

ಶಿಡ್ಲಘಟ್ಟ: ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ನಗರದಲ್ಲಿ ಜೂ.27ರಂದು ಆಚರಿಸಲಾಗುವುದು ಎಂದು ತಹಸೀಲ್ದಾರ್ ಬಿ.ಎನ್.ಸ್ವಾಮಿ ತಿಳಿಸಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಶನಿವಾರ ನಾಡಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹನೀಯರಾದ ನಾಡಪ್ರಭು ಕೆಂಪೇಗೌಡರ ಆಡಳಿತ, ದೂರದೃಷ್ಟಿ ಯೋಜನೆಗಳು ದೇಶ ಮೆಚ್ಚುವಂತಹವು. ಅವರ ಹೆಸರಲ್ಲಿ ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಜಯಂತಿ ದಿನ ಸ್ವಚ್ಛತಾ ಕಾರ್ಯಗಳನ್ನು ಹಮ್ಮಿಕೊಂಡಲ್ಲಿ ಅರ್ಥಪೂರ್ಣವಾಗಿರುತ್ತದೆ ಎಂದರು.
ಮಹನೀಯರ ಜಯಂತಿಗಳು ಕೇವಲ ಆಡಂಬರ, ಅದ್ದೂರಿಯ ಸಂಕೇತವಾಗಬಾರದು. ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾರ್ಥಕ ಕಾಣಬೇಕು. ಶಿಕ್ಷಣವೊಂದೇ ಉತ್ತಮ ಬದುಕನ್ನು ರೂಪಿಸಲು ಇರುವ ಏಕೈಕ ಮಾರ್ಗವಾಗಿದ್ದು, ಎಲ್ಲ ಸಮುದಾಯದವರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದರು.
ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಬಿ.ನಾರಾಯಣಸ್ವಾಮಿ ಮಾತನಾಡಿ, ಈ ಬಾರಿ ಬರಗಾಲ ಆವರಿಸಿದ್ದರಿಂದ ಸರಳವಾಗಿ ಆಚರಿಸಲು ಜನಾಂಗದ ಮುಖಂಡರ ಸಲಹೆಗಳ ಮೇರೆಗೆ ತೀರ್ಮಾನಿಸಲಾಗಿದೆ. ಮೂರು ವರ್ಷಗಳಿಗೆ ಒಂದು ಬಾರಿ ಅದ್ದೂರಿ ಹಾಗೂ ಮಾದರಿಯಾಗಿ ಆಚರಿಸುವ ಬಗ್ಗೆ ಸಭೆಯಲ್ಲಿ ಮಾಹಿತಿ ಹಂಚಿಕೊಂಡರು. ಎಲ್ಲ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸುವ ಕೆಲಸ ಮಾಡೋಣ ಎಂದು ಹೇಳಿದರು.
ನಗರದ ಪ್ರಮುಖ ರಸ್ತೆಗೆ ಕೆಂಪೇಗೌಡರ ಹೆಸರು ಇಡಬೇಕೆಂದು ಸಭೆಯಲ್ಲಿ ತಹಸೀಲ್ದಾರ್ ಅವರಿಗೆ ಮನವಿ ಮಾಡಲಾಯಿತು. ಮುಖಂಡರ ಮನವಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅವರ ಸಲಹೆ ಮೇರೆಗೆ ಮುಂದುವರೆಯುವುದಾಗಿ ಸಭೆಯಲ್ಲಿ ತಹಸೀಲ್ದಾರ್ ಬಿ.ಎನ್.ಸ್ವಾಮಿ ಭರವಸೆ ನೀಡಿದರು.
ಗೌರಿಬಿದನೂರು: ನಾಡಪ್ರಭು ಕೆಂಪೇಗೌಡ ಅವರು ಕೇವಲ ಬೆಂಗಳೂರು, ಕರ್ನಾಟಕಕ್ಕಷ್ಟೇ ಅಲ್ಲದೆ ಇಡೀ ದಕ್ಷಿಣ ಭಾರತದ ಸಾಂಸ್ಕೃತಿಕ ನಾಯಕ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಬಣ್ಣಿಸಿದರು.
ನಗರದ ಮಾನಸ ಸರ್ಕಲ್ ಬಳಿ ಭಾನುವಾರ ಕೆಂಪೇಗೌಡ ಸಾಂಸ್ಕೃತಿಕ ವೇದಿಕೆಯ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಬೆಂಗಳೂರನ್ನಷ್ಟೇ ನಿರ್ಮಿಸಿಲ್ಲ. ರಾಜ್ಯದ ಸಾವಿರಾರು ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲೆಂದು ಸಾವಿರಾರು ಕೆರೆಗಳನ್ನು ನಿರ್ಮಿಸಿ ಜನರ ಮನಸ್ಸಿನಲ್ಲಿ ಅಜರಾಮರವಾಗಿದ್ದಾರೆ. ಕೆಂಪೇಗೌಡರ ದೂರದೃಷ್ಟಿ, ನಾಯಕತ್ವ ಗುಣ, ಸಾಮಾಜಿಕ ನ್ಯಾಯದ ಪರಿಕಲ್ಪನೆ ಹಾಗೂ ಅವರು ಪ್ರತಿಪಾದಿಸಿದ ಮೌಲ್ಯಗಳನ್ನು ಜನರಿಗೆ ತಲುಪಿಸುವ ಕೆಲಸವಾಗಬೇಕು ಎಂದರು.
ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಎನ್.ಎಂ.ರವಿನಾರಾಯಣ ರೆಡ್ಡಿ ಮಾತನಾಡಿ, ಶತಮಾನಗಳ ಹಿಂದೆಯೇ ಸಮುದಾಯಗಳ ಕುಲ, ವೃತ್ತಿಗೆ ಅನುಗುಣವಾಗಿ ಬೆಂಗಳೂರಿನಲ್ಲಿ ಪೇಟೆಗಳನ್ನು ನಿರ್ಮಿಸಿಕೊಟ್ಟು ಬೆಂಗಳೂರು ನಗರವನ್ನು ಇಡೀ ವಿಶ್ವದ ಜನರು ನೋಡುವಂತೆ ಮಾಡಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಅಂದೇ ಎಲ್ಲ ಜಾತಿಯ ಜನರಿಗೆ ಆಶ್ರಯ ನೀಡಿದುದರ ಫಲವಾಗಿ ಬೆಂಗಳೂರಿನಲ್ಲಿ ಇಂದಿಗೂ ಎಲ್ಲ ವರ್ಗದವರು ಜೀವನ ಸಾಗಿಸುತ್ತಿದ್ದಾರೆ ಎಂದರು.
ಮಾಜಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ, ನಗರ ಯೋಜನೆ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಜಿ.ವೇಣುಗೋಪಾಲ ರೆಡ್ಡಿ, ಕೆಂಪೇಗೌಡ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಜನಾರ್ಧನ್ ಮೂರ್ತಿ, ಉಪಾಧ್ಯಕ್ಷ ಅಶ್ವತ್ಥರೆಡ್ಡಿ, ಕಾರ್ಯದರ್ಶಿ ಪ್ರಭಾಕರ್ ರೆಡ್ಡಿ, ಮುಖಂಡರಾದ ಎಚ್.ಎನ್.ಪ್ರಕಾಶ್ ರೆಡ್ಡಿ, ಮರಳೂರು ಹನುಮಂತರೆಡ್ಡಿ, ಜಿ.ಬೊಮ್ಮಣ್ಣ, ವಕೀಲ ಮನೋಹರ್, ಬೆಸ್ಕಾಂ ಪರಮೇಶ್ವರ ರೆಡ್ಡಿ, ಸೂರ್ಯಪ್ರಕಾಶ್, ಮಲ್ಲಿಕಾರ್ಜುನ್, ರಾಮಚಂದ್ರರೆಡ್ಡಿ, ಗಂಗರೆಡ್ಡಿ ಇದ್ದರು.