

ಹಾಸನ: ಮದುವೆಗೆ ಒಪ್ಪಲಿಲ್ಲ ಎಂಬ ಕಾರಣಕ್ಕೆ ಶಾಲೆಗೆ ತೆರಳುತ್ತಿದ್ದ ಶಿಕ್ಷಕಿಯನ್ನು ದುರುಳರು ಸಿನಿಮೀಯ ಶೈಲಿಯಲ್ಲಿ ಅಪಹರಿಸಿರುವ ಘಟನೆ ಹಾಸನ ಜಿಲ್ಲೆಯ ಹೊರವಲಯದಲ್ಲಿರುವ ಬಿಟ್ಟಗೌಡನಹಳ್ಳಿಯಲ್ಲಿ ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಪಹರಣಕ್ಕೊಳಗಾದ ಶಿಕ್ಷಕಿಯನ್ನು ಅರ್ಪಿತಾ ಎಂದು ಗುರುತಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅರ್ಪಿತಾ ತಾಯಿ, ನಿಮ್ಮ ಮಗಳನ್ನು ನಮ್ಮ ಮಗನಿಗೆ ಮದುವೆ ಮಾಡಿಕೊಡಿ ಎಂದು ಕೆಲ ದಿನಗಳ ಹಿಂದೆ ರಾಮು ಹಾಗೂ ಆತನ ಪೋಷಕರು ನಮ್ಮ ಮನೆಗೆ ಬಂದಿದ್ದರು. ನಾವು ಆಗುವುದಿಲ್ಲ ಎಂದು ಹೇಳಿ ಅವರನ್ನು ವಾಪಸ್ ಕಳುಹಿಸಿದ್ದೆವು. ನಾವು ಮಗಳನ್ನು ಕೊಡುವುದಿಲ್ಲ ಎಂದಿದ್ದಕ್ಕೆ ಸಿಟ್ಟಿಗೆದ್ದು ಅವರು ಅಪಹರಣ ಮಾಡಿದ್ದಾರೆ ಎಂದು ಶಿಕ್ಷಕಿ ಅರ್ಪಿತಾ ತಾಯಿ ಆರೋಪಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಆರೋಪಿಗಳ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಲಾಗಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ತಿಳಿಸಿದ್ದಾರೆ.