

ಹಳಿಯಾಳ: ಹಲವಾರು ಅಪರಾಧ ಪ್ರಕರಣ ಭೇದಿಸಿ, ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸಹಕಾರಿಯಾಗಿದ್ದ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮರಾಗಳು ವರ್ಷದಿಂದ ಕಣ್ಮುಚ್ಚಿವೆ.
ಸಂಚಾರಿ ನಿಯಮಗಳ ಪರಿಣಾಮಕಾರಿ ಅನುಷ್ಠಾನ, ಅಪರಾಧಿಗಳನ್ನು ಶೀಘ್ರ ಪತ್ತೆ ಹಚ್ಚಲು ಹಾಗೂ ನಗರದಲ್ಲಿ ಅಪರಾಧ ಚಟುವಟಿಕೆ ನಿಯಂತ್ರಣಕ್ಕಾಗಿ ಪುರಸಭೆಯು 2017-18ರಲ್ಲಿ ಆಗಿನ ಎಸ್ಪಿ ವಿನಾಯಕ ಪಾಟೀಲ ಸೂಚನೆ ಮೇರೆಗೆ ರಾಜ್ಯ ಹಣಕಾಸು ಆಯೋಗ ಮತ್ತು ಪುರಸಭೆ ನಿಧಿಯಿಂದ ಮೊದಲ ಬಾರಿಗೆ 20 ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದಲ್ಲಿ 29 ಕಡೆ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು.
ಬಳಿಕ ಮತ್ತೆ 15 ಲಕ್ಷ ರೂ. ವಿನಿಯೋಗಿಸಿ ಅವುಗಳನ್ನು ವೈರ್ಲೆಸ್ ಸೇವೆಗೆ ಪರಿವರ್ತಿಸಲಾಗಿತ್ತು. ಹೀಗೆ ಒಟ್ಟು 35 ಲಕ್ಷ ರೂ.ಗಳ ವೆಚ್ಚದಲ್ಲಿ ಅಳವಡಿಕೆಯಾಗಿದ್ದ 29 ಸಿಸಿ ಕ್ಯಾಮರಾಗಳು ಈಗ ಬಂದ್ ಆಗಿವೆ.
ಎಲ್ಲೆಲ್ಲಿ ಅಳವಡಿಕೆ: ಬೆಂಗಳೂರಿನ ಮೌರ್ಯ ಇನ್ಪೋಟೆಕ್ ಪ್ರೈವೆಟ್ ಲಿಮಿಟೆಡ್ ಕಂಪನಿ ಹಳಿಯಾಳ ಪಟ್ಟಣದ 29 ಕಡೆ ಕ್ಯಾಮರಾ ಅಳವಡಿಸಲು ಗುತ್ತಿಗೆ ಪಡೆದಿದ್ದರು. ಪಟ್ಟಣದ ಶಿವಾಜಿ ಸರ್ಕಲ್, ಬಸವೇಶ್ವರ ಸರ್ಕಲ್, ವನಶ್ರೀ ವೃತ್ತ, ಬೆಳಗಾವಿ ರಸ್ತೆ, ಬಸ್ ನಿಲ್ದಾಣ ಎದುರುಗಡೆ, ಅರ್ಬನ್ ಬ್ಯಾಂಕ್ ಸರ್ಕಲ್, ಮಾರುಕಟ್ಟೆ ಪ್ರದೇಶ, ಫಿಶ್ ಮಾರ್ಕೆಟ್ ಸಮೀಪ, ದೇಶಪಾಂಡೆ ರುಡ್ಸೆಟ್ ಎದುರು, ಮಾಗವಾಡ, ಕೆಸರೊಳ್ಳಿ ಚೆಕ್ಪೋಸ್ಟ್ ಹೀಗೆ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತು. ಬಹುತೇಕ ಎಲ್ಲ ಸಿಸಿ ಕ್ಯಾಮರಾಗಳು ಮೇಲಿಂದ ಮೇಲೆ ದುರಸ್ತಿಗೆ ಬರುತ್ತಿದ್ದವು. ಕಳೆದೆರಡು ವರ್ಷದಿಂದ ಬ್ಯಾಕಪ್ ಕೂಡ ಇಲ್ಲದೆ ಧೂಳು ತಿನ್ನುತ್ತಿವೆ. ಕೆಲವು ಆಕಾಶದೆಡೆ ಮುಖ ಮಾಡಿದ್ದರೆ ಇನ್ನೂ ಕೆಲವು ಹೆಸರಿಗಷ್ಟೇ ಇವೆ.
ಪುರಸಭೆಯ ಅನುದಾನದಡಿ ಸಿಸಿ ಕ್ಯಾಮರಾ ಅಳವಡಿಸಿದ ಬಳಿಕ ಅದನ್ನು ಹಳಿಯಾಳ ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗಿತ್ತು. ಆದರೆ, ನಿರ್ವಹಣೆಯ ಜವಾಬ್ದಾರಿ ಪುರಸಭೆ ಬಳಿ ಇದ್ದು, ಕ್ಯಾಮರಾಗಳು ದುರಸ್ತಿಗೆ ಬಂದರೆ ಅಥವಾ ತಾಂತ್ರಿಕ ತೊಂದರೆಗಳಾದರೆ ಪುರಸಭೆಗೆ ಮಾಹಿತಿ ನೀಡಿದರೆ ಅವರು ಕ್ಯಾಮರಾ ಅಳವಡಿಕೆಯ ಗುತ್ತಿಗೆ ಕಂಪನಿಯವರನ್ನು ಸಂರ್ಪಸಿ ದುರಸ್ತಿಗೆ ಸೂಚಿಸುತ್ತಾರೆ. ಕ್ಯಾಮರಾ ದುರಸ್ತಿ ಕುರಿತು ಪೊಲೀಸ್ ಇಲಾಖೆಯು ಪುರಸಭೆಗೆ ಪತ್ರ ಬರೆದು ತಿಳಿಸಿದ್ದರೂ ಪುರಸಭೆ ಅಧಿಕಾರಿಗಳು ಮಾತ್ರ ಕ್ಯಾಮರಾಗಳ ದುರಸ್ತಿಗೆ ಮನಸ್ಸು ಮಾಡುತ್ತಿಲ್ಲ.
2017-18ರಲ್ಲಿ ಅಂದಿನ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಆದೇಶದಂತೆ ಉತ್ತರಕನ್ನಡ ಜಿಲ್ಲೆಯ ಎಲ್ಲ ನಗರಸಭೆ, ಪುರಸಭೆ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ಮೂರು ವರ್ಷಗಳ ನಂತರ ಅವುಗಳ ಮುಂದಿನ ನಿರ್ವಹಣೆಯ ಜವಾಬ್ದಾರಿ ಪೊಲೀಸ್ ಇಲಾಖೆಗೆ ನೀಡಲಾಗಿದ್ದು, ಕಾರ್ಯೋನ್ಮುಖವಾಗಬೇಕು. - ಹರೀಶ ಜಿ.ಆರ್ . ಪುರಸಭೆ ಕಿರಿಯ ಇಂಜಿನಿಯರ್
ಪಟ್ಟಣದಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾಗಳು ದುರಸ್ತಿಯಾದ ಬಗ್ಗೆ ಹಳಿಯಾಳ ಪುರಸಭೆಗೆ ಲಿಖಿತವಾಗಿ ತಿಳಿಸಲಾಗಿದೆ. ಅವರು ಮುಂದಿನ ಕ್ರಮಕೈಗೊಳ್ಳಬೇಕಿದೆ. -ವಿನೋದ ಎಸ್.ಕೆ. ಪಿಎಸ್ಐ ಹಳಿಯಾಳ