

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣ ದಿನೇ ದಿನೇ ಹೆಚ್ಚುತ್ತಿದ್ದು, ಹೊಸ ರೂಪಾಂತರಿ ತಳಿ ಪತ್ತೆಗಾಗಿ ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಗೆ ಕಳುಹಿಸಿರುವ ಮಾದರಿಗಳಲ್ಲಿ 339 ಮಾದರಿಗಳ ಫಲಿತಾಂಶ ಬರಬೇಕಿದೆ.'
ಈವರೆಗೂ ಕಳುಹಿಸಲಾಗಿರುವ 601 ಮಾದರಿಗಳಲ್ಲಿ 262ರ ವರದಿ ಬಂದಿದ್ದು, ಅವುಗಳಲ್ಲಿ 199 ಪ್ರಕರಣಗಳು ಜೆಎನ್ 1 ಎಂದು ದೃಢಪಟ್ಟಿವೆ. 28 ಎಕ್ಸ್‌ಬಿಬಿ ತಳಿ ಹಾಗೂ 35 ಇತರೆ ತಳಿ ಎಂದು ವರದಿಯಲ್ಲಿ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 7,356 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಬೆಂಗಳೂರಿನಲ್ಲಿ 171, ಮೈಸೂರಿನಲ್ಲಿ 26, ಬೆಂಗಳೂರು ಗ್ರಾಮಾಂತರ 12 ಸೇರಿ ರಾಜ್ಯದ ಕೆಲ ಜಿಲ್ಲೆಗಳಿಂದ 297 ಸೋಂಕು ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 1,136 ತಲುಪಿದೆ. ಇವರಲ್ಲಿ 1,070 ಸೋಂಕಿತರು ಮನೆ ಆರೈಕೆಯಲ್ಲಿದ್ದು, 66 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ 42 ಮಂದಿ ಸಾಮಾನ್ಯ ವಾರ್ಡ್‌ನಲ್ಲಿ, ಒಬ್ಬರು ಆಕ್ಸಿಜನ್ ಬೆಡ್‌ನಲ್ಲಿ, 18 ಮಂದಿ ತುರ್ತು ನಿಗಾ ಘಟಕದಲ್ಲಿ ಹಾಗೂ ಐವರು ವೆಂಟಿಲೇಟರ್ ಸಹಿತ ಐಸಿಯು ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಇಲಾಖೆ ತಿಳಿಸಿದೆ.