

ಧಾರವಾಡ: ಕುಟುಂಬದ ಮುಖ್ಯಸ್ಥೆಗೆ ಸರ್ಕಾರದಿಂದ ಮಾಸಿಕ 2,000 ರೂ. ಪಾವತಿಸುವ ಗೃಹಲಕ್ಷ್ಮಿ ಯೋಜನೆಗೆ ಜಿಲ್ಲೆಯಲ್ಲಿ ಜು. 31ರವರೆಗೆ 2,52,280 ಫಲಾನುಭವಿಗಳ ವಿವರಗಳನ್ನು ನೋಂದಣಿ ಮಾಡಲಾಗಿದೆ.
4,16,582 ಫಲಾನುಭವಿಗಳ ಪೈಕಿ 1,64,302 ಜನರ ವಿವರ ನೋಂದಣಿ ಬಾಕಿ ಇದೆ.
ಧಾರವಾಡ ಗ್ರಾಮೀಣದಲ್ಲಿ 83, ಧಾರವಾಡ ನಗರ 12, ಹುಬ್ಬಳ್ಳಿ ಗ್ರಾಮೀಣ 60, ಹುಬ್ಬಳ್ಳಿ ನಗರ 28, ಕುಂದಗೋಳ 61, ಕಲಘಟಗಿ 61, ನವಲಗುಂದ 38, ಅಣ್ಣಿಗೇರಿ 27, ಅಳ್ನಾವರ ತಾಲೂಕಿನಲ್ಲಿ 10 ಗ್ರಾಮ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರಗಳು ಮತ್ತು ನಗರ ಪ್ರದೇಶದಲ್ಲಿ ಕರ್ನಾಟಕ ಒನ್ ಹಾಗೂ ತಾತ್ಕಾಲಿಕ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಯೋಜನೆಯ ಲಾಭ ಪಡೆಯಲು ಜಿಎಸ್ಟಿ ಹಾಗೂ ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿ ಪಡಿತರ ಚೀಟಿಯ ಮಹಿಳಾ ಮುಖ್ಯಸ್ಥರು ಅರ್ಹರಿರುತ್ತಾರೆ.
ಪಡಿತರ ಚೀಟಿ, ಆಧಾರ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ಗೆ ನೋಂದಣಿಯಾದ ಮೊಬೈಲ್ ಸಂಖ್ಯೆಯೊಂದಿಗೆ ಸಮೀಪದ ಕೇಂದ್ರಗಳಿಗೆ ತೆರಳಿ ನೋಂದಣಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.