

ತುಮಕೂರು: ಜಿಲ್ಲೆಯ ಬಹುತೇಕ ಎಲ್ಲಾ ಗೊಲ್ಲರಹಟ್ಟಿಗಳಲ್ಲಿಯೂ ಸಂಪ್ರದಾಯದ ಹೆಸರಿನಲ್ಲಿ ಮೌಢ್ಯಾಚರಣೆ ಚಾಲ್ತಿಯಲ್ಲಿದೆ, ಬೆಳ್ಳಾವಿ ಹೋಬಳಿ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಇಂತಹದ್ದೇ ಒಂದು ಆಚರಣೆಯಿಂದ ಅವಳಿ ಮಕ್ಕಳು ಅಸುನೀಗಿವೆ.
ಸೂತಕದ ನೆಪ ಮಾಡಿಕೊಂಡ ಹಸುಗೂಸು ಜತೆ ಬಾಣಂತಿಯನ್ನು ಮನೆಯಿಂದ ಹೊರಗೆ ತಾತ್ಕಾಲಿಕ ಗುಡಿಸಲು ನಿರ್ಮಿಸಿ ಇಡುವ ಪದ್ಧತಿಯಿಂದ ಮಗು ಮೃತಪಟ್ಟಿದ್ದು ತಾಯಿ ಕೂಡ ಅನಾರೋಗ್ಯಕ್ಕೀಡಾಗಿದ್ದಾರೆ.
ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾದ ನಂತರ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ತಡವಾಗಿಯಾದರೂ ಗೊಲ್ಲರಹಟ್ಟಿಗೆ ಭೇಟಿ ನೀಡಿ ಕುಟುಂಬದ ಮನಒಲಿಸಿ ಮಗು ಕಳೆದುಕೊಂಡಿರುವ ಬಾಣಂತಿಯನ್ನು ಗುರುವಾರ ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾಗಿದೆ.
ಹಿರಿಯ ಸಿವಿಲ್ ನ್ಯಾಯಾಧೀಶೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ ಕೂಡ ಹಟ್ಟಿಗೆ ಭೇಟಿ ನೀಡಿ ಸಮುದಾಯದ ಪ್ರಮುಖರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸಿ, ಅಧಿಕಾರಿಗಳಿಗೂ ನಿರ್ದೇಶನ ನೀಡಿದ್ದರು.
ಅಸ್ವಸ್ಥವಾಗಿರುವ ಬಾಣಂತಿ ಮಹಿಳೆಯನ್ನು ಅವರ ಕುಟುಂಬ ಸದಸ್ಯರ ಮನಒಲಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ. ವೈದ್ಯರು ಅಗತ್ಯ ಚಿಕಿತ್ಸೆ ಮುಂದುವರಿಸಲಿದ್ದಾರೆ.
ಡಾ.ಮಂಜುನಾಥ್
ಡಿಎಚ್‌ಒ