

Lokayukta officials : ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ ಮಾಜಿ ಗುತ್ತಿಗೆ ನೌಕರ ಕಳಪ್ಪ ಬಂಡಿ ಮನೆ ಮೇಲೆ ಗುರುವಾರ (ಜುಲೈ 31) ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಕೋಟ್ಯಂತರ ರೂ. ಮೌಲ್ಯದ ಆಸ್ತಿಕಂಡು ಬೆರಗಾಗಿದ್ದಾರೆ.
ಅಪಾರ್ಟ್‌ಮೆಂಟ್ ಸೇರಿ 24 ಮನೆ. 20 ನಿವೇಶನ, 350 ಗ್ರಾಂ ಚಿನ್ನ, ಎರಡು ಕಾರು, ಎರಡು ಬೈಕ್, 30 ಎಕರೆ ಜಮೀನು ಹಾಗೂ 20 ಎಕರೆ ಜಮೀನಿನ ಖರೀದಿ ಕರಾರು ಪತ್ರದ ದಾಖಲೆ ಲಭ್ಯವಾಗಿವೆ.
ಕೊಪ್ಪಳದ ಪ್ರಗತಿ ನಗರದ ಮನೆ ಹಾಗೂ ಕೆಆರ್ ಐಡಿಎಲ್ ಕಚೇರಿಯಲ್ಲಿ ದಾಖಲೆ ಪರಿಶೀಲನೆ ನಡೆಸಲಾಯಿತು. 20 ವರ್ಷದಿಂದ ಕಳಕಪ್ಪ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದ. ಈತ ತಿಂಗಳಿಗೆ 15,000 ರೂ. ಸಂಬಳ ಪಡೆಯುತ್ತಿದ್ದ. ಎಲ್ಲ ಆಸ್ತಿಗಳು ಆತನ ಹೆಸರಿನಲ್ಲಿ, ಪತ್ನಿ ಹಾಗೂ ಸಹೋದರನ ಹೆಸರಿನಲ್ಲಿವೆ.
ಇಲಾಖೆಯಲ್ಲಿ 72 ಕೋಟಿ ರೂ. ಅವ್ಯವಹಾರ ನಡೆದ ಪ್ರಕರಣದಲ್ಲಿ ಕೆಲಸದಿಂದ ವಜಾಗೊಂಡಿದ್ದಾನೆ. ಕೆಆರ್ಐಡಿಎಲ್ ಅಧಿಕಾರಿಗಳೇ ನೀಡಿದ ದೂರಿನ ಭಾಗವಾಗಿ ಲೋಕಾಯುಕ್ತ ಡಿವೈಎಸ್ಪಿ ವಸಂತಕುಮಾರ ನೇತೃತ್ವದಲ್ಲಿ ಪಿಐ ಸುನೀಲ್ ಮ್ಯಾಗಿನಮನಿ, ಚಂದ್ರಪ್ಪ, ವಿಜಯಕುಮಾರ, ನಾಗರತ್ನ, ಶೈಲಾ ಪಾಟೇಕರ್ ಇತರ ಸಿಬ್ಬಂದಿ ದಾಳಿ ನಡೆಸಿದ್ದಾರೆ.
ತಮ್ಮ ಆದಾಯದ ಮೂಲಗಳಿಗಿಂತ ಹೆಚ್ಚಿನ ಸಂಪತ್ತು ಗಳಿಸಿದ ಆರೋಪ ಹೊತ್ತಿರುವ ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ಪೊಲೀಸರು ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. ಮಂಗಳವಾರ (ಜುಲೈ29) ಹಾಸನ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಮತ್ತು ಬೆಂಗಳೂರಿನಲ್ಲಿರುವ ಐದು ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಅಧಿಕಾರಿಗಳು ಶೋಧ ನಡೆಸಿದರು.
ಹಾಸನದ ಎನ್ಎಚ್ಎಐ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಜಯಣ್ಣ ಆರ್, ಚಿಕ್ಕಬಳಾಪುರದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಜೂನಿಯರ್ ಇಂಜಿನಿಯರ್ ಆಂಜನೇಯ ಮೂರ್ತಿ ಎಂ, ಚಿತ್ರದುರ್ಗದ ಹಿರಿಯೂರು ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ಬೆಂಗಳೂರಿನ ಶೆಟ್ಟಿಹಳ್ಳಿ ಮತ್ತು ದಾಸರಹಳ್ಳಿ ಬಿಬಿಎಂಪಿ ಉಪವಿಭಾಗದ ಕಂದಾಯ ಅಧಿಕಾರಿ ಎನ್ ವೆಂಕಟೇಶ್ ಮತ್ತು ಬೆಂಗಳೂರಿನ ಬಿಡಿಎ ಕೇಂದ್ರ ಕಚೇರಿಯ ತೋಟಗಾರಿಕೆ ಸಹಾಯಕ ನಿರ್ದೇಶಕರಾದ ಕೆ ಓಂ ಪ್ರಕಾಶ್ ಮೇಲೆ ಲೋಕಾ ಪೊಲೀಸರು ದಾಳಿ ನಡೆಸಿದ್ದಾರೆ. (ಏಜೆನ್ಸೀಸ್)