

ಬೆಂಗಳೂರು: ರಾಜ್ಯದಲ್ಲಿ ಸೋಮವಾರದಿಂದ 14 ದಿನಗಳ ಕಾಲ ಕಟ್ಟುನಿಟ್ಟಿನ ಲಾಕ್ಡೌನ್ ಮಾಡುವುದಾಗಿ ಸರ್ಕಾರ ಘೋಷಿಸಿದೆ. ಈ ನಡುವೆ ಕರ್ಫ್ಯೂ ಜಾರಿಯಲ್ಲಿದ್ದು ಅದನ್ನು ಉಲ್ಲಂಘಿಸಿ ರಸ್ತೆಗೆ ಇಳಿಯುವವರಿಗೆ ಪೊಲೀಸರು, ಕಟ್ಟುನಿಟ್ಟಿನ ಲಾಕ್ಡೌನ್ ತೀವ್ರತೆ ಕುರಿತು ಇಂದೇ ಸ್ಪಷ್ಟ ಎಚ್ಚರಿಕೆಯನ್ನು ನೀಡಿದ್ದಾರೆ.
ಕರ್ಫ್ಯೂ ಸಂದರ್ಭದಲ್ಲಿ ವಾಹನಗಳೊಂದಿಗೆ ರಸ್ತೆಗೆ ಇಳಿದಿರುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ರಾಜಧಾನಿ ಬೆಂಗಳೂರಿನಲ್ಲಿ 20 ಗಂಟೆಗಳ ಅವಧಿಯಲ್ಲಿ 3 ಸಾವಿರ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಮಾತ್ರವಲ್ಲ, ಇನ್ನು ಕರ್ಫ್ಯೂ ವೇಳೆ ವಾಹನವೇರಿ ಸವಾರಿ ಹೊರಡುವವರಿಗೆ ಸದ್ಯಕ್ಕಂತೂ ಅವರ ವಾಹನ ವಾಪಸ್ ಸಿಗುವುದಿಲ್ಲ ಎಂಬ ಎಚ್ಚರಿಕೆಯನ್ನು ಮತ್ತೊಮ್ಮೆ ನೀಡಿದ್ದಾರೆ.
ಸೋಮವಾರದಿಂದ ಲಾಕ್ಡೌನ್ ಜಾರಿಯಾಗುವ ಹಿನ್ನೆಲೆಯಲ್ಲಿ ಇಂದಿನಿಂದಲೇ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವ ಪೊಲೀಸರು ಇಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 8ರ ವರೆಗೆ ಕಾರ್ಯಾಚರಣೆ ನಡೆಸಿ 3000 ವಾಹನಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಆ ಪೈಕಿ ದ್ವಿಚಕ್ರ ವಾಹನ 2723, ತ್ರಿಚಕ್ರವಾಹನ 171 ಹಾಗೂ ನಾಲ್ಕು ಚಕ್ರದ ವಾಹನಗಳು 106 ಇವೆ.