ಜಲದುರಂತಕ್ಕೆ ಅಪ್ಪ-ಮಗಳ ಸಹಿತ ಒಂದೇ ಕುಟುಂಬದ ಮೂವರು ಬಲಿ; ಒಬ್ಬರನ್ನು ರಕ್ಷಿಸಲೆಂದು ಇಬ್ಬರು ನೀರಿಗೆ ಧುಮುಕಿದ್ದರು..

Untitled
ದುರಂತ ಸಂಭವಿಸಿದ ನದಿ ತೀರ
Published on

ಬಾಗಲಕೋಟೆ: ನದಿಯೊಂದರಲ್ಲಿ ನಡೆದ ಅವಘಡದಲ್ಲಿ ಅಪ್ಪ-ಮಗಳ ಸಹಿತ ಒಂದೇ ಕುಟುಂಬದ ಮೂವರು ಸಾವಿಗೀಡಾಗಿದ್ದಾರೆ. ಆ ಪೈಕಿ ಇಬ್ಬರ ಶವ ಪತ್ತೆಯಾಗಿದ್ದು, ಇನ್ನೊಬ್ಬರ ಮೃತದೇಹಕ್ಕಾಗಿ ಹುಡುಕಾಟ ಮುಂದುವರಿದಿದೆ.

ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ಕೊಟೇಕಲ್ ಗ್ರಾಮದವರಾದ ಶ್ರೀದೇವಿ ಮಾವಿನಮರದ (32), ವಿಶ್ವನಾಥ ಮಾವಿನಮರದ (40) ಮತ್ತು ನಂದಿನಿ ಮಾವಿನಮರದ (12) ಮೃತಪಟ್ಟವರು.

ಗದಗ ಜಿಲ್ಲೆಯ ರೋಣದಲ್ಲಿ ವಾಸವಾಗಿದ್ದ ಇವರು ಕುಟುಂಬದ ಒಟ್ಟು ಆರು ಜನರೊಂದಿಗೆ ಬಾದಾಮಿಯ ಬನಶಂಕರಿ ದೇವಿಯ ದರ್ಶನಕ್ಕೆ ಆಗಮಿಸಿದ್ದರು. ದೇವಿ ದರ್ಶನ ಪಡೆದ ಬಳಿ ಬಾದಾಮಿಯ ಶಿವಯೋಗ ಮಂದಿರಕ್ಕೆ ಭೇಟಿ ನೀಡಿದ್ದರು. ನಂತರ ಊಟ ಸೇವಿಸಲು ಶಿವಯೋಗಮಂದಿರದ ಬಳಿ ಮಲಪ್ರಭಾ ನದಿ ದಡದಲ್ಲಿ ಕುಳಿತಿದ್ದರು. ಊಟದ ಬಳಿಕ ಶ್ರೀದೇವಿ ಮಾವಿನಮರದ ಅವರು ನದಿಯಲ್ಲಿ ಕೈ ತೊಳೆಯಲು ಹೋಗಿ ಕಾಲು ಜಾರಿ ಆಯತಪ್ಪಿ ನೀರಿಗೆ ಬಿದ್ದಿದ್ದರು.

ಅತ್ತಿಗೆಯನ್ನು ರಕ್ಷಿಸಲು ಮೈದುನ ವಿಶ್ವನಾಥ ಹಾಗೂ ಅವರ ಪುತ್ರಿ ನಂದಿನಿ ಇಬ್ಬರೂ ನೀರಿಗೆ ಇಳಿದಿದ್ದರು. ಆದರೆ ನೀರಿನಲ್ಲಿ ಮೂವರು ಕೊಚ್ಚಿಹೋಗಿದ್ದರು. ಅದನ್ನು ಗಮನಿಸಿದ ಗ್ರಾಮಸ್ಥರು ರಕ್ಷಣೆಗೆ ಧಾವಿಸಿದ್ದು, ಶ್ರೀದೇವಿ ಹಾಗೂ ವಿಶ್ವನಾಥ ಇಬ್ಬರ ಶವಗಳನ್ನೂ ನೀರಿನಿಂದ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನೂ ಪತ್ತೆಯಾಗದ ನಂದಿನಿಗಾಗಿ ಸ್ಥಳೀಯ ಈಜುಗಾರರು, ಅಗ್ನಿಶಾಮಕ ದಳದ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾರೆ. ಸ್ಥಳಕ್ಕೆ ಬಾದಾಮಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶೋಧ ಕಾರ್ಯ ಮುಂದುವರಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net