

ಕಾರವಾರ: ಜಿಲ್ಲೆಯಲ್ಲಿ ಸೋಮವಾರ ಒಟ್ಟು 36 ಕರೊನಾ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಕುಮಟಾದ 14, ಭಟ್ಕಳದ 7, ದಾಂಡೇಲಿಯ 5, ಹೊನ್ನಾವರದ 4, ಕಾರವಾರ, ಯಲ್ಲಾಪುರದ ತಲಾ 2, ಶಿರಸಿ, ಹಳಿಯಾಳದ ತಲಾ ಒಬ್ಬರಲ್ಲಿ ಸೋಂಕು ಕಂಡುಬಂದಿದೆ.
ಇತ್ತೀಚೆಗೆ ಒಂದು ವಾರಗಳಲ್ಲಿ ಕಂಡು ಬರುತ್ತಿರುವ ಸೋಂಕಿತರಿಗೆ ರೋಗ ಎಲ್ಲಿಂದ ಬಂತು ಎಂದು ಹುಡುಕುವುದೇ ಕಷ್ಟವಾಗುತ್ತಿದೆ. ಕಳೆದ ಒಂದು ವಾರದಲ್ಲಿ 20 ಕ್ಕೂ ಅಧಿಕ ಜನರ ಸೋಂಕಿನ ಮೂಲ ಹುಡುಕಲು ಸಾಧ್ಯವಾಗಿಲ್ಲ. ಸೋಮವಾರ ಒಟ್ಟು ಏಳು ಜನರ ಸೋಂಕಿನ ಮೂಲ ಹುಡುಕಲು ಸಾಧ್ಯವಾಗಿಲ್ಲ. ಇದು ಆತಂಕ ಹುಟ್ಟಿಸುವ ಸಂಗತಿಯಾಗಿದೆ.
ಆಘಾತ: ಕುಮಟಾ ತಾಲೂಕಿನಲ್ಲಿ ಒಂದೇ ದಿನದಲ್ಲಿ 14 ಜನರಲ್ಲಿ ಕರೊನಾ ಖಚಿತವಾಗಿದೆ. ಅದರಲ್ಲಿ 13 ಜನರಿಗೆ ಪ್ರಾಥಮಿಕ ಸಂಪರ್ಕದಿಂದಲೇ ರೋಗ ಹರಡಿದೆ. ಒಬ್ಬರಿಗೆ ಮಾತ್ರ ಜ್ವರದಿಂದ ರೋಗ ಬಂದಿದ್ದು, ಸೋಂಕಿನ ಮೂಲ ಪತ್ತೆಯಾಗಿಲ್ಲ. ಕುಮಟಾ ಪಟ್ಟಣದ ಇಬ್ಬರು ಖಾಸಗಿ ವೈದ್ಯರಿಗೆ ಸೋಂಕು ತಗುಲಿದೆ. ಅವರಲ್ಲಿ ಚಿಕಿತ್ಸೆ ಪಡೆದು ಬಂದವರನ್ನು ಹುಡುಕುವುದೇ ದೊಡ್ಡ ಕಷ್ಟವಾಗಿದೆ. ಇದು ಇಡೀ ತಾಲೂಕಿನಲ್ಲಿ ಆತಂಕದ ವಾತಾವರಣ ಸೃಷ್ಟಿಸಲು ಕಾರಣವಾಗಿದೆ. ತಾಲೂಕಿನ ಒಟ್ಟು ಸೋಂಕಿತರಲ್ಲಿ ಏಳು ಜನ ಮಕ್ಕಳೇ ಇದ್ದಾರೆ ಎಂಬುದು ಇನ್ನೊಂದು ಗಮನಾರ್ಹ ಅಂಶ. ಕರೊನಾ ಆದವರಲ್ಲಿ ನಾಲ್ವರು ಪಟ್ಟಣದ ವಿವೇಕ ನಗರದವರಾಗಿದ್ದರು, 8 ಜನ ಮಿರ್ಜಾನ್ನವರಾಗಿದ್ದಾರೆ. ರಾಮನಗರ ಹಾಗೂ ಕತಗಾಲ್ನ ತಲಾ ಬ್ಬರಿಗೆ ಕೋವಿಡ್ ಕಂಡು ದೃಢಪಟ್ಟಿದೆ.
ನೌಕಾನೆಲೆಗೂ ಭೀತಿ: ನವದೆಹಲಿಯಿಂದ ಕಾರವಾರದ ಕದಂಬ ನೌಕಾನೆಲೆಗೆ ಆಗಮಿಸಿದ 23 ಹಾಗೂ 33 ವರ್ಷದ ಇಬ್ಬರು ಪುರುಷರಲ್ಲಿ ಕೋವಿಡ್ ಪತ್ತೆಯಾಗಿದೆ. ಯಲ್ಲಾಪುರದ 24 ವರ್ಷದ ಯುವತಿ ಹಾಗೂ ಹಾಗೂ 25 ವರ್ಷದ ಯುವಕನಲ್ಲಿ , ಶಿರಸಿಯ 29 ವರ್ಷದ ಪುರುಷನಲ್ಲಿ ರೋಗವಿದ್ದು, ಇವರಿಗೆ ಎಲ್ಲಿಂದ ರೋಗ ಬಂತು ಎಂಬುದೇ ತಿಳಿಯುತ್ತಿಲ್ಲ. ಹೊನ್ನಾವರಕ್ಕೆ ವಿದೇಶದಿಂದ ಆಗಮಿಸಿದ 44 ವರ್ಷದ ವ್ಯಕ್ತಿ, ಮುಂಬೈನಿಂದ ಆಗಮಿಸಿದ ಒಬ್ಬ ಮಹಿಳೆ ಹಾಗೂ ಒಬ್ಬ ಪುರುಷನಿಗೆ ಸೋಂಕು ಖಚಿತವಾಗಿದ್ದು, ಪ್ರಾಥಮಿಕ ಸಂಪರ್ಕಕ್ಕೆ ಬಂದ 55 ವರ್ಷದ ಇನ್ನೊಬ್ಬ ವ್ಯಕ್ತಿಯಲ್ಲೂ ರೋಗ ಕಂಡುಬಂದಿದೆ.
ದಾಂಡೇಲಿಯಲ್ಲಿ 5: ದಾಂಡೇಲಿಯ ಹಳಿಯಾಳ ರಸ್ತೆಯ ಅಲ್ಲೈಡ್ ಇಂಡಸ್ಟ್ರಿ ಸಮೀಪದ ನಿವಾಸಿಗಳಾದ 42 ಹಾಗೂ 33 ವರ್ಷದ ಇಬ್ಬರು ಪುರುಷರು, 13 ವರ್ಷದ ಬಾಲಕ 33 ವರ್ಷದ ಒಬ್ಬ ಮಹಿಳೆಗೆ ರೋಗಿಯೊಬ್ಬರ ಪ್ರಾಥಮಿಕ ಸಂಪರ್ಕದಿಂದ ಕರೊನಾ ಬಂದಿದೆ. ರಾಜಸ್ಥಾನದಿಂದ ಆಗಮಿಸಿದ ಮಾರುತಿ ನಗರದ 25 ವರ್ಷದ ನಿವಾಸಿಯಲ್ಲಿ ಸೋಂಕು ದೃಢಪಟ್ಟಿದೆ. ಹಳಿಯಾಳ ಪಟ್ಟಣದ ಪಟ್ಟಣದ ದೇಶಪಾಂಡೆ ಆಶ್ರಯ ನಗರದಲ್ಲ ಜ್ವರದ ಲಕ್ಷಣವಿದ್ದ 60 ವರ್ಷದ ವ್ಯಕ್ತಿ ಯಲ್ಲಿ ಕರೊನಾ ಸೋಂಕು ಖಚಿತವಾಗಿದೆ.
ಅರ್ಚಕರಿಗೂ ವೈರಣು: ಭಟ್ಕಳದಲ್ಲಿ ಒಟ್ಟ 20 ಜನರಲ್ಲಿ ಸೋಮವಾರ ಕರೊನಾ ಸೋಂಕು ಖಚಿತವಾಗಿದೆ ಎಂದು ಉಪವಿಭಾಗಾಧಿಕಾರಿ ಭರತ್ ಮಾಹಿತಿ ನೀಡಿದ್ದಾರೆ. ಸದ್ಯ ಏಳು ಜನ ಸೋಂಕಿತರ ವಿವರ ಸೋಮವಾರದ ಬುಲೆಟಿನ್ನಲ್ಲಿ ಪ್ರಕಟವಾಗಿದ್ದು, ಉಳಿದವರ ವಿವರ ಜು.14 ರ ಬುಲೆಟಿನ್ನಲ್ಲಿ ಪ್ರಕಟವಾಗಲಿದೆ. ಒಟ್ಟಾರೆ ಸೋಂಕಿತರಲ್ಲಿ ಇಬ್ಬರು ಬಾಲಕರಿದ್ದು, ಮೂವರು ವೃದ್ಧರಿದ್ದಾರೆ. ಮಾರಿಕಾಂಬಾ ದೇವಸ್ಥಾನದ ಅರ್ಚಕರಿಗೂ ಸೋಂಕು ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ವಿದೇಶದಿಂದ ಆಗಮಿಸಿದ ಒಬ್ಬ ವ್ಯಕ್ತಿಯಿದ್ದು, ಉಳಿದೆಲ್ಲರೂ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದವರಾಗಿದ್ದಾರೆ.