

ಹಾವೇರಿ: ಮತದಾನದ ಸಂದರ್ಭದಲ್ಲಿ ಮತಗಟ್ಟೆ ಗಳಲ್ಲಿ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.
ಜಿಲ್ಲೆಯ ೧,೪೭೧ ಮತಗಟ್ಟೆಗಳ ಪೈಕಿ ೩೩೯ ಅನ್ನು ಜಿಲ್ಲಾಡಳಿತ ‘ಸೂಕ್ಷ್ಮ ಮತಗಟ್ಟೆ’ ಎಂದು ಗುರುತಿಸಿದೆ.
ಈ ಮತಗಟ್ಟೆಗಳಲ್ಲಿ ಸಿಸಿಟಿವಿ ಕ್ಯಾಮರಾ, ಹೆಚ್ಚುವರಿ ಭದ್ರತೆ ಹಾಗೂ ಅಧಿಕಾರಿ, ಸಿಬ್ಬಂದಿಯನ್ನು ನೇಮಿಸಲು ಕ್ರಮ ಕೈಗೊಂಡಿದೆ.
ಈ ಮೊದಲು ಚುನಾವಣಾ ಪರಿಭಾಷೆಯಲ್ಲಿ ಸೂಕ್ಷ್ಮ, ಅತಿ ಸೂಕ್ಷ್ಮ ಮತಗಟ್ಟೆಗಳು ಎಂದು ಗುರುತಿಸಲಾಗುತ್ತಿತ್ತು. ಈಗ ಅದನ್ನು ವಲ್ನರೇಬಲ್ ಮತ್ತು ಕ್ರಿಟಿಕಲ್ ಮತಗಟ್ಟೆಗಳು ಎಂದು ಗುರುತಿಸಲಾಗುತ್ತಿದೆ.
ಹಾವೇರಿ ಜಿಲ್ಲೆಯಲ್ಲಿ ೧೮ ವಲ್ನರೇಬಲ್ ಮತಗಟ್ಟೆಗಳಿದ್ದರೆ, ೩೨೧ ಕ್ರಿಟಿಕಲ್ ಮತಗಟ್ಟೆಗಳೆಂದು ಪಟ್ಟಿ ಮಾಡಲಾಗಿದೆ.
ವಲ್ನರೇಬಲ್ ಬೂತ್ ಎಂದರೆ ಸುವ್ಯವಸ್ಥೆಗೆ ಧಕ್ಕೆ ಉಂಟಾಗಬಹುದಾದ, ಮತಗಟ್ಟೆ ವ್ಯಾಪ್ತಿಯಲ್ಲಿ ರೌಡಿ ಚಟುವಟಿಕೆ ಅಥವಾ ಸ್ವಾರ್ಥಕ್ಕಾಗಿ ಪ್ರಭಾವ ಬೀರುವ ವ್ಯಕ್ತಿಗಳ ಕೈವಾಡಕ್ಕೆ ಆಸ್ಪದವಾಗುವ ಸಾಧ್ಯತೆ ಇರುವ ಮತಗಟ್ಟೆ ಎಂದು ವಿಂಗಡಿಸಿರುವಂಥದ್ದು.
ಕ್ರಿಟಿಕಲ್ ಮತಗಟ್ಟೆ ಎಂದರೆ ೨೦೧೮ರ ಚುನಾವಣೆಯಲ್ಲಿ ಶೇ. ೯೦ಕ್ಕಿಂತ ಹೆಚ್ಚು ಮತದಾನ ಆಗಿರುವ ಮತ್ತು ಒಬ್ಬ ಅಭ್ಯರ್ಥಿಗೆ ಶೇ. ೭೫ರಷ್ಟು ಮತ ಬಂದಿರುವಂಥ ಬೂತ್‌ಗಳು.
ಈ ಪ್ರಮಾಣದ ಮತದಾನ ಸ್ವಯಂ ಸ್ಫೂರ್ತಿ, ಜಾಗೃತಿಯಿಂದ ಆಗಿದೆಯೆ ಅಥವಾ ಅಭ್ಯರ್ಥಿಗಳ ಪ್ರಭಾವ, ಪ್ರಲೋಭನೆಗಳಿಂದಾಗಿದೆಯೆ? ಒಬ್ಬರೇ ಅಭ್ಯರ್ಥಿಗೆ ಶೇ. ೭೫ ಅಥವಾ ಅದಕ್ಕಿಂತ ಹೆಚ್ಚಿನ ಮತ ಬರಲು ಅಸಹಜ ಕಾರಣಗಳೇನಾದರೂ ಇರಬಹುದೆ ಎಂದು ವಿಮರ್ಶೆಗೆ ಒಳಪಡಿಸಬಹುದಾದ ಬೂತ್‌ಗಳು.
ಹಾವೇರಿ ಜಿಲ್ಲೆಯಲ್ಲಿ ಇಂಥ ೨೧೮ ಮತಗಟ್ಟೆಗಳನ್ನು ಜಿಲ್ಲಾಡಳಿತ ಗುರುತಿಸಿದೆ. ಇದರ ಜತೆಗೆ ಜಿಲ್ಲಾ ಪೊಲೀಸರು ಕಾನೂನು ಸುವ್ಯವಸ್ಥೆ, ಮತ್ತಿತರ ಅಂಶಗಳನ್ನು ಗಮನಿಸಿ ೧೧೩ ಮತಗಟ್ಟೆಗಳನ್ನು ಗುರುತಿಸಿದ್ದಾರೆ.
ಹೀಗೆ ವಿವಿಧ ಮಾನದಂಡಗಳಿಂದ ಗುರುತಿಸಿರುವ ಎಲ್ಲ ೩೩೯ ಮತಗಟ್ಟೆಗಳಿಗೆ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುತ್ತದೆ.
ನಿರಂತರವಾಗಿ ವೆಬ್ ಕಾಸ್ಟಿಂಗ್ ನಡೆಯುತ್ತದೆ. ಹೆಚ್ಚುವರಿಯಾಗಿ ಮೈಕ್ರೋ ಆಬ್ಸರ್ವರ್‌ಗಳನ್ನು ನೇಮಿಸಲಾಗುತ್ತದೆ.
ಪೊಲೀಸ್, ಮಿಲಿಟರಿ ಪಡೆ ಭದ್ರತೆ ಕೈಗೊಳ್ಳುತ್ತದೆ. ಎಲ್ಲಿ ಅಗತ್ಯವಿದೆ ಅಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಅಗತ್ಯವಿದ್ದಲ್ಲಿ ಮತ್ತಷ್ಟು ಸಿಬ್ಬಂದಿ ನೇಮಿಸಲಾಗುತ್ತದೆ ಎನ್ನುತ್ತಾರೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ.
ಹಾನಗಲ್ಲ, ಅಕ್ಕಿಆಲೂರು, ರಟ್ಟಿಹಳ್ಳಿ, ರಾಣೆಬೆನ್ನೂರ, ಬಂಕಾಪುರ ಸೇರಿ ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಭದ್ರತೆಗೆ ನಿರ್ಧರಿಸಲಾಗಿದೆ.
ಈಗಾಗಲೇ ಕೆಲವೆಡೆ ಮಿಲಿಟರಿ ಪಡೆಯಿಂದ ಪಥ ಸಂಚಲನ ನಡೆಸಲಾಗಿದೆ.
ಕ್ರಿಟಿಕಲ್ ಮತಗಟ್ಟೆಗಳಲ್ಲಿ ಎಸ್‌ಪಿ, ಡಿವೈಎಸ್‌ಪಿ ದರ್ಜೆಯ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ ಎಂದು ಪೊಲೀಸ್ ಮೂಲಗಳು ‘ವಿಜಯವಾಣಿ’ಗೆ ತಿಳಿಸಿವೆ.
ಶಾಂತಿಯುತ ಮತದಾನಕ್ಕಾಗಿ ಹಿಂದಿನ ಚುನಾವಣೆ ಆಧರಿಸಿ ಜಿಲ್ಲೆಯಲ್ಲಿ ೧೮ ಮತಗಟ್ಟೆಗಳನ್ನು ವಲ್ನರೇಬಲ್ ಎಂದು ಮತ್ತು ೩೨೧ ಮತಗಟ್ಟೆಗಳನ್ನು ಕ್ರಿಟಿಕಲ್ ಎಂದು ಗುರುತಿಸಲಾಗಿದೆ. ಈ ಮತಗಟ್ಟೆಗಳಿಗೆ ಅಗತ್ಯವಾದ ಎಲ್ಲ ರೀತಿಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.- ರಘುನಂದನ ಮೂರ್ತಿ ಜಿಲ್ಲಾಧಿಕಾರಿ
ಜಿಲ್ಲೆಯಲ್ಲಿ ಚುನಾವಣೆ ಸಂದರ್ಭದಲ್ಲಿ ದೊಡ್ಡ ಮಟ್ಟದ ಅಹಿತಕರ ಘಟನೆಗಳು ನಡೆದಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಜಿಲ್ಲಾಧಿಕಾರಿಯವರ ಮಾರ್ಗದರ್ಶನದಲ್ಲಿ ಆಯ್ದ ಮತಗಟ್ಟೆಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗುತ್ತಿದೆ.
- ಡಾ. ಶಿವಕುಮಾರ ಗುಣಾರೆ ಎಸ್‌ಪಿ