30 ಕೇಂದ್ರಗಳಲ್ಲಿ ಪಿಯು ಪರೀಕ್ಷೆಗೆ ಸಿದ್ಧತೆ

19KWR4
Published on

ಕಾರವಾರ: ಜಿಲ್ಲೆಯ 30 ಪರೀಕ್ಷಾ ಕೇಂದ್ರಗಳಲ್ಲಿ ವ್ಯವಸ್ಥಿತವಾಗಿ ದ್ವಿತೀಯ ಪಿಯು ಪರೀಕ್ಷೆ ನಡೆಸಲು ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಡಿಡಿಪಿಯು ಎಸ್.ಎನ್. ಹೆಗಡೆ ತಿಳಿಸಿದರು.

ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯಲ್ಲಿ ಬುಧವಾರ ಆಯೋಜಿಸಿದ ನೇರ ಫೋನ್ ಹಾಗೂ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

14 ಸಾವಿರ ವಿದ್ಯಾರ್ಥಿಗಳು ಮಾ. 4ರಿಂದ ಆರಂಭವಾಗುವ ಪರೀಕ್ಷೆ ಬರೆಯಲಿದ್ದಾರೆ. ಎಲ್ಲ ಪರೀಕ್ಷೆ ಕೇಂದ್ರಗಳಿಗೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗಟ್ಟಲು ಮುಂಜಾಗ್ರತೆ ಕ್ರಮ ವಹಿಸಲಾಗಿದೆ. ಎಲ್ಲ ತಾಲೂಕುಗಳ ತಹಸೀಲ್ದಾರ್, ಬಿಇಒ ಹಾಗೂ ಹಿರಿಯ ಪ್ರಾಂಶುಪಾಲರ ಸಮಿತಿ ರಚಿಸಲಾಗಿದೆ. ಶಿರಸಿ ಹಾಗೂ ಕಾರವಾರ ಖಜಾನೆಯಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಭದ್ರವಾಗಿಡಲು ವ್ಯವಸ್ಥೆ ಮಾಡಲಾಗಿದೆ. ಅದನ್ನು ಸಾಗಿಸುವ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗುತ್ತಿದೆ. ಪ್ರಶ್ನೆ ಪತ್ರಿಕೆ ವಿತರಣೆ ಕಾರ್ಯ ವ್ಯವಸ್ಥಿತವಾಗಿ ನಡೆದಿದೆಯೇ ಎಂಬ ಬಗ್ಗೆ ಜಿಲ್ಲಾಧಿಕಾರಿ ಕಚೇರಿಯಿದ ವೆಬ್ ಕಾಸ್ಟಿಂಗ್ ಮೂಲಕ ಪರಿಶೀಲಿಸಲು ಇದೇ ಮೊದಲ ಬಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದರು.

ಇದೇ ಮೊದಲ ಬಾರಿಗೆ 40 ಪುಟಗಳ ಪುಸ್ತಕದ ಉತ್ತರ ಪತ್ರಿಕೆ ನೀಡಲಾಗುತ್ತಿದೆ. ಉತ್ತರ ಪತ್ರಿಕೆಯು ಉತ್ತಮ ಗುಣಮಟ್ಟದ್ದಾಗಿದ್ದು, ಹೆಚ್ಚುವರಿ ಸಾಲುಗಳನ್ನು ಹೊಂದಿದೆ. ಇದರಿಂದ ವಿದ್ಯಾರ್ಥಿಗಳು ಪುರವಣಿ ಪಡೆಯುವ ಅವಶ್ಯಕತೆ ಇರುವುದಿಲ್ಲ ಎಂದರು.

ಉಚಿತ ಪ್ರಯಾಣ: ದ್ವಿತೀಯ ಪಿಯುಸಿ ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್​ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಪರೀಕ್ಷೆಯ ಪ್ರವೇಶ ಪತ್ರ ತೋರಿಸಿದಲ್ಲಿ ಬಸ್​ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು.

ಜಾತ್ರೆಯಲ್ಲಿ ತೊಂದರೆಯಾಗದಂತೆ ಕ್ರಮ
ಶಿರಸಿ ಮಾರಿಕಾಂಬಾ ಸರ್ಕಾರಿ ಪಿಯು ಕಾಲೇಜ್​ನ ಪ್ರಾಂಶುಪಾಲ ಬಾಲಚಂದ್ರ ಭಟ್​ವಾತನಾಡಿ, ಜಿಲ್ಲೆಯಲ್ಲಿ ಶಿರಸಿ ಮಾರಿಕಾಂಬಾ ಜಾತ್ರೆ ಹಾಗೂ ಪರೀಕ್ಷೆಗಳು ಏಕಕಾಲದಲ್ಲಿ ಪ್ರಾರಂಭವಾಗುತ್ತಿರುವುದರಿಂದ ಪಾಲಕರು ತಮ್ಮ ಮಕ್ಕಳನ್ನು ಪರೀಕ್ಷೆ ಕೇಂದ್ರಗಳತ್ತ ಕರೆದೊಯ್ಯಲು ಮುತುವರ್ಜಿ ವಹಿಸಬೇಕು. ಈಗಾಗಲೇ ಪಾಲಕರ ಸಭೆಯಲ್ಲಿ ಅನೇಕ ಮಾಹಿತಿಗಳನ್ನು ನೀಡಲಾಗಿದೆ. ಇನ್ನು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲು ಎನ್​ಡಬ್ಲ್ಯುಕೆಆರ್​ಟಿಸಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳಲ್ಲಿ ವಿನಂತಿಸಲಾಗಿದೆ ಎಂದರು.

ತಮ್ಮ ಮಕ್ಕಳ ಒತ್ತಡ ಮತ್ತು ಆತಂಕ ಕಡಿಮೆ ಮಾಡುವ ಹಿತದೃಷ್ಟಿಯಿಂದ ಪಾಲಕರು ಕೂಡ ಟಿವಿ ಮತ್ತು ಇತರ ಮನರಂಜನಾ ಕಾರ್ಯಕ್ರಮಗಳಲ್ಲಿ ತೊಡಗುವುದನ್ನು ಕಡಿಮೆ ಮಾಡಿಕೊಳ್ಳುವುದು ಒಳಿತು. ವಿದ್ಯಾರ್ಥಿಗಳು ಈ ಅವಧಿಯಲ್ಲಿ ತಮ್ಮ ಆರೋಗ್ಯದತ್ತ ಹೆಚ್ಚು ಗಮನ ವಹಿಸಬೇಕು. | ಸತೀಶ ನಾಯ್ಕ ಕುಮಟಾ ಸರ್ಕಾರಿ ಪಿಯು ಕಾಲೇಜ್ ಪ್ರಾಂಶುಪಾಲ

ಕಳೆದ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ನಾಲ್ಕನೇ ಸ್ಥಾನ ಪಡೆದಿತ್ತು. ಈ ಬಾರಿ ಮೊದಲ ಸ್ಥಾನಕ್ಕೇರಲು ಎಲ್ಲ ಸಿದ್ಧತೆ ನಡೆಸಲಾಗಿದೆ. ಪೂರಕ ಪರೀಕ್ಷೆಗಳಲ್ಲಿ 40ಕ್ಕಿಂತ ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ವಿಶೇಷ ತರಗತಿ ನಡೆಸಲಾಗುತ್ತಿದೆ. ಮಕ್ಕಳು, ಪಾಕರನ್ನು ಸೇರಿಸಿ ಸಂವಾದ ನಡೆಸಲಾಗಿದೆ. ಎಸ್.ಎನ್. ಹೆಗಡೆ ಡಿಡಿಪಿಯು ಕಾರವಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net