

ಯಳಂದೂರು: ಗುಂಬಳ್ಳಿ ಪ್ರೌಢಶಾಲೆಯ ಶಿಕ್ಷಕ ಎಂ.ವೀರಭದ್ರಸ್ವಾಮಿ ಅವರನ್ನು ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಅಮಾನತುಗೊಳಿಸಿರುವ ಕ್ರಮವನ್ನು ಖಂಡಿಸಿ ವಿದ್ಯಾರ್ಥಿಗಳು, ಪಾಲಕರು ನಡೆಸುತ್ತಿರುವ ಪ್ರತಿಭಟನೆ 2ನೇ ದಿನವೂ ಮುಂದುವರಿದಿದ್ದು ವಿದ್ಯಾರ್ಥಿಗಳು ಗುರುವಾರವೂ ಶಾಲೆಗೆ ಗೈರಾಗಿದ್ದಾರೆ.
ಶಾಲೆಯ ಶಿಕ್ಷಕ ಪ್ರವಾಸದ ವೇಳೆ ಬಸ್ ಓಡಿಸಿರುವುದು ಚಾಲಕ ಅನಾರೋಗ್ಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲು ಅವರು ಬಸ್ ಚಾಲನೆ ಮಾಡಿದ್ದಾರೆ. ಆದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಾಲಾ ಮಕ್ಕಳು ಹಾಗೂ ಇತರ ಶಿಕ್ಷಕರ ಹೇಳಿಕೆಯನ್ನು ಪಡೆಯದೆ ಉಪ ನಿರ್ದೇಶಕರಿಗೆ ಈ ಬಗ್ಗೆ ವರದಿ ಸಲ್ಲಿಸಿದ್ದಾರೆ. ಈ ವರದಿಯ ಆಧಾರದ ಮೇಲೆ ಏಕಾಏಕಿ ಉಪ ನಿರ್ದೇಶಕರು ಅವರನ್ನು ಅಮಾನತುಗೊಳಿಸಿದ್ದಾರೆ. ಅವರು ಮಾನವೀಯತೆ ತೋರಿ, ಮಕ್ಕಳ ಪ್ರಾಣ ರಕ್ಷಣೆ ಮಾಡಿರುವುದು ತಪ್ಪೇ ಎಂದು ಪಾಲಕರು, ವಿದ್ಯಾರ್ಥಿಗಳು ಹಾಗೂ ಎಸ್‌ಡಿಎಂಸಿ ಸದಸ್ಯರು ಪ್ರಶ್ನಿಸಿ ಬುಧವಾರ ಪ್ರತಿಭಟನೆ ನಡೆಸಿದ್ದರು. ಇದು ಗುರುವಾರವೂ ಮುಂದುವರಿದು ವಿದ್ಯಾರ್ಥಿಗಳು ಶಾಲೆಗೆ ಗೈರಾಗಿದ್ದರು.
ಉಪ ನಿರ್ದೇಶಕ ಭೇಟಿ, ವಾಗ್ವಾದ: ಸ್ಥಳಕ್ಕೆ ಶಿಕ್ಷಣ ಇಲಾಖೆಯ ಉಪ ನಿರ್ದೆಶಕ ರಾಮಚಂದ್ರರಾಜೇ ಅರಸ್ ಗುರುವಾರ ಶಾಲೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರಾಜಣ್ಣ ಸದಸ್ಯರು ಹಾಗೂ ಪಾಲಕರು ಮತ್ತು ಗ್ರಾಮಸ್ಥರು ಹಾಜರಿದ್ದರು. ಏಕಾಏಕಿ ವೀರಭದ್ರಸ್ವಾಮಿ ಅವರನ್ನು ಅಮಾನತು ಮಾಡಿರುವ ಬಗ್ಗೆ ಸ್ಪಷ್ಟನೆ ನೀಡಬೇಕು ಈ ಆದೇಶವನ್ನು ಹಿಂಪಡೆಯಬೇಕು ಎಂ.ವೀರಭದ್ರಸ್ವಾಮಿ ಮತ್ತೆ ಈ ಶಾಲೆಗೆ ಬರಬೇಕು ಎಂದು ಪಟ್ಟು ಹಿಡಿದರು. ಈ ಬಗ್ಗೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಜತೆ ಚರ್ಚಿಸಲಾಗಿದೆ. ಅವರು ಈ ಬಗ್ಗೆ ವರದಿ ನೀಡುವಂತೆ ಮನವಿ ಮಾಡಿದ್ದಾರೆ. ಆದಷ್ಟು ಬೇಗ ಇದರ ಬಗ್ಗೆ ಸೂಕ್ತ ಕ್ರಮ ವಹಿಸಲಾಗುವುದು ಎಂದು ಮನವರಿಕೆ ಮಾಡಿಕೊಟ್ಟರು. ಆದರೆ ಈ ಬಗ್ಗೆ ಲಿಖಿತವಾಗಿ ನಮಗೆ ಆಶ್ವಾಸನೆಯನ್ನು ನೀಡಿ ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಇದು ಸಾಧ್ಯವಿಲ್ಲ ಎಂದಾಗ ಕೆಲ ಕಾಲ ಅಧಿಕಾರಿಗಳು ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆಯಿತು.
ಅಸ್ವಸ್ಥಗೊಂಡ ವಿದ್ಯಾರ್ಥಿನಿ: ಇದೇ ಶಾಲೆಯ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಗೆದ್ದು ಶಾಲೆಗೆ ಕೀರ್ತಿ ತಂದಿದ್ದ ಅಂಗವಿಕಲ ವಿದ್ಯಾರ್ಥಿನಿ ಐಶ್ವರ್ಯಾ ಉಪ ನಿರ್ದೇಶಕರ ಮುಂದೆ ಅತ್ತು ವೀರಭದ್ರಸ್ವಾಮಿ ಅವರ ಅಮಾನತು ಆದೇಶ ವಾಪಸ್ ಪಡೆಯಬೇಕು ಎಂದು ಗೊಗರೆಯುತ್ತಿದ್ದ ದೃಶ್ಯ ಮನ ಕಲಕುವಂತಿತ್ತು.
ಈ ಸಂದರ್ಭದಲ್ಲಿ ಈಕೆಯನ್ನು ಸಂತೈಸಲು ಶಿಕ್ಷಕರು ಯತ್ನಿಸಿದರೂ ಅವರಿಗೆ ಯಶ ಸಿಗಲಿಲ್ಲ. ನಂತರ ಆಕೆ ಅಸ್ವಸ್ಥಳಾಗಿ ಶಾಲೆಯ ಹೊರಭಾಗದಲ್ಲಿ ಕುಸಿದು ಬಿದ್ದಳು. ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು ಹಾಗೂ ಆಕೆಯ ಪಾಲಕರು ಅವಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ವಾಹನದಲ್ಲೇ ಯಳಂದೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದರು.
ವಾರದ ಗಡುವು: ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡಿರುವ ವರದಿಯಲ್ಲಿ ಲೋಪವಿದೆ. ಒಂದು ವಾರದೊಳಗೆ ಈ ಸಮಸ್ಯೆಗೆ ಪರಿಹಾರ ಸೂಚಿಸಬೇಕು. ವೀರಭದ್ರಸ್ವಾಮಿ ಅಮಾನತು ಆದೇಶ ವಾಪಸ್ ಪಡೆಯಬೇಕು. ಇದಕ್ಕೆ ಒಂದು ವಾರದೊಳಗೆ ಪರಿಹಾರ ನೀಡುವ ಭರವಸೆ ನೀಡಿದ್ದಾರೆ. ಒಂದು ವಾರದೊಳಗೆ ಈ ಸಮಸ್ಯೆಗೆ ಪರಿಹಾರವನ್ನು ಸೂಚಿಸಬೇಕು. ಇಲ್ಲವಾದಲ್ಲಿ ಮಕ್ಕಳು ಶಾಲೆಗೆ ಬರುವುದಿಲ್ಲ. ನಮ್ಮ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಪಾಲಕರು ಎಚ್ಚರಿಕೆ ನೀಡಿದರು. ಇದಕ್ಕೆ ಉಪ ನಿರ್ದೇಶಕರು ಮೇಲ್ಮಟ್ಟದ ಅಧಿಕಾರಿಗಳಿಗೆ ನಾನು ವರದಿ ನೀಡಿ ಸೂಕ್ತ ಕ್ರಮ ವಹಿಸುವ ಭರವಸೆ ನೀಡಿದರು.
ಮಧ್ಯಾಹ್ನದ ಬಿಸಿಯೂಟಕ್ಕೆ ಹಾಜರಾದ ಕೆಲ ವಿದ್ಯಾರ್ಥಿಗಳು: ನಂತರ ಮಧ್ಯಾಹ್ನದ ಬಿಸಿಯೂಟಕ್ಕೆ ಕೆಲ ವಿದ್ಯಾರ್ಥಿಗಳು ಹಾಜರಾದರು. ಈ ಸಂದರ್ಭದಲ್ಲಿ ಬಿಸಿಯೂಟ ಬಡಿಸುವ ಸ್ಥಳಕ್ಕೆ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ತೆರಳಿ ಬಡಿಸುವಾಗ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದರು. ಶಾಲೆಯ ಶೈಕ್ಷಣಿಕ ಪ್ರಗತಿಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ, ಬಿಆರ್‌ಸಿ ನಂಜುಂಡಯ್ಯ, ಬಿಆರ್‌ಪಿ ರೇಚಣ್ಣ ಎಸ್‌ಡಿಎಂಸಿ ಅಧ್ಯಕ್ಷ ರಾಜಣ್ಣ, ಸದಸ್ಯರು, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಜರಿದ್ದರು.