

ಜಗಳೂರು : ತಾಲೂಕಿನ ತಮಲೇನಹಳ್ಳಿ ಗ್ರಾಮದ ಜಮೀನಿನಲ್ಲಿ ಬೆಳೆದು ನಿಂತಿದ್ದ ಅಡಕೆ ತೋಟಕ್ಕೆ ಭಾನುವಾರ ರಾತ್ರಿ ಬೆಂಕಿ ತಗಲಿ ಗಿಡಗಳು ಸುಟ್ಟು ಭಸ್ಮವಾಗಿವೆ.
ಗ್ರಾಮದ ರೈತ ಈರಣ್ಣ ಎಂಬುವವರ ತೋಟದಲ್ಲಿ ಘಟನೆ ಸಂಭವಿಸಿದೆ. ಅರಣ್ಯ ಸಮೀಪದ ತನ್ನ ಮೂರೂವರೆ ಎಕರೆ ಜಮೀನಿನಲ್ಲಿ ಎರಡು ವರ್ಷದ ಹಿಂದೆ 2800 ಅಡಕೆ ಸಸಿ ನೆಟ್ಟು ಹನಿ ನೀರಾವರಿ ವ್ಯವಸ್ಥೆ ಮಾಡಿದ್ದರು. ಭಾನುವಾರ ಸಂಜೆ ಅಡಕೆಗೆ ನೀರು ಹಾಯಿಸಿ ಮನೆಗೆ ಮರಳಿದ್ದರು.
ಬೆಂಕಿ ತಗುಲಿ ಎರಡು, ಮೂರು ತಾಸಿನ ನಂತರ ಘಟನೆಯು ರೈತನ ಗಮನಕ್ಕೆ ಬಂದಿದೆ. ತಕ್ಷಣವೇ ಜಮೀನಿಗೆ ತೆರಳಿ ನೋಡಿದರೆ ಗಿಡಗಳೆಲ್ಲ ಸುಟ್ಟು ಸಂಪೂರ್ಣ ಹೊಗೆಯಿಂದ ತುಂಬಿಕೊಂಡಿತ್ತು.
ಅಡಕೆ ಸಸಿ, ಹನಿನೀರಾವರಿಗೆ 3 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿದ್ದು, ಎರಡು ವರ್ಷಗಳಿಂದ ಗಿಡಗಳನ್ನು ಮಗುವಿನಂತೆ ಜೋಪಾನ ಮಾಡಿದ್ದರು. ಬೆಂಕಿ ದುರಂತದಿಂದ ರೈತ ಕಂಗಾಲಾಗಿದ್ದಾನೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಭೇಟಿ ನೀಡಿ ವರದಿ ಪಡೆದಿದ್ದಾರೆ.
ಕಣ್ಣೀರು ಸುರಿಸಿದ ರೈತ: ಸಾಲ ಸೂಲ ಮಾಡಿ ಬೋರ್ ಕೊರೆಸಿ ಅಡಕೆ ಬೆಳೆ ಕಟ್ಟಿದ್ದ ರೈತ ಈರಣ್ಣ ಸುಟ್ಟಿದ್ದ ಅಡಕೆ ಗಿಡಗಳನ್ನು ಕಂಡಾಕ್ಷಣ ತನ್ನ ಮಕ್ಕಳನ್ನು ಕಳೆದುಕೊಂಡವರಂತೆ ಕಣ್ಣೀರು ಹಾಕಿದರು. ನಾನು ಬಡವ, ಬ್ಯಾಂಕ್ ಸೇರಿ ಇತರೆಡೆ ಸಾಲ ಮಾಡಿ ಜಮೀನಿಗೆ ಹಾಕಿದ್ದೆ. ಈಗ ಬೆಳೆಯೂ ಹಾನಿಯಾಗಿದೆ. ಸಾಲ ಬಾಕಿ ಉಳಿದಿದೆ. ಮುಂದೆ ಜೀವನ ನಡೆಸುವುದು ಹೇಗೆ ಎಂದು ನೋವು ತೋಡಿಕೊಂಡರು.