

ಹರಿಹರ: ಸರ್ಕಾರಿ ಶಾಲೆಯ ಮಕ್ಕಳು ಬಸ್ಸು ಮತ್ತಿತರೆ ಖಾಸಗಿ ವಾಹನಗಳಲ್ಲಿ ಶಾಲಾ ಪ್ರವಾಸ ಕೈಗೊಳ್ಳುವುದು ಸಾಮಾನ್ಯ. ಆದರೆ ವಿಮಾನ ಯಾನ ಮಾಡುವುದೆಂದರೆ ಪ್ರಯಾಸವೇ ಸರಿ. ತಾಲೂಕಿನ ಕಡರನಾಯಕನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 26 ವಿದ್ಯಾರ್ಥಿಗಳ ಪಾಲಿಗಿದು ಸಾಧ್ಯವಾಗಿದೆ.
ಶಾಲೆಯ 26 ವಿದ್ಯಾರ್ಥಿಗಳು ಗುರುವಾರ ಶಿವಮೊಗ್ಗಕ್ಕೆ ತೆರಳಿ ಅಲ್ಲಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದರು. ಪಾಲಕರ ಹಣಕಾಸು ಹೊಂದಾಣಿಕೆಯೊಂದಿಗೆ ಪ್ರವಾಸ ಭಾಗ್ಯ ಪಡೆದ ಮಕ್ಕಳು ಬೆಂಗಳೂರಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪಠ್ಯ ಪೂರಕವಾದ ಮಾಹಿತಿ ಪಡೆದರು.
ತಾಲೂಕಿನಲ್ಲೇ ಮೊದಲ ಬಾರಿಗೆ ವಿಮಾನ ಪ್ರಯಾಣ ಮಾಡಿದ ಸರ್ಕಾರಿ ಶಾಲೆ ನಮ್ಮದಾಗಿದೆ ಎಂದು ಮುಖ್ಯಶಿಕ್ಷಕ ಎ.ಕೆ. ಮಂಜಪ್ಪ ಹೇಳಿದರು. ವಿದ್ಯಾರ್ಥಿಗಳೊಂದಿಗೆ ಹಿರಿಯ ಶಿಕ್ಷಕ ಕುಬೇಂದ್ರಪ್ಪ ಸೇರಿ ಶಾಲಾ ಸಿಬ್ಬಂದಿ ಪ್ರಯಾಣ ಬೆಳೆಸಿದರು.