

ಕುಶಾಲನಗರ: ಭಾರತೀಯ ವಾಯುಪಡೆಯಲ್ಲಿನ ವೃತ್ತಿ ಮಾರ್ಗದರ್ಶನ ಕುರಿತ ಅಭಿಯಾನವು ಜಿಲ್ಲೆಯಲ್ಲಿ ಜೂ.24 ರಿಂದ ಜು.3ವರೆಗೆ ನಡೆಯಲಿದೆ.
ಇದಕ್ಕೆಂದೇ ರೂಪಿಸಿರುವ ವಿಶೇಷ ವಾಹನದಲ್ಲಿ ಅಭಿಯಾನವು ಜೂ.24ರಂದು ಕೂಡಿಗೆ ಸೈನಿಕ ಶಾಲೆಯಲ್ಲಿ ಆರಂಭಗೊಳ್ಳಲಿದೆ.
ಅಭಿಯಾನದಲ್ಲಿ ವಾಯುಪಡೆಯ ಸಮಗ್ರ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಸರಿಸಲಿದ್ದು, ಅಲ್ಲಿರುವ ಉದ್ಯೋಗವಕಾಶಗಳ ಬಗ್ಗೆಯೂ ಜಾಗೃತಿ ಮೂಡಿಸಲಾಗುವುದು. ಯುವಜನರನ್ನು ಸೇನೆಗೆ ಸೇರಲು ಪ್ರೇರೇಪಿಸುವ ಉದ್ದೇಶ ಇದರಲ್ಲಿದ್ದು, ಪ್ರಚಾರ ವಾಹನವನ್ನು ‘ನೋಟ, ಸ್ಪರ್ಶ ಮತ್ತು ಅನುಭವ’ ತತ್ವದ ಆಧಾರದ ಮೇಲೆ ರೂಪಿಸಲಾಗಿದೆ. ವಿದ್ಯಾರ್ಥಿಗಳಿಗೆ ನೇರ ಅನುಭವ ನೀಡಲಿದೆ. ವಾಹನವು ಇದುವರೆಗೆ 402 ಅಭಿಯಾನಗಳ ಮೂಲಕ ಸುಮಾರು 2.21 ಲಕ್ಷ ವಿದ್ಯಾರ್ಥಿಗಳನ್ನು ತಲುಪಿದೆ.
ಜಿಲ್ಲೆಯಾದ್ಯಂತ ಒಂದು ವಾರ ವಾಹನದಲ್ಲಿ ಪ್ರಚಾರ ನಡೆಯಲಿದೆ. ಕೂಡಿಗೆ ಸೈನಿಕ ಶಾಲೆಯಲ್ಲಿ ಜೂ.29ರಂದು ಬೆಳಗ್ಗೆ 10 ಗಂಟೆಗೆ ವಿಡಿಯೋ ಪ್ರದರ್ಶನವಿದೆ. ಜೂ.26ರಂದು ಮಡಿಕೇರಿಯ ಸರ್ಕಾರಿ ಪದವಿ ಕಾಲೇಜು, ಜೂ.27 ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು, ಜೂ.28ರಂದು ಬಿವಿಜಿ ಕೊಡಗು ವಿದ್ಯಾಲಯ, ಜೂ.29ರಂದು ಕೂಡಿಗೆ ಸೈನಿಕ ಶಾಲೆ, ಕೊಪ್ಪದ ನಳಂದ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಜೂ.30 ರಂದು ಹಾಗೂ ಜು.1ರಂದು ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರದರ್ಶನ ಆಯೋಜಿಸಲಾಗಿದೆ ಎಂದು ಕೂಡಿಗೆ ಸೈನಿಕ ಶಾಲೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.