

ಬೆಂಗಳೂರು:ಕರಾವಳಿ,ಮಲೆನಾಡಿನ ವ್ಯಾಪ್ತಿಯ ಪ್ರದೇಶಗಳಲ್ಲಿ ಮಂಗಳವಾರವೂ ಮಳೆ ಮುಂದುವರಿದಿದೆ. ಶಿವಮೊಗ್ಗದ ಆಗುಂಬೆ, ಚಿಕ್ಕಮಗಳೂರಿನ ಮೂಡಗೆರೆ, ಕೊಡಗಿನ ಗೋಣಿಕೊಪ್ಪ, ಕಲಬುರಗಿ ಮತ್ತು ಬೆಂಗಳೂರು ಸೇರಿ ರಾಜ್ಯದ ಕೆಲವೆಡೆ ವರ್ಷಧಾರೆಯಾಗಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ಸೆ.4ರಿಂದ ಸೆ.6ರವರೆಗೆ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅರ್ಲಟ್ ನೀಡಿದೆ. ಬೀದರ್, ಕಲಬುರಗಿ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಸೆ.4ರಂದು ಯೆಲ್ಲೋ ಅರ್ಲಟ್ ಇರಲಿದೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಮಳೆ ಇಳಿಮುಖವಾಗಿದೆ.
ಮುಂಗಾರು ಮುಗಿಯಲು ಮೂರೂವರೆ ವಾರ ಬಾಕಿ ಇರುವಾಗಲೇ ರಾಜ್ಯದಲ್ಲಿ ವಾಡಿಕೆಗಿಂತ ಶೇ.23 ಅಧಿಕ ಮಳೆ ಬಿದ್ದಿದೆ. ಜೂ 1ರಿಂದ ಸೆ.3ರವರೆಗೆ 706 ಮಿಮೀ ಮಳೆಯಾಗಬೇಕಿತ್ತು. ಆದರೆ, 869 ಮಿಮೀ ಬಿದ್ದಿದ್ದು, ವಾಡಿಕೆಗಿಂತ ಶೇ.23 ಅಧಿಕ ವರ್ಷಧಾರೆಯಾಗಿದೆ. ದಕ್ಷಿಣ ಕರ್ನಾಟಕದಲ್ಲಿ 243 ಮಿಮೀ ಬದಲಾಗಿ 361 ಮಿಮೀ ಸುರಿದಿದ್ದು, ಶೇ.49ಗಿಂತ ಹೆಚ್ಚು ಮಳೆಯಾಗಿದೆ. ಉತ್ತರ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ 348 ಮಿಮೀ ಬೀಳಬೇಕಿತ್ತು. 451 ಸುರಿದಿದ್ದು, ವಾಡಿಕೆಗಿಂತ ಶೇ.29 ಹೆಚ್ಚು ಬಿದ್ದಿದೆ.
ಮಲೆನಾಡಲ್ಲಿ 1,399 ಮಿಮೀ ಮಳೆಯಾಗಬೇಕಿತ್ತು. ಆದರೆ, 1,610 ಮಿಮೀ ಬಿದ್ದಿದ್ದು, ವಾಡಿಕೆಗಿಂತ ಶೇ.15 ಅಧಿಕ ವರ್ಷಧಾರೆಯಾಗಿದೆ. ಕರಾವಳಿಯಲ್ಲಿ 2,838 ಮಿಮೀ ಬದಲಾಗಿ 3,379 ಮಿಮೀ ಸುರಿದಿದ್ದು, ವಾಡಿಕೆಗಿಂತ ಶೇ.19 ಹೆಚ್ಚು ಮಳೆಯಾಗಿದೆ. ಈ ಅವಧಿಯಲ್ಲಿ 21 ಜಿಲ್ಲೆಗಳಲ್ಲಿ ಹೆಚ್ಚು ಸುರಿದರೆ, 10 ಜಿಲ್ಲೆಗಲ್ಲಿ ವಾಡಿಕೆಯಷ್ಟೇ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿರುವ ಅಂಕಿಅಂಶಗಳಿಂದ ತಿಳಿದುಬಂದಿದೆ.