

ಬಳ್ಳಾರಿ: ಕರೊನಾ ಮೂರನೇ ಅಲೆ ಭೀತಿ ನಡುವೆಯೇ ಗಣಿನಾಡು ಬಳ್ಳಾರಿಯಲ್ಲಿ ಅಪೌಷ್ಟಿಕತೆ, ಕಡಿಮೆ ತೂಕ, ಅವಧಿಪೂರ್ವ ಜನನ, ವಿವಿಧ ಸೋಂಕಿನ ಕಾರಣಗಳಿಂದಾಗಿ ನವಜಾತ ಶಿಶುಗಳು ಕಣ್ಮುಚ್ಚುತ್ತಿರುವುದು ಕಳವಳ ಮೂಡಿಸಿದೆ. ಪ್ರಸಕ್ತ ಸಾಲಿನ ಏಪ್ರಿಲ್ನಿಂದ ನವೆಂಬರ್ವರೆಗೆ ಬಳ್ಳಾರಿ-ವಿಜಯನಗರ ಅವಳಿ ಜಿಲ್ಲೆ ವ್ಯಾಪ್ತಿಯಲ್ಲಿ 358 ಕಂದಮ್ಮಗಳು ಅಸುನೀಗಿವೆ. ಈ ಪೈಕಿ ಬಳ್ಳಾರಿಯಲ್ಲಿ 293, ವಿಜಯನಗರ ಜಿಲ್ಲೆಯಲ್ಲಿ 65 ಶಿಶುಗಳ ಸಾವಾಗಿದೆ. ಅದರಲ್ಲಿಯೂ ಆಂಧ್ರದ ಅನಂತಪುರ, ಕರ್ನಲ್ ಮತ್ತು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳ ಜನತೆಗೆ ಆಸರೆಯಾಗಿರುವ ಬಳ್ಳಾರಿಯ ವಿಮ್್ಸ ಆಸ್ಪತ್ರೆಯಲ್ಲಿಯೇ 293 ಹಸುಳೆಗಳು ಮೃತಪಟ್ಟಿರುವುದು ಆತಂಕ ಮೂಡಿಸಿದೆ. ದಿನಕ್ಕೆ ಸರಾಸರಿ ಮೂರು ಹಸುಗೂಸುಗಳು ಜೋಡಿ ಜಿಲ್ಲೆಯಲ್ಲಿ ಇಹಲೋಕ ತ್ಯಜಿಸುತ್ತಿವೆ. ಹೀಗಿದ್ದರೂ ಆರೋಗ್ಯ ಇಲಾಖೆ ಕಾಳಜಿ ತೋರುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಗ್ರಾಮೀಣ ಭಾಗದ ಗರ್ಭಿಣಿಯರು ಆಸ್ಪತ್ರೆಗೆ ಬರುವ ಮುನ್ನವೇ ಹಲವು ಕಂದಮ್ಮಗಳು ಕಣ್ಮುಚ್ಚುತ್ತಿವೆ. ಗಣಿನಾಡಿನಲ್ಲಿ ಕಳೆದ ಎಂಟು ತಿಂಗಳ ಅವಧಿಯಲ್ಲಿ ಶಿಶುಗಳು ದುರ್ಮರಣ ಹೊಂದಿರುವುದನ್ನು ಆರ್ಸಿಎಚ್ ಅಧಿಕಾರಿ ಅನಿಲ್ ಕುಮಾರ್ ಖಚಿತ ಪಡಿಸಿದ್ದಾರೆ.
ಹಸುಗೂಸುಗಳ ಸಾವಿನ ಪ್ರಮಾಣ ಕಡಿಮೆ ಮಾಡಲು ಹಲವು ಯೋಜನೆಗಳೇನೋ ಇವೆ. ಅಪೌಷ್ಟಿಕತೆ, ಕಡಿಮೆ ತೂಕ, ಪ್ರಿಮೆಚ್ಯೂರ್, ಸೋಂಕು, ಹೆರಿಗೆ ಸಂದರ್ಭದಲ್ಲಿ ತಾಯಂದಿರ ಆರೋಗ್ಯದಲ್ಲಿ ಏರುಪೇರು ಇತ್ಯಾದಿ ಕಾರಣಗಳಿಂದ ಹಸುಗೂಸುಗಳು ಮೃತಪಡುತ್ತಿವೆ. ಸೂಕ್ತ ಚಿಕಿತ್ಸೆ, ಆರೈಕೆಯಿಂದ ಶಿಶುಗಳ ಸಾವಿನ ಸಂಖ್ಯೆ ಕಡಿಮೆ ಮಾಡಲು ಇಲಾಖೆ ಇಚ್ಛಾಶಕ್ತಿ ತೋರಬೇಕಿದೆ.
ಅಪೌಷ್ಟಿಕತೆ ಕಾರಣ ಕಡಿಮೆ ತೂಕದ ಮಕ್ಕಳು ಹುಟ್ಟಿ ಅಪಾಯಕ್ಕೆ ಸಿಲುಕುತ್ತಾರೆ. ಅಪೌಷ್ಟಿಕತೆ ನಿವಾರಣೆಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ. ಘಟನೆ ಬಗ್ಗೆ ಬಳ್ಳಾರಿ ಡಿಎಚ್ಒ ಜತೆ ರ್ಚಚಿಸಿ ಸೂಕ್ತ ಕ್ರಮಕ್ಕೆ ಸೂಚಿಸಿದ್ದೇನೆ. ಬಳ್ಳಾರಿ, ರಾಯಚೂರು, ಹೊಸಪೇಟೆ, ಬೀದರ್, ಕಲಬುರಗಿಯ ಆರೇಳು ಜಿಲ್ಲೆಯಲ್ಲಿ ಮಕ್ಕಳು ಅಪೌಷ್ಟಿಕತೆಗೆ ತುತ್ತಾಗುತ್ತಿರುವುದು ಬೆಳಕಿಗೆ ಬಂದಿದೆ. ಬಳ್ಳಾರಿ ಜಿಲ್ಲೆಯಲ್ಲಿ ಅಧಿಕ ಸಾವಾಗಿರುವ ಕುರಿತು ಪರಿಶೀಲಿಸುತ್ತೇನೆ. ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ನೀಡುವ ಕುರಿತು ಮಹಿಳಾ ಮತ್ತು ಮಕ್ಕಳ ಇಲಾಖೆ ಜತೆ ಮಾತನಾಡಿದ್ದೇನೆ. | ಡಾ.ಕೆ.ಸುಧಾಕರ್ ಆರೋಗ್ಯ ಸಚಿವ
ಬಳ್ಳಾರಿ-ವಿಜಯನಗರ ಅವಳಿ ಜಿಲ್ಲೆಯಲ್ಲಿ ಶಿಶು ಮರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ನೀತಿ ಸಂಹಿತೆ ಮುಗಿದ ಬಳಿಕ ಸಭೆ ನಡೆಸಿ, ಶಿಶುಗಳ ಮರಣಕ್ಕೆ ಕಾರಣ ಏನು ಎಂಬುದನ್ನು ರ್ಚಚಿಸಲಾಗುವುದು. ತಜ್ಞರು ಈಗಾಗಲೇ ಸರ್ಕಾರಕ್ಕೆ ಮಾಹಿತಿ ಕಳುಹಿಸಿದ್ದಾರೆ. ಸರ್ಕಾರ ಸಹ ಗಂಭೀರವಾಗಿ ತೆಗೆದುಕೊಂಡಿದೆ. | ಆನಂದ ಸಿಂಗ್ ಪ್ರವಾಸೋದ್ಯಮ ಸಚಿವ
ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆ ವ್ಯಾಪ್ತಿಯಲ್ಲಿ ಕಳೆದ ಎಂಟು ತಿಂಗಳಲ್ಲಿ ಒಟ್ಟು 30,835 ಮಕ್ಕಳು ಜನಿಸಿದ್ದು, ಇದರಲ್ಲಿ ಒಂದು ವರ್ಷದೊಳಗಿನ 343 ಮಕ್ಕಳು ಮರಣ ಹೊಂದಿವೆ. ಜಿಲ್ಲೆಯಲ್ಲಿ ಪ್ರತಿ 1000 ಜೀವಂತ ಜನನಕ್ಕೆ ಈ ಮೊದಲು ಇದ್ದ 20ಕ್ಕೂ ಹೆಚ್ಚು ಮರಣ ಪ್ರಮಾಣವು ಪ್ರಸ್ತುತ 12ಕ್ಕೆ ಇಳಿದಿದೆ. ತಾಯಿ ಮತ್ತು ಮಗುವಿನ ಸೇವೆಗೆ ಸಂಬಂಧಿಸಿದಂತೆ ವೈದ್ಯಕೀಯ ಸೌಲಭ್ಯ ಮತ್ತು ತಜ್ಞ ವೈದ್ಯರ ಕೊರತೆ ಇಲ್ಲ. | ಡಾ.ಎಚ್.ಎಲ್.ಜನಾರ್ದನ ಡಿಎಚ್ಒ, ಬಳ್ಳಾರಿ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಶಿಶು ಮರಣ ಪ್ರಮಾಣ ಹೆಚ್ಚುತ್ತಿರುವುದು ಗಮನಕ್ಕೆ ಬಂದಿದೆ. ಅಪೌಷ್ಟಿಕತೆಯಿಂದಲೇ ಸಾವು ಹೆಚ್ಚುತ್ತಿದೆ ಎಂಬುದು ಸರಿಯಲ್ಲ. ಅಪೌಷ್ಟಿಕತೆ ನಿವಾರಣೆಗೆ ಹಲವು ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಶಿಶು ಮರಣ ಹೆಚ್ಚಳದ ಕುರಿತು ತನಿಖೆ ನಡೆಸಿ ವರದಿ ಪಡೆಯಲಾಗುವುದು. | ಹಾಲಪ್ಪ ಆಚಾರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ