಮೊದಲೇ ತಿಳಿಯಬಹುದಾಗಿದೆ.

ವಿದ್ಯುತ್ ಸಂಪರ್ಕಕ್ಕೂ ಸಹಕಾರಿ: ಪಾರ್ಕಿಂಗ್, ಅಡುಗೆ ಕೋಣೆ, ಹಾಲ್, ಮಲಗುವ ಕೋಣೆ, ಪೂಜಾಗೃಹ ಇತ್ಯಾದಿ ಕಲ್ಪನೆಗಳು ಈ ವಿನ್ಯಾಸದಲ್ಲಿ ಸಾಕಾರಗೊಳ್ಳುತ್ತವೆ. ಮನೆಯ ವಿದ್ಯುತ್ ಸಂಪರ್ಕ ಜಾಲವನ್ನೂ ಇದರಲ್ಲಿ ತಿಳಿಯಬಹುದಾಗಿದೆ. ಎಲ್ಲಿ ಸ್ವಿಚ್‌ಬೋರ್ಡ್ ಅಳವಡಿಸಬೇಕು, ಲೈಟ್ ಹಾಕಲು ಯಾವ ಸ್ಥಳ ನಿಗದಿ ಮಾಡಬೇಕು, ್ಯಾನ್ ಅಳವಡಿಕೆ ಸ್ಥಳವನ್ನೂ ಮೊದಲೇ ಗುರುತಿಸಬಹುದಾಗಿದೆ. ಹೀಗೆ ಮಾಡುವುದರಿಂದ ಯಾವುದೇ ಹಂತದಲೂ ಇಂಜಿನಿಯರ್, ಗಾರೆ ಕೆಲಸಗಾರರು ವಂಚಿಸುವ ಅಥವಾ ವಿನ್ಯಾಸ ಕೆಡಿಸುವ ಅವಕಾಶ ಇರುವುದಿಲ್ಲ. ಹಾಗೇನಾದರೂ ಕಾಮಗಾರಿಯಲ್ಲಿ ಲೋಪಗಳನ್ನು ಮಾಡಿದ್ದರೂ ಕೂಡಲೇ ಪತ್ತೆಹಚ್ಚಿ ಸರಿಪಡಿಸಬಹುದು.

ಮೊದಲೇ ಅಂದಾಜು ಸಿಗುತ್ತದೆ: 30-40 ಅಳತೆಯ ನಿವೇಶನದಿಂದ ಹಿಡಿದು ದೊಡ್ಡ ನಿವೇಶನಗಳವರೆಗೂ 3ಡಿ ವಿನ್ಯಾಸ ತಂತ್ರಜ್ಞಾನದ ನೆರವು ಪಡೆಯಬಹುದಾಗಿದೆ. ಒಂದು ವಿನ್ಯಾಸ ರೂಪಿಸಲು ಹೆಚ್ಚೆಂದರೆ ಮೂರು ದಿನ ಸಾಕು. ಅದಕ್ಕೆ 10-25 ಸಾವಿರ ರೂ.ವೆರೆಗೂ ವೆಚ್ಚ ಆಗಬಹುದು. ಮನೆಗಾಗಿ ಲಕ್ಷಾಂತರ ರೂ. ಖರ್ಚು ಮಾಡುವಾಗ ಈ ಮೊತ್ತ ದೊಡ್ಡದಲ್ಲ ಎನ್ನುತ್ತಾರೆ ಕಟ್ಟಡ ನಿರ್ಮಾಣಕಾರ ರುದ್ರೇಶ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net