ಜೂ.27ಕ್ಕೆ ಶಿಗ್ಗಾಂವಿಯಲ್ಲಿ ಸಿಎಂ ಮನೆ ಮುಂಭಾಗ ಪಂಚಮಸಾಲಿ ಸಮುದಾಯ ಪ್ರತಿಭಟನೆ

bommai
Published on

ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಲು ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳುತ್ತಿರುವ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವಿ ಕ್ಷೇತ್ರದಲ್ಲಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರ ಮನೆ ಮುಂಭಾಗ ಜೂ.27ರಂದು ಉಗ್ರ ಪ್ರತಿಭಟನೆ ನಡೆಸಲು ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನಿರ್ಧರಿಸಿದ್ದಾರೆ.

ಮೀಸಲಾತಿ ನೀಡುವಂತೆ ಒತ್ತಾಯಿಸಿ 20 ತಿಂಗಳಿಂದ ಬೃಹತ್ ಪಾದಯಾತ್ರೆ, ಅರಮನೆ ಮೈದಾನದಲ್ಲಿ ಬೃಹತ್ ರ‍್ಯಾಲಿ, ಸ್ವಾತಂತ್ರ್ಯ ಉದ್ಯಾನದಲ್ಲಿ ಸತ್ಯಾಗ್ರಹ ಹಾಗೂ ರಾಜ್ಯಾದ್ಯಂತ ಪ್ರತಿಜ್ಞಾ ಪಂಚಾಯತ್ ಅಭಿಯಾನ ಕೈಗೊಂಡು ಹಲವು ಸಲ ಗಡುವು ನೀಡಿದ್ದರೂ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ. ಹೀಗಾಗಿ, ಜೂ. 27ರಂದು ಸಿಎಂ ಮನೆ ಮುಂದೆ ಸತ್ಯಾಗ್ರಹ ನಡೆಸುವ ಜತೆಗೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ನಡೆಯುವ ಹೋರಾಟಕ್ಕೂ ಚಾಲನೆ ನೀಡುತ್ತೇವೆ. ಮೀಸಲಾತಿ ಅನುಷ್ಠಾನಗೊಳಿಸಲು ಶೀಘ್ರದಲ್ಲೇ ಹೋರಾಟದ ಪ್ರಮುಖ ಮುಖಂಡರ ಜತೆ ಅಂತಿಮ ಸುತ್ತಿನ ಮಾತುಕತೆ ನಡೆಸಲು ಸಮಯ ನಿಗದಿ ಮಾಡಬೇಕೆಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಶ್ರೀಗಳು ಸರ್ಕಾರಕ್ಕೆ ಸೂಚಿಸಿದರು.

ನಮ್ಮ ಸಮುದಾಯದ ಮೀಸಲಾತಿ ಜತೆಗೆ ಹಾಲು ಮತ, ವಾಲ್ಮೀಕಿ ಹಾಗೂ ಲಿಂಗಾಯತ ಒಳಪಂಗಡಗಳ ಮೀಸಲಾತಿ ಕುರಿತು ಆಯಾ ಸಮಾಜ ಬಾಂಧವರ ಜತೆ ಸಭೆ ನಡೆಸಿ ಅನುಷ್ಠಾನಗೊಳಿಸಬೇಕು. ಇದರ ಬಗ್ಗೆ ಸರ್ಕಾರ ಸ್ಪಷ್ಟ ನಿಲುವು ತಿಳಿಸದಿದ್ದರೆ ಬೆಂಗಳೂರಿನಲ್ಲಿ ಮತ್ತೊಮ್ಮೆ ಬೃಹತ್ ಹೋರಾಟ ನಡೆಸುವುದಾಗಿ ಸರ್ಕಾರಕ್ಕೆ ಬಸವ ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net