23ರಂದು ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ

18 jan tnp 02
Published on

ತಿ.ನರಸೀಪುರ: ರಾಜ್ಯಸಭೆಯಲ್ಲಿ ಅಂಬೇಡ್ಕರ್ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ಗೃಹ ಸಚಿವ ಅಮಿತ್ ಶಾ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವುದು, ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧದ ಬಿಜೆಪಿಯ ಪಿತೂರಿ ರಾಜಕಾರಣ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಜ.23ರಂದು ದಲಿತ ಸಂಘರ್ಷ ಸಮಿತಿಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಹೇಳಿದರು.

ಪಟ್ಟಣದ ಅತಿಥಿ ಗೃಹದಲ್ಲಿ ಶುಕ್ರವಾರ ಪ್ರತಿಭಟನೆ ಸಂಬಂಧ ಕರಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು, ಪ್ರಜಾಪ್ರಭುತ್ವವನ್ನು ಪ್ರತಿಪಾದಿಸುವ ಅಂಬೇಡ್ಕರ್ ಅವರ ಸಂವಿಧಾನವನ್ನು ಒಪ್ಪದವರು ದೇಶ ಬಿಟ್ಟು ತೊಲಗಲಿ ಎಂಬ ಘೋಷಣೆಯೊಂದಿಗೆ ಬೃಹತ್ ಪ್ರತಿಭಟನೆಯನ್ನು ದಲಿತ ಸಂಘರ್ಷ ಸಮಿತಿ ಒಕ್ಕೂಟದಿಂದ ಆಯೋಜಿಸಲಾಗಿದೆ. ಅಂಬೇಡ್ಕರ್ ಅಪಮಾನಿಸಿದ್ದಕ್ಕೆ ಕ್ಷಮೆ ಕೇಳಬೇಕು ಅಥವಾ ವಿಷಾದವನ್ನಾದರೂ ವ್ಯಕ್ತಪಡಿಸಬೇಕೆಂಬ ಕನಿಷ್ಠ ಸೌಜನ್ಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಕ್ಕೆ ಬಂದಿರುವ ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಇಲ್ಲ. ಸಚಿವರು ಕ್ಷಮೆ ಕೇಳುವವರೆಗೂ, ಸಚಿವ ಸ್ಥಾನದಿಂದ ವಜಾಗೊಳಿಸುವವರೆಗೂ ಹೋರಾಟ ಮಾಡುತ್ತೇವೆ ಎಂದರು.

ಜ.20ರಿಂದ ಅನಿರ್ದಿಷ್ಟಾವಧಿ ಧರಣಿ

ಪಟ್ಟಣದಲ್ಲಿ ಹಲವು ದಶಕಗಳಿಂದ ಸ್ವಂತ ನೆಲೆ ಇಲ್ಲದೆ ಪರದಾಡುತ್ತಿರುವ ಕೊರಚ ಸಮುದಾಯದ 40 ಕುಟುಂಬಗಳಿಗೆ ನಿವೇಶನ ಮತ್ತು ವಸತಿ ಯೋಜನೆ ಮಂಜೂರಾತಿಗೆ ಒತ್ತಾಯಿಸಿ ಜ.20ರಿಂದ ತಾಲೂಕು ಕಚೇರಿ ಮುಂಭಾಗ ದಲಿತ ಸಂಘರ್ಷ ಸಮಿತಿ ವತಿಯಿಂದ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ. ನಿವೇಶನ ಮಂಜೂರು ಮಾಡುವವರೆಗೆ ಹೋರಾಟ ಹಿಂಪಡೆಯುವುದಿಲ್ಲ ಎಂದು ಹೇಳಿದರು.

ತಾಲೂಕು ಸಂಚಾಲಕ ಸೋಮಶೇಖರ್, ರಾಜು, ಸಂಘಟನಾ ಸಂಚಾಲಕರಾದ ರಜನಿ, ನಾಗರಾಜ್ ಮೂರ್ತಿ, ರವಿ, ಮುಖಂಡರಾದ ಲಕ್ಷ್ಮಣ, ಶಿವಯ್ಯ, ರಾಜು, ವೆಂಕಟೇಶ್, ಶಶಿಕುಮಾರ್, ಮಂಜುನಾಥ್, ಸಂಪತ್ ಕುಮಾರ್, ಶಾಂತರಾಜು, ರಂಗಸ್ವಾಮಿ, ಮಹದೇವಸ್ವಾಮಿ, ಪ್ರಭು, ಮುತ್ತು ಇದ್ದರು.

------------

ಪಟ್ಟಣದಲ್ಲಿ ಜ.21ರಂದು ಅಂತಾರಾಷ್ಟ್ರೀಯ ಖೋ ಖೋ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ ಚೈತ್ರಾಗೆ ಹಮ್ಮಿಕೊಂಡಿರುವ ಚೈತ್ರೋತ್ಸವ ಕಾರ್ಯಕ್ರಮದಲ್ಲಿ ದಸಂಸ ಕಾರ್ಯಕರ್ತರು ಭಾಗವಹಿಸಬೇಕು. ಕುರುಬೂರು ಗ್ರಾಮದ ಬಾಲಕಿ ಅಂತಾರಾಷ್ಟ್ರೀಯ ಕ್ರೀಡೆಗೆ ಆಯ್ಕೆ ಆಗಿರುವುದು ಹೆಮ್ಮೆಯ ವಿಷಯ. ಅಂದು ಸಂಜೆ 4.30 ಗಂಟೆಗೆ ಆಗಮಿಸುತ್ತಿದ್ದು ಅದ್ದೂರಿಯಾಗಿ ಸ್ವಾಗತಿಸೋಣ ಎಂದರು ಆಲಗೂಡು ಶಿವಕುಮಾರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net