

ಹಾವೇರಿ: ಕಳೆದ ವರ್ಷ ಆಗಸ್ಟ್ ಹಾಗೂ ಅಕ್ಟೋಬರ್ನಲ್ಲಿ ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೀಡಾದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ ಜಿಲ್ಲೆಗೆ 25.99 ಕೋಟಿ ರೂ. ಬಿಡುಗಡೆಗೊಳಿಸಿದೆ. ಅನುಷ್ಠಾನಾಧಿಕಾರಿಗಳು ಎರಡು ದಿನದೊಳಗಾಗಿ ಕಾಮಗಾರಿವಾರು ಅಂದಾಜು ವೆಚ್ಚ ಹಾಗೂ ಕ್ರಿಯಾ ಯೋಜನೆಯನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, 2ದಿನಗಳಲ್ಲಿ ಕ್ರಿಯಾ ಯೋಜನೆಯ ಅನುಮೋದನೆ ಪಡೆದು ನಿಗದಿತ ಅನುದಾನದ ಶೇ. 75ರಷ್ಟು ಬಿಡುಗಡೆ ಮಾಡಿಸಿಕೊಂಡು ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದರು.
ಈ ಅನುದಾನದಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಯಾದ ಕಾಮಗಾರಿಗಳನ್ನು ಮಾತ್ರ ಕೈಗೆತ್ತಿಕೊಳ್ಳಬೇಕು. ಸ್ಥಳ ಮತ್ತು ಕಾಮಗಾರಿಗಳನ್ನು ಬದಲಾವಣೆ ಮಾಡುವ ಅವಕಾಶವಿಲ್ಲ. ಈಗಾಗಲೇ ಹಾನಿಯಾದ ಕಾಮಗಾರಿಗಳ ಸ್ಥಳ ಹಾಗೂ ವಿವರಗಳು ವೆಬ್ಸೈಟ್ನಲ್ಲಿ ಅಪ್ಲೋಡ್ ಆಗಿದೆ. ಈ ಕಾಮಗಾರಿಗಳನ್ನೇ ಹಂಚಿಕೆಯಾದ ಅನುದಾನದಲ್ಲಿ ದುರಸ್ತಿ ಮತ್ತು ನಿರ್ಮಾಣ ಕೈಗೊಳ್ಳಬೇಕು. ಅನುದಾನವನ್ನು ವ್ಯರ್ಥಮಾಡಿದರೆ ಅಂತಹ ಅಧಿಕಾರಿಗಳ ವಾರ್ಷಿಕ ಕಾರ್ಯನಿರ್ವಹಣೆ ವರದಿಯಲ್ಲಿ ನಮೂದಿಸಿ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಸ್. ಯೋಗೇಶ್ವರ, ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.