

ಶನಿವಾರಸಂತೆ: ಸಾವಿರಾರು ವರ್ಷಗಳ ಇತಿಹಾಸ ಹಿನ್ನೆಲೆಯ ಕೊಡಗಿನ ಜೈನಕಾಶಿ ಎಂದೇ ಪ್ರಸಿದ್ಧಿ ಗಳಿಸಿರುವ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸಮೀಪದ ನಿಡ್ತ ಗ್ರಾಪಂ ವ್ಯಾಪ್ತಿಯಲ್ಲಿರುವ ಮುಳ್ಳೂರು ತ್ರಿವಳಿ ಜಿನಮಂದಿರದ ವಾರ್ಷಿಕ ಪೂಜಾ ಮಹೋತ್ಸವವು ಮಾ.23ರಂದು ನೆರವೇರಲಿದೆ.
ಮಾ.23ರಂದು ಮೂರು ಬಸದಿಗಳಲ್ಲಿ ಮಹಾಭಿಷೇಕದೊಂದಿಗೆ ಪೂಜಾ ಕಾರ್ಯಗಳು ನೆರವೇರಲಿದ್ದು, ಶ್ರೀಕ್ಷೇತ್ರ ಕನಕಗಿರಿ ದಿಗಂಬರ ಜೈನಮಠದ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ, ಶ್ರೀಕ್ಷೇತ್ರ ಆರತಿಪುರ ದಿಗಂಬರ ಜೈನ ಮಠದ ಸ್ವಸ್ತಿಶ್ರೀ ಸಿದ್ದಾಂತಕೀರ್ತಿ ಭಟ್ಟಾರಕ ಭಟ್ಟಾಚಾರ್ಯವರ್ಯ ಸ್ವಾಮೀಜಿ ಮತ್ತು ಸ್ವಸ್ತಿಶ್ರೀ ಶ್ರವಣಬೆಳಗೂಳದ ದಿಗಂಬರ ಜೈನ ಮಠದ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಸಾನ್ನಿಧ್ಯ ಮತ್ತು ಮಾರ್ಗದರ್ಶನದಲ್ಲಿ ಪೂಜಾ ಮಹೋತ್ಸವ ನಡೆಯಲಿದೆ.
ಬೆಳಗ್ಗೆ 10 ಗಂಟೆಗೆ ಧಾರ್ಮಿಕ ಹಾಗೂ ಸ್ವಾಮೀಜಿಗಳಿಗೆ ಫಲಪುಷ್ಪ ಸಮರ್ಪಣೆ ನಂತರ ಸ್ವಾಮೀಜಿಗಳಿಂದ ಆಶೀರ್ವಚನ ನಡೆಯುತ್ತದೆ. ಬೆಳಗ್ಗೆ 11.30ಕ್ಕೆ ತ್ರಿವಳಿ ಜಿನಮಂದಿರದಲ್ಲಿ ಭಗವಂತರಿಗೆ ಪಂಚಾಮೃತಾಭಿಷೇಕ ಮತ್ತು ಶಾಂತಿಧಾರ, ಅಷ್ಟವಿಧಾರ್ಚನೆ ಮತ್ತು ಮಹಾಮಂಗಳಾರತಿ ಕಾರ್ಯವು ನಡೆಯಲಿದೆ.
ಪೂಜಾ ಮಹೋತ್ಸವದಲ್ಲಿ ಭಕ್ತರಿಗೆ ಪ್ರಸಾದ ರೂಪದಲ್ಲಿ ಉಪಾಹಾರ ಮತ್ತು ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ ನಡೆಯುತ್ತದೆ ಎಂದು ಮುಳ್ಳೂರು ಜಿನಮಂದಿರ ಸೇವಾ ಸಮಿತಿಯ ಡಾ.ಅಶ್ವಿನಿ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ -8217505755 ಸಂಪರ್ಕಿಸಬಹುದು.