

ಕಲಬುರಗಿ: ಅಂಚೆ ಇಲಾಖೆ ಜಾರಿಗೆ ತಂದಿರುವ ಅಪಘಾತ ವಿಮೆ ಯೋಜನೆಯಡಿ ಕಲಬುರಗಿ ಜಿಲ್ಲೆಯಲ್ಲಿ ಮೊದಲ ಫಲಾನುಭವಿಗೆ 10 ಲಕ್ಷ ರೂ.ಪರಿಹಾರ ಚೆಕ್ ಬುಧವಾರ ವಿತರಿಸಲಾಗಿದೆ. ವಾರ್ಷಿಕ 399 ರೂ.ವಿಮೆ ಕಂತು ಪಾವತಿಸಿದರೆ ಅಪಘಾತದಲ್ಲಿ ಮೃತಪಟ್ಟರೆ 10 ಲಕ್ಷ ರೂ. ಪರಿಹಾರ ಒದಗಿಸುವ ಮಹತ್ವದ ಯೋಜನೆ ಇದಾಗಿದೆ.
ಅಫಜಲಪುರ ತಾಲೂಕಿನ ಮಣ್ಣೂರು ಗ್ರಾಮದ ನಿವಾಸಿ ಅಜಯ್ ಚಂದ್ರಶೇಖರ್ ಹೊಸೂರ್‌ಕರ್ ಇತ್ತೀಚೆಗೆ ಸಿಡಿಲು ಬಡಿದು ಮೃತಪಟ್ಟಿದ್ದರು. ವಿಮೆಯ ನಾಮಿನಿ, ಮೃತರ ಸಹೋದರ ರಾಹುಲ್‌ಗೆ ಬುಧವಾರ ನಗರದ ಜಗತ್ ಅಂಚೆ ಕಚೇರಿಯಲ್ಲಿ ೧೦ ಲಕ್ಷ ರೂ. ಚೆಕ್ ಅನ್ನು ಅಂಚೆ ಅಧೀಕ್ಷಕ ವೀರಭದ್ರಯ್ಯ ಸ್ವಾಮಿ ವಿತರಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವೀರಭದ್ರಯ್ಯ ಸ್ವಾಮಿ, ಟಾಟಾ ಎಐಜಿ ಹಾಗೂ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಸಹಯೋಗದಲ್ಲಿ ಸಾರ್ವಜನಿಕರು ವಾರ್ಷಿಕ ೩೯೯ ರೂ.ಭರಿಸಿದರೆ ಅಪಘಾತಕ್ಕೀಡಾಗಿ ಮೃತಪಟ್ಟ ಸಂದರ್ಭದಲ್ಲಿ ಕುಟುಂಬಕ್ಕೆ ೧೦ ಲಕ್ಷ ರೂ.ಮೊತ್ತದ ಪರಿಹಾರ ಹಣ ನೀಡಲಾಗುತ್ತಿದೆ. ಈ ಯೋಜನೆ ಸಾಮಾನ್ಯ ವ್ಯಕ್ತಿಗಳಿಗೆ ಅನುಕೂಲಕರವಾಗಿದೆ. ಸಿಡಿಲು ಬಡಿದು, ಹಾವು ಕಚ್ಚಿ, ವಿದ್ಯುತ್ ಸ್ಪರ್ಶ ಹಾಗೂ ರಸ್ತೆ ಅಪಘಾತದಲ್ಲಿ ಮೃತಪಟ್ಟರೆ ವಿಮೆ ಮೊತ್ತ ಸಿಗಲಿದೆ. ಸಹಜ ಸಾವಿಗೆ ಈ ಯೋಜನೆ ಅನ್ವಯ ಆಗುವುದಿಲ್ಲ ಎಂದು ಸ್ಪಷ್ಟಡಿಸಿದರು.
ಕಡಿಮೆ ಮೊತ್ತದ ವಿಮೆ ಕಂತು ಪಡೆದು ವಿಮೆ ವಾರಸುದಾರರರಿಗೆ ಹತ್ತು ಲಕ್ಷ ರೂ.ನೀಡುತ್ತಿರುವುದು ಅಂಚೆ ಇಲಾಖೆಯ ಸಾರ್ಥಕ ಸೇವೆ ಎಂದು ಬಣ್ಣಿಸಿದರು. ಐಪಿಪಿ ವಿಭಾಗದ ವ್ಯವಸ್ಥಾಪಕ ಜಗದೀಶ, ಸಹಾಯಕ ಅಧೀಕ್ಷಕ ಮಾಣಿಕರಾವ ಕುಲಕರ್ಣಿ, ಅಂಚೆ ನಿರೀಕ್ಷಕ ಮಲ್ಲಿಕಾರ್ಜುನ ಮಂಗಶೆಟ್ಟಿ, ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಚಂದ್ರಶೇಖರ ನಿಂಗಡೆ, ಸಂತೋಷ ಮಠ, ಇರ್ಫಾನ್ ಇತರರು ಇದ್ದರು.