ನೆಲ್ಯಾಡಿ ಪೇಟೆಯಲ್ಲಿ ಹೆಚ್ಚುವರಿ 3 ಅಂಡರ್‌ಪಾಸ್ : ಹೋರಾಟ ಸಮಿತಿಗೆ ಸಂಸದ ಚೌಟ ಭರವಸೆ

New Project (3)
Published on

ಉಪ್ಪಿನಂಗಡಿ: ರಾ.ಹೆ ಅಗಲೀಕರಣ ಕಾಮಗಾರಿಯ ವೇಳೆ ನೆಲ್ಯಾಡಿ ಪೇಟೆಯಲ್ಲಿ ಹೆಚ್ಚುವರಿಯಾಗಿ ಮೂರು ಅಂಡರ್‌ಪಾಸ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ನೆಲ್ಯಾಡಿ ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿಗೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಭರವಸೆ ನೀಡಿದ್ದಾರೆ.

ರಾ.ಹೆ.75ರ ಅಡ್ಡಹೊಳೆಯಿಂದ ಬಿ.ಸಿ.ರೋಡ್ ತನಕ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ನೆಲ್ಯಾಡಿ ಪೇಟೆಯಲ್ಲಿ ಎರಡು ಬದಿ ಸರ್ವೀಸ್ ರಸ್ತೆಯ ಪಕ್ಕ ತಡೆಗೋಡೆ ನಿರ್ಮಿಸಿ ಎತ್ತರಿಸಿದ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ವರ್ತಕರಿಗೆ, ಸಾರ್ವಜನಿಕರಿಗೆ ತೊಂದರೆಯಾಗಲಿದೆ. ಮಂಗಳವಾರ ನೆಲ್ಯಾಡಿಗೆ ಆಗಮಿಸಿದ ಸಂಸದ ಕ್ಯಾ.ಬ್ರಿಜೇಶ್ ಚೌಟ ಅವರೊಂದಿಗೆ ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿ ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಭಾಂಗಣದಲ್ಲಿ ಸಭೆ ಸೇರಿ ಚರ್ಚೆ ನಡೆಸಿ ನೆಲ್ಯಾಡಿಯಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ನೆಲ್ಯಾಡಿ ಪೇಟೆಯಲ್ಲಿ ಈಗಾಗಲೇ ಎರಡು ಅಂಡರ್‌ಪಾಸ್ ಮಾಡಲಾಗಿದೆ. ಹೆದ್ದಾರಿ ನಿರ್ಮಾಣ ಕಾಮಗಾರಿಯೂ ಅರ್ಧದಷ್ಟು ಮುಗಿದಿದೆ. ಪೇಟೆಯಲ್ಲಿ ಹೆಚ್ಚುವರಿಯಾಗಿ ಮತ್ತೆ ಮೂರು ಅಂಡರ್‌ಪಾಸ್ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ಭರವಸೆ ನೀಡಿದರು.

ನೆಲ್ಯಾಡಿ-ಕೌಕ್ರಾಡಿ ಪೇಟೆ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಎ.ಕೆ.ವರ್ಗೀಸ್, ನೆಲ್ಯಾಡಿ-ಕೌಕ್ರಾಡಿ ವರ್ತಕ ಮತ್ತು ಕೈಗಾರಿಕಾ ಸಂಘ ಅಧ್ಯಕ್ಷ ಸತೀಶ್ ಕೆ.ಎಸ್.ದುರ್ಗಾಶ್ರೀ, ಪದಾಧಿಕಾರಿಗಳಾದ ಸರ್ವೋತ್ತಮ ಗೌಡ, ಪಿ.ಪಿ.ವರ್ಗೀಸ್, ಉಷಾ ಅಂಚನ್, ನಾಝೀಂ ಸಾಹೇಬ್, ಕೆ.ಪಿ.ತೋಮಸ್, ಕೆ.ಎಂ.ಹನೀಫ್, ಗಣೇಶ್ ರಶ್ಮಿ, ರವಿ ಸುರಕ್ಷಾ, ರಾಮಣ್ಣ ಟೈಲರ್, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಎಸ್.ಗೌಡ ಇಚ್ಲಂಪಾಡಿ, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್, ಕೌಕ್ರಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ಕೆ.ಇಬ್ರಾಹಿಂ ಮತ್ತಿತರರಿದ್ದರು.

ಅಂಗಡಿಮುಂಗಟ್ಟು ಬಂದ್

ನೆಲ್ಯಾಡಿ ಪೇಟೆಯಲ್ಲಿ ಮೇಲ್ಸೇತುವೆ ಹೆದ್ದಾರಿ ನಿರ್ಮಾಣಕ್ಕೆ ಒತ್ತಾಯಿಸಿ ನೆಲ್ಯಾಡಿ ಪೇಟೆಯ ವರ್ತಕರು ಮಂಗಳವಾರ ಮಧ್ಯಾಹ್ನದ ತನಕ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತರಾಗಿ ಬಂದ್ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net