ಎನ್‌ಎಚ್-209ರಲ್ಲಿ ಅಪಘಾತ ತಡೆಗೆ ಕ್ರಮ

KKP
Published on

ಕನಕಪುರ  ರಾಷ್ಟ್ರೀಯ ಹೆದ್ದಾರಿ-209ರ ತುಂಗಣಿ ಹಾಗೂ ಹಲವೆಡೆ ಭೀಕರ ರಸ್ತೆ ಅಪಘಾತಗಳಲ್ಲಿ ಉಂಟಾಗುತ್ತಿರುವ ಸಾವು-ನೋವುಗಳಿಗೆ ಕಡಿವಾಣ ಹಾಕಲು ಹೆದ್ದಾರಿ ಅಧಿಕಾರಿಗಳು ಹಾಗೂ ಕನಕಪುರ ಪೊಲೀಸರು ಮುಂದಾಗಿದ್ದು, ಸಂಚಾರಿ ನಿಯಮಗಳ ಕಟ್ಟುನಿಟ್ಟಿನ ಪಾಲನೆಗಾಗಿ ಸೋಮವಾರ ಸಂಘ-ಸಂಸ್ಥೆ ಹಾಗೂ ಗ್ರಾಮಸ್ಥರ ಜತೆಗೂಡಿ ಸಭೆ ನಡೆಸಿ, ಚರ್ಚಿಸಿದರು. ಅಲ್ಲದೆ, ಹೆಚ್ಚು ಅಪಘಾತಗಳು ಸಂಭವಿಸುವ ತುಂಗಣಿ ಗೇಟ್ ಹಾಗೂ ಶಿವನಹಳ್ಳಿ ಜಂಕ್ಷನ್‌ಗಳನ್ನು ಪರಿಶೀಲಿಸಿದರು.

ಇತ್ತೀಚೆಗೆ ಹೆದ್ದಾರಿಯಲ್ಲಿ ಸಂಭವಿಸುತ್ತಿರುವ ಸರಣಿ ಅಪಘಾತಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ಮಂಗಳವಾರ ವಿವಿಧ ಸಂಘಟನೆಗಳು ಮುಂದಾಗಿದ್ದವು. ಈ ಹಿನ್ನೆಲೆಯಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ವಿಕಾಸ್, ನಗರ ಠಾಣಾ ಸರ್ಕಲ್ ಇನ್‌ಸ್ಪೆಕ್ಟರ್ ಅನಂತ್‌ರಾಮ್ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಸಿದ್ದರಾಜು ಹಾಗೂ ಇತರ ಅಧಿಕಾರಿಗಳು ಪ್ರತಿಭಟನಾಕಾರರ ಮನವೊಲಿಸಿ, ರಸ್ತೆ ಅಪಘಾತ ತಡೆಗಟ್ಟಲು 10 ದಿನಗಳೊಳಗೆ ತಾತ್ಕಾಲಿಕವಾಗಿ ವೇಗ ನಿಯಂತ್ರಣಕ್ಕೆ ಕ್ರಮವಹಿಸಲಾಗುವುದು. ಅಲ್ಲದೇ ವೃತ್ತ ನಿರ್ಮಿಸಿ ಪ್ರಯಾಣಿಕರು ಸುಗಮವಾಗಿ ತೆರಳಲು ಅನುಕೂಲ ಕಲ್ಪಿಸಿಕೊಡಲಾಗುವುದು. ಸರ್ಕಲ್ ಸಮೀಪದಲ್ಲಿ ಹೈಮಾಸ್ಟ್ ವಿದ್ಯುತ್ ದೀಪ, ಸಿಗ್ನಲ್ ಹಾಗೂ ಮಾರ್ಗದ ಸೂಚನಾ ಫಲಕಗಳನ್ನು ಅಳವಡಿಸಲಾಗವುದು ಎಂದು ತಿಳಿಸಿದರು.

ಮಂಗಳವಾರ ನಡೆಯಬೇಕಿದ್ದ ಪ್ರತಿಭಟನೆಯನ್ನು ಪೋಲಿಸ್ ಅಧಿಕಾರಿಗಳ ಮನವೊಲಿಕೆಯಿಂದ ಹಿಂಪಡೆದ ಹೋರಾಟಗಾರರು ಹಿಂತೆಗೆದುಕೊಂಡಿದ್ದಾರೆ. ಅಪಘಾತಗಳನ್ನು ತಡೆಗಟ್ಟಲು ಸಭೆಯಲ್ಲಿ ನೀಡಿದ ಭರವಸೆಯಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳದೆ ಹೋದಲ್ಲಿ ಪ್ರತಿಭಟನೆ ನಡೆಉವುದು ಖಚಿತ ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಗುತ್ತಿಗೆದಾರ ಗುರುದಯಾಳ್‌ಸಿಂಗ್, ಸಂಘಟನೆಯ ಪದಾಧಿಕಾರಿಗಳಾದ ಚೀಲೂರು ಮುನಿರಾಜು, ಕುಮಾರಸ್ವಾಮಿ, ಪ್ರಶಾಂತ್ ಹೊಸದುರ್ಗ ಹಾಗೂ ತುಂಗಣಿ ಗ್ರಾಮಸ್ಥರು ಸಭೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net