ಆರ್‌ಟಿಐ ಕಾರ್ಯಕರ್ತ ವೆಂಕಟೇಶ್ ಕೊಲೆ ಆರೋಪಿಗಳ ಬಂಧನ

RTI
ಪ್ರದೀಪ್​, ಸತೀಶ್, ತೇಜಸ್​ ಕುಮಾರ್.
Published on

ಬೆಂಗಳೂರು: ಮಾಗಡಿ ರಸ್ತೆ ತಾವರೆಕೆರೆಯ ತೋಟದಲ್ಲಿ ನಡೆದಿದ್ದ ಆರ್‌ಟಿಐ ಕಾರ್ಯಕರ್ತ ವೆಂಕಟೇಶ್ (50) ಕೊಲೆ ಪ್ರಕರಣದ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ತಾವರೆಕೆರೆ ಟೌನ್ ವರಕೆರೆಬೀದಿಯ ಟಿ.ಎನ್. ಪ್ರದೀಪ್ ಕುಮಾರ್ ಅಲಿಯಾಸ್ ಪ್ರದಿ (33), ಮಂಜುನಾಥನಗರದ ಟಿ.ಸಿ. ಸತೀಶ್ (20) ಮತ್ತು ಕೆಂಗೇರಿ ರಸ್ತೆ ಯಲಚಗುಪ್ಪೆಯ ಎಎಸ್‌ಬಿ ಲೇಔಟ್‌ನ ತೇಜಸ್ ಕುಮಾರ್ (22) ಬಂಧಿತರು. ಉಳಿದವರ ಬಂಧನಕ್ಕೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೋಟದಲ್ಲಿ ನಿರ್ಮಿಸಿದ್ದ ಕಚೇರಿಯಲ್ಲಿ ವೆಂಕಟೇಶ್ ಇದ್ದಾಗ ಸ್ಕೂಟರ್‌ನಲ್ಲಿ ಬಂದ ಆರೋಪಿಗಳು ಜೋರಾಗಿ ಹಾರ್ನ್​ ಮಾಡಿದ್ದರು. ಹೊರ ಬಂದ ವೆಂಕಟೇಶ್ ಅವರ ಕೈ ಮತ್ತು ಕಾಲು ಕತ್ತರಿಸಿದ್ದರು. ಗಾಯಾಳುವಿನ ಚೀರಾಟ ಕೇಳಿ ಸ್ಥಳೀಯರು ಬಂದು ವೆಂಕಟೇಶ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಜು.18ರಂದು ಗಾಯಾಳು ಮೃತಪಟ್ಟಿದ್ದರು.

ತಾವರೆಕೆರೆ ಸುತ್ತಮುತ್ತ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ವೆಂಕಟೇಶ್ ಆರ್‌ಟಿಐ ಅರ್ಜಿ ಸಲ್ಲಿಸುತ್ತಿದ್ದರು. ಇತ್ತೀಚೆಗೆ ಯಲಚಗುಪ್ಪೆಯಲ್ಲಿ ಗೋಮಾಳ ಒತ್ತುವರಿ ಕುರಿತು ಅರ್ಜಿ ಸಲ್ಲಿಸಿದ್ದರು. ಇದಲ್ಲದೆ, ತಾವರೆಕೆರೆ ಕೆರೆ, ಗಂಗಮ್ಮನ ಕೆರೆ ಒತ್ತುವರಿ ಮತ್ತು ಅಭಿವೃದ್ಧಿ ಕಾಮಗಾರಿ ಕುರಿತು ಮಾಹಿತಿ ಕೋರಿದ್ದರು. ಇದೇ ವಿಚಾರಕ್ಕೆ ಆರೋಪಿಗಳು ದ್ವೇಷಕಾರಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಉಳಿದ ಆರೋಪಿಗಳು ಸೆರೆಸಿಕ್ಕರೆ ಯಾವ ಕೇಸಿಗೆ ಸಂಬಂಧಪಟ್ಟ ವಿಚಾರಕ್ಕೆ ಹತ್ಯೆ ಮಾಡಿದ್ದಾರೆ ಎಂದು ನಿಖರವಾಗಿ ತಿಳಿದು ಬರಲಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net