

ಬೆಂಗಳೂರು: ರಾಜ್ಯಾದ್ಯಂತ ಡಿ.18ರಂದು ನಡೆದ ಬೃಹತ್ ಲೋಕ ಅದಾಲತ್ನಲ್ಲಿ ಒಟ್ಟು 3.37 ಲಕ್ಷ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗಿದೆ. ಹೈಕೋರ್ಟ್ನಲ್ಲಿ ಸೋಮವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಗಳ ಪ್ರಾಧಿಕಾರದ (ಕೆಎಸ್ಎಲ್ಎಸ್ಎ) ಕಾರ್ಯನಿರ್ವಾಹಕ ಅಧ್ಯಕ್ಷರೂ ಆಗಿರುವ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ ಈ ಬಗ್ಗೆ ಮಾಹಿತಿ ನೀಡಿದರು.
ನ್ಯಾಯಾಲಯಗಳಲ್ಲಿ ಬಾಕಿ ಇದ್ದ 3,29,074 ಪ್ರಕರಣಗಳು ಹಾಗೂ 8,606 ವ್ಯಾಜ್ಯಪೂರ್ವ ಪ್ರಕರಣಗಳು ಸೇರಿ ಒಟ್ಟು 3,37,680 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಇದರಿಂದ, ರಾಜ್ಯದ ವಿವಿಧ ನ್ಯಾಯಾಲಯಗಳ ಅಂದಾಜು 1,100 ನ್ಯಾಯಾಧೀಶರು ಒಂದು ವರ್ಷದಲ್ಲಿ ಇತ್ಯರ್ಥಪಡಿಸಬಹುದಾದ ಪ್ರಕರಣಗಳನ್ನು ಒಂದೇ ದಿನದಲ್ಲಿ ಬಗೆಹರಿಸಿದಂತಾಗಿದೆ ಎಂದು ಬಿ. ವೀರಪ್ಪ ತಿಳಿಸಿದರು.
862 ಕೋಟಿ ಪರಿಹಾರ: ಲೋಕ ಅದಾಲತ್ನಲ್ಲಿ ಒಟ್ಟು 5,53,726 ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಗುರುತಿಸಲಾಗಿತ್ತು. ಗ್ರಾಹಕ ನ್ಯಾಯಾಲಯ ಮತ್ತು ಸಾಲ ವಸೂಲಾತಿ ನ್ಯಾಯಾಧಿಕರಣಗಳಲ್ಲಿನ 551 ಪ್ರಕರಣಗಳೂ ಸೇರಿ 3,37,680 ಪ್ರಕರಣ ಇತ್ಯರ್ಥಪಡಿಸಲಾಗಿದೆ. ಕಕ್ಷಿದಾರರಿಗೆ ಒಟ್ಟು 862,08,20,145 ರೂ. ಪರಿಹಾರ ಕೊಡಿಸಲಾಗಿದೆ. ವಾಣಿಜ್ಯ ನ್ಯಾಯಾಲಯಗಳ ಒಟ್ಟು 113 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 157,18,21,548 ರೂ. ಪರಿಹಾರ ಕೊಡಿಸಲಾಗಿದ್ದರೆ, ಕೈಗಾರಿಕಾ ನ್ಯಾಯಾಲಯಗಳ 25 ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ 2,03,74,837 ರೂ. ಪರಿಹಾರದ ಮೊತ್ತ ಪಾವತಿಸಲಾಗಿದೆ.
ಸರ್ಕಾರಕ್ಕೂ ಉಳಿತಾಯ: ಲೋಕ ಅದಾಲತ್ನಲ್ಲಿ ವಿವಿಧ ಪ್ರಕರಣಗಳಿಂದ ಸರ್ಕಾರಕ್ಕೆ ಬರಬೇಕಿದ್ದ 79,72,09,655 ರೂ. ದಂಡ ವಸೂಲಿ ಮಾಡಿಕೊಡಲಾಗಿದೆ. ಜತೆಗೆ, ಇಷ್ಟೊಂದು ಪ್ರಕರಣಗಳ ವಿಚಾರಣೆಗೆ ನ್ಯಾಯಾಲಯಗಳು ಕಲಾಪ ನಡೆಸಿದ್ದರೆ ನ್ಯಾಯಾಧೀಶರು ಮತ್ತು ಸಿಬ್ಬಂದಿ ವೇತನ ಮತ್ತಿತರ ಕಾರಣಗಳಿಗಾಗಿ ಸರ್ಕಾರ 132,60,52,698 ರೂ. ಗಳನ್ನು ವೆಚ್ಚ ಮಾಡಬೇಕಿತ್ತು. ಒಂದೇ ದಿನದಲ್ಲಿ 3 ಲಕ್ಷಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥಗೊಂಡಿರುವ ಕಾರಣ ಸರ್ಕಾರಕ್ಕೆ ಆ ಹಣ ಉಳಿತಾಯವಾದಂತಾಗಿದೆ.
39 ಬಿಬಿಎಂಪಿ ಪ್ರಕರಣಗಳು ಇತ್ಯರ್ಥ: ಹೈಕೋರ್ಟ್ ಕಾನೂನು ಸೇವೆಗಳ ಸಮಿತಿ (ಎಚ್ಸಿಎಲ್ಎಸ್ಸಿ) ವತಿಯಿಂದ ಬೆಂಗಳೂರು, ಧಾರವಾಡ ಹಾಗೂ ಕಲಬುರಗಿ ಪೀಠಗಳಲ್ಲಿ ನಡೆದ ಲೋಕ ಅದಾಲತ್ನಲ್ಲಿ ಒಟ್ಟು 1,407 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಇದರಲ್ಲಿ ಬಿಬಿಎಂಪಿಗೆ ಸಂಬಂಧಿಸಿದ 39 ಪ್ರಕರಣಗಳೂ ಸೇರಿವೆ. ಎಚ್ಸಿಎಲ್ಎಸ್ಸಿ ಇತಿಹಾಸದಲ್ಲೇ ಮೊದಲ ಬಾರಿಗೆ ಈ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.
ಮತ್ತೆ ಒಂದಾದ 37 ದಂಪತಿ: ಈ ಬಾರಿಯ ಲೋಕ ಅದಾಲತ್ನಲ್ಲಿ ಒಟ್ಟು 1,528 ಕೌಟುಂಬಿಕ ವ್ಯಾಜ್ಯಗಳನ್ನು ಇತ್ಯರ್ಥಪಡಿಸಲಾಗಿದ್ದು, ಅವುಗಳಲ್ಲಿ ಮೈಸೂರಿನ 25 ಪ್ರಕರಣಗಳು, ಹುಬ್ಬಳ್ಳಿ-ಧಾರವಾಡದ 2, ಗದಗದ 8, ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರದ ತಲಾ 1 ಪ್ರಕರಣಗಳು ಸೇರಿ ಒಟ್ಟು 37 ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡು ಸತಿ-ಪತಿ ಮತ್ತೆ ಒಂದಾಗಿದ್ದಾರೆ. ಇದರೊಂದಿಗೆ 2021ರಲ್ಲಿ ಲೋಕ ಅದಾಲತ್ ಮೂಲಕ 100ಕ್ಕೂ ಅಧಿಕ ದಂಪತಿ ವ್ಯಾಜ್ಯ ತೊರೆದು ಸಹಬಾಳ್ವೆ ನಡೆಸಲು ಮುಂದಾದಂತಾಗಿದೆ.