

ಮಂಡ್ಯ: ಗಂಡನ ಅಕ್ರಮ ಸಂಬಂಧಕ್ಕೆ ಬೇಸತ್ತ ನರ್ಸ್ವೊಬ್ಬರು ತನ್ನ ಮೂವರು ಮಕ್ಕಳಿಗೆ ವಿಷವುಣಿಸಿ ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯಲ್ಲಿ ಸಂಭವಿದೆ. 10 ವರ್ಷದ ಹಿಂದೆ ಪ್ರೀತಿಸಿ ಮದ್ವೆಯಾದಾಕೆಯ ಬಾಳಲ್ಲಿ ಗಂಡ ಆಡಿದ ಆಟ ಅಷ್ಟಿಷ್ಟಲ್ಲ.
ತುಮಕೂರು ಮೂಲದ ಉಸ್ನಾ ಕೌಸರ್ (30) ಮತ್ತು ಈಕೆಯ ಮಕ್ಕಳಾದ ಹ್ಯಾರಿಸ್(7), ಆಲಿಸಾ (4) ಮತ್ತು ಅನಮ್ ಫಾತಿಮಾ (2) ಮೃತ ದುರ್ದೈವಿಗಳು. 10 ವರ್ಷದ ಹಿಂದೆ ಉಸ್ನಾ ಕೌಸರ್ ಶಿವನಸಮುದ್ರಕ್ಕೆ ಟ್ರಿಪ್ಗೆ ಹೋಗಿದ್ದಳು. ಆ ವೇಳೆ ಮದ್ದೂರಿನ ಅಖಿಲ್ ಅಹಮದ್ ಎಂಬಾತನೂ ಪ್ರವಾಸಕ್ಕೆ ತೆರಳಿದ್ದ. ಉಸ್ನಾ ಕೌಸರ್ನನ್ನು ನೋಡಿ ಮನಸೋತ ಈತ, ತನ್ನ ಮೊಬೈಲ್ ನಂಬರ್ ಅನ್ನು ಚೀಟಿಯಲ್ಲಿ ಬರೆದು ಆಕೆಯನ್ನ ಎಸೆದಿದ್ದ. ನಂತರ ಇಬ್ಬರೂ ಫೋನ್ ಮೂಲಕ ಮಾತುಕತೆ ನಡೆಸುತ್ತಾ ಪ್ರೀತಿಸಿದ್ದರು. ಕುಟುಂಬಸ್ಥರನ್ನು ಒಪ್ಪಿಸಿ ಮದುವೆ ಕೂಡ ಆಗಿದ್ದರು.
ಅಖಿಲ್ ಅಹಮದ್ ಚನ್ನಪಟ್ಟಣದಲ್ಲಿ ಸ್ವಂತ ಗ್ಯಾರೇಜ್ ನಡೆಸುತ್ತಿದ್ದ. ದಂಪತಿಗೆ ಮೂರು ಮುದ್ದಾದ ಮಕ್ಕಳಿದ್ದರು. ಈ ಹಿಂದೆ ಜಯದೇವ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡ್ತಿದ್ದ ಉಸ್ನಾ, ಇತ್ತೀಚಿಗೆ ಮಂಡ್ಯದ ಖಾಸಗಿ ಕ್ಲಿನಿಕ್ ನಲ್ಲಿ ಕೆಲಸ ಮಾಡುತ್ತಿದ್ದಳು. ತುಂಬಾ ಸಭ್ಯಸ್ತನಂತೆ ಅಖಿಲ್ ಅಹಮದ್ ಇದ್ದ. ಎರಡು ತಿಂಗಳ ಹಿಂದೆ ಅಪರಿಚಿತನೊಬ್ಬ ಉಸ್ನಾಗೆ ಕಾಲ್ ಮಾಡಿ ಕಣ್ಣೀರು ಹಾಕಿದ್ದ. 'ತನ್ನ ಪತ್ನಿಯೊಂದಿಗೆ ನಿನ್ನ ಗಂಡ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ. ನನ್ನ ಸಂಸಾರ ಹಾಳಾಗ್ತಿದೆ. ದಯವಿಟ್ಟು ನನ್ನ ಪತ್ನಿಯ ಸಹವಾಸ ಬಿಡುವಂತೆ ನಿನ್ನ ಗಂಡನಿಗೆ ಬುದ್ಧಿ ಹೇಳಿ' ಎಂದು ಗೋಗರೆದಿದ್ದ. ಈ ವಿಚಾರ ಕೇಳಿ ಶಾಕ್ ಆದ ಉಸ್ನಾ, ತನ್ನ ಗಂಡನ ಮೊಬೈಲ್ ಫೋನ್ ಪರಿಶೀಲಿಸಿದಾಗ ಬೆಚ್ಚಿಬೀಳಿಸೋ ರಹಸ್ಯ ಬಯಲಾಗಿದೆ.
ಗಂಡನ ಮೊಬೈಲ್ನಲ್ಲಿ ಪರಸ್ತ್ರೀಯ ಬೆತ್ತಲೆ ಚಿತ್ರ ಹಾಗೂ ಆತನ ಫೋಟೋಗಳು ಪತ್ತೆಯಾಗಿದ್ದು, ಇದನ್ನು ಉಸ್ನಾ ಪ್ರಶ್ನಿಸಿದ್ದಳು. 'ಇನ್ನುಂದೆ ಇಂಥಾ ತಪ್ಪು ಮಾಡಲ್ಲ, ದಯವಿಟ್ಟು ಕ್ಷಮಿಸು. ಯಾರಿಗೂ ಈ ವಿಚಾರ ಹೇಳಬೇಡ. ನನ್ನ ಮರ್ಯಾದೆ ಹೋಗುತ್ತೆ' ಎಂದು ಸಮಾಧಾನ ಮಾಡಲು ಯತ್ನಿಸಿದ್ದ. ಈ ವೇಳೆ ಗಲಾಟೆಯೂ ನಡೆದಿತ್ತು. ಮತ್ತೆ ಅಕ್ರಮ ಸಂಬಂಧ ಮುಂದುವರಿಸಿದ್ದಕ್ಕೆ ಬೇಸತ್ತ ಉಸ್ನಾ, ಗಂಡನ ಮನೆಯವರಿಗೆ ವಿಷಯ ತಿಳಿಸಿದ್ದಳು. ಅವರೆಲ್ಲೂ ಮನೆಗೆ ಬಂದು ಅಖಿಲ್ ಅಹಮದ್ಗೆ ಬುದ್ಧಿ ಹೇಳಿದ್ದರು. 4 ದಿನದ ಹಿಂದಷ್ಟೇ ಉಸ್ನಾಳ ತವರು ಮನೆಗೂ ಈ ವಿಚಾರ ಗೊತ್ತಾಗಿ ಗಂಡ-ಹೆಂಡತಿಯನ್ನು ತುಮಕೂರಿಗೆ ಕರೆಸಿಕೊಂಡು ರಾಜಿಪಂಚಾಯಿತಿ ಮಾಡಿ ಕಳುಹಿಸಿದ್ದರು. ಮಗಳ ಜತೆ ತಾಯಿಯೂ ಮದ್ದೂರಿಗೆ ಆಗಮಿಸಿದ್ದರು.
ನ.2ರಂದು ಗ್ರಾಮದಲ್ಲಿ ಉರುಸ್ ಇದ್ದ ಕಾರಣ ಹೊಸ ಬಟ್ಟೆ ತರಲೆಂದು ನಿನ್ನೆ(ನ.10) ಉಸ್ನಾಳ ತಾಯಿ ಹೊರ ಹೋಗಿದ್ದರು. ವಾಪಸ್ ಬರುವಾಗ ಮಗಳಿಗೆ ಕಾಲ್ ಕೂಡ ಮಾಡಿ ಮನೆಗೆ ಬರುತ್ತಿದ್ದೇನೆ ಎಂದೂ ಹೇಳಿದ್ದರು. ಆದರೆ ತಾಯಿ ಬರುವಷ್ಟರಲ್ಲಿ ಮೂರು ಮಕ್ಕಳೊಂದಿಗೆ ಉಸ್ನಾ ದುರಂತ ಅಂತ್ಯ ಕಂಡಿದ್ದಾಳೆ. ಮಕ್ಕಳಿಗೆ ವಿಷವುಣಿಸಿ ಎಲ್ಲರೂ ಸತ್ತ ಬಳಿಕ ಉಸ್ನಾ ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ.
ಆದರೆ, ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಮೃತಳ ತವರು ಮನೆಯವರು ಆರೋಪಿಸಿದ್ದಾರೆ. ಮಗಳ ಮತ್ತು ಮೊಮ್ಮಕ್ಕಳ ಸಾವಿಗೆ ನ್ಯಾಯ ಕೊಡಿಸುವಂತೆ ಮಂಡ್ಯ ಎಸ್ಪಿಗೆ ಮನವಿ ಮಾಡಿದ್ದಾರೆ. ಬೆಡ್ ಮೇಲೆ ಮೂರು ಪುಟ್ಟ ಮಕ್ಕಳ ಶವಗಳು ಮಲಗಿದ ಸ್ಥಿತಿಯಲ್ಲಿ ಬಿದ್ದಿದ್ದವು. ಈ ದೃಶ್ಯ ಕರುಳು ಹಿಂಡುವಂತಿತ್ತು. ನೂರಾರು ಕನಸಿನೊಂದಿಗೆ ಪ್ರೀತಿಸಿ ಮದುವೆಯಾದವಳ ಬಾಳಲ್ಲಿ ಗಂಡನ ಅಕ್ರಮ ಸಂಬಂಧ ಕೊಳ್ಳಿ ಇಟ್ಟದ್ದು ದುರಂತ.(ದಿಗ್ವಿಜಯ ನ್ಯೂಸ್, ಮಂಡ್ಯ)