

ನುಗ್ಗೇಹಳ್ಳಿ: ಚನ್ನರಾಯಪಟ್ಟಣ ತಾಲೂಕಿನ 63 ಸಾವಿರ ಎಕರೆ ಭೂಮಿಯಲ್ಲಿ ಸುಮಾರು 316 ಕೋಟಿ ರೂ. ಬೆಲೆಯ ರಾಗಿ ಹಾಗೂ ಮೆಕ್ಕೆಜೋಳ ಹಾನಿಯಾಗಿದೆ. ಸರ್ಕಾರಗಳು ಕೂಡಲೇ ರೈತರಿಗೆ ಬೆಳೆ ಪರಿಹಾರ ಕೊಡಬೇಕೆಂದು ಶಾಸಕ ಎಚ್.ಡಿ. ರೇವಣ್ಣ ಆಗ್ರಹಿಸಿದರು.
ಹೋಬಳಿಯ ಅತ್ತಿಹಳ್ಳಿ ಗ್ರಾಮದ ಶ್ರೀ ದೊಡ್ಡಮ್ಮ ದೇವಿ ಹಾಗೂ ಶ್ರೀ ಚಿಕ್ಕಮ್ಮ ದೇವಿರ ಪ್ರತಿಷ್ಠಾಪನೆ ಧಾರ್ಮಿಕ ಸಮಾರಂಭವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಶಾಸಕರ ನಿಯೋಗ ಕೇಂದ್ರ ಸಚಿವರನ್ನು ಭೇಟಿ ಮಾಡಿ ಕೊಬ್ಬರಿಗೆ ಹದಿನೈದು ಸಾವಿರ ರೂ. ಬೆಲೆ ನಿಗದಿಪಡಿಸಲು ಮನವಿ ಮಾಡುವುದಾಗಿ ಹೇಳಿದರು.
ಉಪಮುಖ್ಯಮಂತ್ರಿಗಳು ಅಧಿಕಾರಕ್ಕೆ ಬಂದ ಕೂಡಲೇ ಕೊಬ್ಬರಿ ಕ್ವಿಂಟಾಲ್‌ಗೆ ರೂ. 15 ಸಾವಿರ ರೂ. ನಿಗದಿಪಡಿಸುವುದಾಗಿ ಭರವಸೆ ನೀಡಿದ್ದರು. ಅದನ್ನು ಮರೆತು ಈಗ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಆರೋಪಿಸಿದರು.
ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಸಿ.ಎನ್.ಬಾಲಕೃಷ್ಣ, ಎ. ಮಂಜು, ಎಚ್. ಪಿ. ಸ್ವರೂಪ್ ಪ್ರಕಾಶ್, ಗ್ರಾಮ ಪಂಚಾಯಿತಿ ಸದಸ್ಯ ಹಿರಿಯಣ್ಣಗೌಡ, ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ಎಚ್.ಪಿ. ಸಂಪತ್‌ಕುಮಾರ್, ಅನಿತಾ ಮಹೇಶ್, ಮುಖಂಡರಾದ ಬಾಂಬೆ ಚಂದ್ರಣ್ಣ, ಶಿವ ನಾಗೇಂದ್ರಬಾಬು, ಮಂಜಣ್ಣ, ನಾಗೇಂದ್ರ, ಮೋಹನ್‌ಕುಮಾರ್ ಇತರರು ಇದ್ದರು.