

ಪಿ.ಎಚ್. ತಿಪ್ಪೇಸ್ವಾಮಿ, ಮಾಯಕೊಂಡ
ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ದಿಢೀರ್ ಕುಸಿದಿದೆ. ಹೀಗಾಗಿ ಬೆಳೆಗಾರರ ಸ್ಥಿತಿ ಅಯೋಮಯವಾಗಿದೆ. ಮಾಯಕೊಂಡ ಭಾಗದ ರೈತರದ್ದೂ ಇದೇ ಸಂಕಟ.
ದಾವಣಗೆರೆ ತಾಲೂಕು ಕೊಡಗನೂರು ಗ್ರಾಮದ ರೈತ ಮಂಜಣ್ಣ ಬಾಬರ್ ಎರಡು ಎಕರೆ ಜಮೀನಿನಲ್ಲಿ ಟೊಮ್ಯಾಟೊ ಬೆಳೆದು, ಇಳುವರಿ ಹೆಚ್ಚು ಕಂಡರೂ ಬೆಲೆ ಕುಸಿತದಿಂದ ನಿರೀಕ್ಷಿತ ಬೆಲೆ ಕಾಣದೆ ಕಂಗಾಲಾಗಿದ್ದಾರೆ. ಆದಾಯಕ್ಕಿಂತಲೂ ಬೆಳೆಯಲು ಹೆಚ್ಚು ವೆಚ್ಚ ಮಾಡಿದ್ದಾರೆ.
ತಾಲೂಕಿನ ಆನಗೋಡು, ಮಾಯಕೊಂಡ, ಅಣಜಿ ಹೋಬಳಿಗಳ ಹಲವು ಗ್ರಾಮಗಳ ರೈತರು ಬೋರ್‌ವೆಲ್ ನೀರಾವರಿಗೆ ತರಕಾರಿ, ಹಣು,್ಣ ಹೂವುಗಳನ್ನು ಬೆಳೆಯುತ್ತಿದ್ದಾರೆ. ಅವುಗಳಲ್ಲಿ ಮುಖ್ಯವಾಗಿ ಟೊಮ್ಯಾಟೊ, ಮೆಣಸಿನಕಾಯಿ, ಬದನೆ, ಎಲೆಕೋಸು, ಸಿಹಿ ಕುಂಬಳ, ಸಾಂಬಾರ್ ಸೌತೆ, ಈರೆ, ಪೇರಲೆ, ದಾಳಿಂಬೆ, ಬಾಳೆ, ಚೆಂಡು ಹೂವು, ಗುಲಾಬಿ, ಸೇವಂತಿಗೆ ಸೇರಿ ಹಲವು ಬಗೆಯ ಹಣ್ಣು ತರಕಾರಿ ಬೆಳೆಯುತ್ತಿರುವುದು ರೈತರಿಗೆ ಲಾಭದ ಜತೆಗೆ ನಷ್ಟ ಅನುಭವಿಸುವಂತೆ ಮಾಡಿದೆ.
ಆನಗೋಡು ಹೋಬಳಿಯ ನೇರ್ಲಿಗೆ, ಸುಲ್ತಾನಿಪುರ, ಗಂಗನಕಟ್ಟೆ, ಈಚಘಟ್ಟ, ಕಂದನಕೋವಿ, ಹಾಲುವರ್ತಿ, ನೀರ್ಥಡಿ, ಗುಡಾಳು, ಗುಮ್ಮನೂರು, ನರಗನಹಳ್ಳಿ, ಚಿನ್ನಸಮುದ್ರ ಹಾಗೂ ಮಾಯಕೊಂಡ ಹೋಬಳಿಯ ಕೊಡಗನೂರು, ಬೊಮ್ಮೇನಹಳ್ಳಿ, ಅಣ್ಣಾಪುರ, ಪರಶುರಾಂಪುರ, ದಿಂಡದಹಳ್ಳಿ, ದೊಡ್ಡ ಮಾಗಡಿ, ಎಚ್.ಬಸವಾಪುರ, ಹುಚ್ಚವನಹಳ್ಳಿ, ಹೆದ್ನೆ, ಬುಳ್ಳಾಪುರ ಸೇರಿ ಹಲವು ಗ್ರಾಮಗಳು ತರಕಾರಿ ಕಣಜಗಳಾಗಿವೆ.
ಕಳೆದೊಂದು ತಿಂಗಳ ಹಿಂದೆ ಟೊಮ್ಯಾಟೊ ಬೆಲೆ ಏರುಗತಿಯಲ್ಲಿತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿ ಗೆ 40 ರಿಂದ 50 ರೂ.ಗಳಿಗೆ ಮಾರಾಟವಾಗುತ್ತಿತ್ತು. 25 ಕೆಜಿ ಟೊಮ್ಯಾಟೊ ಹಣ್ಣಿನ ಒಂದು ಬಾಕ್ಸಿಗೆ 800 ರಿಂದ 900 ರೂ. ವಹಿವಾಟು ನಡೆದು ರೈತರಿಗೆ ಉತ್ತಮ ಆದಾಯದ ಖುಷಿ ದಕ್ಕಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ.
ಕಳೆದೊಂದು ವಾರದಿಂದ ಟೊಮ್ಯಾಟೊ ರೀಟೇಲ್ ಬೆಲೆ ತಲಾ ಕೆಜಿಗೆ 10 ರೂ.ಗೆ ಇಳಿದಿದೆ. 25 ಕೆಜಿ ಬಾಕ್ಸಿಗೆ ಕೇವಲ 100 ರಿಂದ 150 ರೂ.ಗಳಿಗೆ ಮಾರಾಟವಾದರೆ ಮಾಡಿದ ಖರ್ಚು ಮೈಮೇಲೆ ಬರುತ್ತದೆ ಎನ್ನುವ ಆತಂಕದಿಂದಾಗಿ ರೈತರು ಹತಾಶರಾಗಿದ್ದಾರೆ.
ತರಕಾರಿ, ಹಣ್ಣು, ಹೂವು ಬೆಳೆಗಾರರರಿಗೆ ಸರ್ಕಾರ ಬೆಂಬಲ ಬೆಲೆ ನಿಗದಿಗೊಳಿಸುವ ಮೂಲಕ ರೈತರಿಗೆ ನೆರವಾಗಬೇಕು. ಜತೆಗೆ ಅತಿ ಹೆಚ್ಚು ತರಕಾರಿ, ಹಣ್ಣು, ಹೂವು ಬೆಳೆಯುತ್ತಿರುವ ತಾಲೂಕಿನ ಆನಗೋಡು, ಮಾಯಕೊಂಡ ಅಣಜಿ ಹೋಬಳಿಗಳಲ್ಲಿ ಶೀತಲೀಕರಣ ಘಟಕಗಳನ್ನು ನಿರ್ಮಿಸಬೇಕು ಎಂಬುದು ಗ್ರಾಮದ ರೈತರ ಒತ್ತಾಯ.
ಎರಡು ಎಕರೆಯಲ್ಲಿ ಟೊಮ್ಯಾಟೊ ಬೆಳೆಯಲು ಸಸಿ ಒಂದಕ್ಕೆ 1 ರೂ, ಗಿಡಗಳನ್ನು ಕಟ್ಟಲು ಗೂಟ ಹಾಕುವುದು, ವಯರ್ ಉರಿಕಟ್ಟುವುದು, ಕಳೆ ರಸಗೊಬ್ಬರ, ಕೀಟನಾಶಕ, ಕೂಲಿ ಕಾರ್ಮಿಕರ ಖರ್ಚು ಸೇರಿ ಕಟಾವು ಮಾಡಿ ಮಾರುಕಟ್ಟೆಗೆ ತಲುಪಿಸುವವರೆಗೆ ಸುಮಾರು 1.5 ಲಕ್ಷ ರೂ. ಹಣ ಖರ್ಚಾಗಿದೆ.
ಮಂಜಣ್ಣ ಬಾಬರ್,
ಕೊಡಗನೂರು ಪ್ರಗತಿಪರ ರೈತ
ದಾವಣಗೆರೆ ಜಿಲ್ಲೆಯಲ್ಲಿ ಪ್ರಸ್ತುತ 250 ಹೆಕ್ಟೇರಿಗಿಂತ ಹೆಚ್ಚಿನ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆದಿದ್ದು, ಈಗಾಗಲೇ ಕಟಾವಿಗೆ ಬಂದಿದೆ. ಮಾರುಕಟ್ಟೆಯಲ್ಲಿ ದರ ಏರಿಳಿತದಿಂದ ರೈತರಿಗೆ ಲಾಭ-ನಷ್ಟ ತಂದುಕೊಡುತ್ತಿದೆ. ಹೊಸದಾಗಿ ಸುಮಾರು 300 ಹೆಕ್ಟೇರಿಗಿಂತ ಹೆಚ್ಚಿನ ಪ್ರದೇಶದಲ್ಲಿ ಟೊಮ್ಯಾಟೊ ಸಸಿ ನಾಟಿ ಮಾಡಿರುವ ಅಂದಾಜಿದೆ.
ರಾಘವೇಂದ್ರ ಪ್ರಸಾದ್,
ಉಪನಿರ್ದೇಶಕ, ತೋಟಗಾರಿಕಾ ಇಲಾಖೆ
ಮಾರುಕಟ್ಟೆಯಲ್ಲಿ ಟೊಮ್ಯಾಟೊ ದರ ಕುಸಿದಿದ್ದು, ಹೊರ ರಾಜ್ಯಗಳಿಗೆ ತುಂಬಿಸುವ ಖರೀದಿದಾರರು ಮಾರುಕಟ್ಟೆಗೆ ಬರುತ್ತಿಲ್ಲ, ಟೊಮ್ಯಾಟೊ ಹೇರಳವಾಗಿ ಮಾರುಕಟ್ಟೆಗೆ ಬರುತ್ತಿದ್ದು, ಮಾರಾಟ ಮಾಡುವುದೇ ದುಸ್ತರವಾಗಿದೆ.
ಸಿದ್ದಣ್ಣ, ಹೋಲ್‌ಸೇಲ್ ವರ್ತಕರು,
ತರಕಾರಿ ಮಾರುಕಟ್ಟೆ ದಾವಣಗೆರೆ