

ಕಾರವಾರ: ಜಿಲ್ಲೆಯ ಕರಾವಳಿಯ 5 ತಾಲೂಕುಗಳ 101 ಗ್ರಾಪಂಗಳ ಒಟ್ಟು 698 ಮತಗಟ್ಟೆಗಳಲ್ಲಿ ಮೊದಲ ಹಂತದಲ್ಲಿ ಡಿ. 22ರಂದು ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ.ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಪ್ರತಿ 10-15 ಮತಗಟ್ಟೆಗಳಿಗೆ ಒಬ್ಬ ಸೆಕ್ಟರ್ ಅಧಿಕಾರಿ ಮತ್ತು ಸೆಕ್ಟರ್ ಹೆಲ್ತ್ ರೆಗ್ಯುಲೆಟರ್, ಪ್ರತಿ ತಾಲೂಕಿಗೆ ಫ್ಲಾಯಿಂಗ್ ಸ್ಕಾ್ವಡ್, ಪ್ರತಿ ತಾಲೂಕಿನಲ್ಲಿ ತಹಸೀಲ್ದಾರ್ ನೆತ್ರತ್ವದಲ್ಲಿ ಮಾದರಿ ನಿತಿಸಂಹಿತೆಯ ತಂಡವನ್ನು ರಚಿಸಲಾಗಿದ್ದು, ಈ ತಂಡದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಪೊಲೀಸ್ ವೃತ್ತ ನೀರಿಕ್ಷಕ ,ಪೊಲೀಸ್ ಸಬ್ ಇನ್ಸೆ್ಪಕ್ಟರ್ , ಕಂದಾಯ ನೀರಿಕ್ಷಕ ಕಾರ್ಯ ನಿರ್ವಹಿಸಲಿದ್ದಾರೆ ಎಂದರು
ಡಿ.31 ವರೆಗೆ ನೀತಿಸಂಹಿತೆ: ಚುನಾವಣೆ ನಡೆಯುವ ಗ್ರಾಮಪಂಚಾಯತಿಯ ವ್ಯಾಪ್ತಿಯಲ್ಲಿ ಡಿ. 31ರ ವರೆಗೆ ನೀತಿಸಂಹಿತೆ ಜಾರಿಯಲ್ಲಿರುವುದು ಪಟ್ಟಣ ಪಂಚಾಯಿತಿ, ಪುರಸಭೆ , ನಗರಸಭೆ, ನಗರ ಪಾಲಿಕೆಯ ಪ್ರದೇಶಗಳಿಗೆ ಈ ನೀತಿ ಸಂಹಿತೆ ಅನ್ವಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪೊಲೀಸ್ ಬಿಗಿ ಬಂದೋಬಸ್ತ್: ಎಸ್ಪಿ ಶಿವಪ್ರಕಾಶ ದೇವರಾಜು ಮಾತನಾಡಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದ್ದು , ಮೊದಲ ಹಂತದ ಚುನಾವಣೆಯಲ್ಲಿ 53 ಅತಿ ಸೂಕ್ಷ್ಮ 164 ಸೂಕ್ಷ್ಮ ಮತ್ತು 513 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಚುನವಣೆ ಸಂದರ್ಭದಲ್ಲಿ ಗಲಭೆ ಅಥವಾ ಚುನಾವಣೆ ಕರ್ತವ್ಯಗಳಿಗೆ ಅಡ್ಡಿಪಡಿಸಬಹುದಾದ ಸಮಾಜಘಾತಕ ವ್ಯಕ್ತಿಗಳನ್ನು ಈಗಾಗಲೇ ಪಟ್ಟಿಮಾಡಿ ಅವರ ಮೇಲೆ ಸೂಕ್ತ ನಿಗಾವಹಿಸಲಾಗಿದ್ದು ಮುಂಜಾಗ್ರತೆಯ ಕ್ರಮವಾಗಿ ಭದ್ರತಾ ಕಾಯಿದೆಯ ಅಡಿ ಪ್ರಕರಣ ದಾಖಲಿಸಲಾಗುತ್ತಿದೆ ಎಂದರು
ಪ್ರತಿ ಮತಗಟ್ಟೆ ಭದ್ರತೆಗಾಗಿ ಪೊಲೀಸ್ ಸಿಬ್ಬಂದಿಯನ್ನು ಅವಶ್ಯಕತೆ ಅನುಗುಣವಾಗಿ ನೇಮಿಸಲಾಗುವುದು. 5 ಡಿವೈಎಸ್ಪಿ, 17 ಪಿಐ, 70 ಪಿಎಸ್ಐ, 160 ಎಎಸ್ಐ, 1160-ಎಚ್ಸಿ, ಪಿಸಿ , 15 ಡಿಎಆರ್ ತುಕಡಿಗಳು ಮತ್ತು 6 ಕೆಎಸ್ಆರ್ಪಿ ತುಕಡಿಗಳನ್ನು ಹಾಗೂ ಸುಮಾರು 400 ಗೃಹರಕ್ಷಕ ಸಿಬ್ಬಂದಿಯನ್ನು ಚುನವಣಾ ಕರ್ತವ್ಯಕ್ಕೆ ನಿಯೋಜಿಸಲಾಗುವುದು. ಜಿಲ್ಲೆಯಾದ್ಯಂತ 54 ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದ್ದು ಚುನಾವಣಾ ಅಕ್ರಮಗಳ ಬಗ್ಗೆ ನಿಗಾ ವಹಿಸಲಾಗುವುದು ಎಂದರು. ಜಿಪಂ ಸಿಇಒ ಪ್ರಿಯಾಂಗಾ ಎಂ. ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಎಚ್.ಕೆ. ಇದ್ದರು.
ಪ್ರಕರಣವಿಲ್ಲದ ಬಂದೂಕು ಜಮೆಗೆ ವಿನಾಯಿತಿ ಗ್ರಾಮ ಪಂಚಾಯಿತಿ ಚುನಾವಣೆಯ ಸಂದರ್ಭದಲ್ಲಿ ಬೆಳೆ ರಕ್ಷಣೆಗೆ ನೀಡಿದ ಹಾಗೂ ಬ್ಯಾಂಕ್ಗಳ ಭದ್ರತಾ ಸಿಬ್ಬಂದಿಗೆ ನೀಡಿದ ಯಾವುದೇ ಪೊಲೀಸ್ ಪ್ರಕರಣವಿಲ್ಲದ ಬಂದೂಕುಗಳನ್ನು ಪೊಲೀಸ್ ಠಾಣೆಯಲ್ಲಿ ಜಮೆ ಇಡುವುದರಿಂದ ವಿನಾಯಿತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಆದೇಶ ಹೊರಡಿಸಿದ್ದಾರೆ. ಬಂದೂಕುಗಳನ್ನು ಜಮೆ ಪಡೆಯಲು ಚುನಾವಣಾ ಆಯೋಗ ಸೂಚಿಸಿದೆ. ಆದರೆ, ಈಗ ಕಟಾವಿನ ಅವಧಿಯಾಗಿದ್ದರಿಂದ ವಿನಾಯಿತಿ ನೀಡಲಾಗಿದೆ. ಗ್ರಾಮೀಣ ಭಾಗದಲ್ಲಿ ಆತ್ಮ ರಕ್ಷಣೆಗೆ ನೀಡಿದ ಬಂದೂಕು ಹಾಗೂ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರುವ ಬಂದೂಕುಗಳನ್ನು ಕಡ್ಡಾಯವಾಗಿ ಜಮೆ ಇಡಬೇಕು. ಪರವಾನಗಿ ಅವಧಿ ನವೀಕರಣವಾದ ಬಗ್ಗೆ ದಾಖಲಾತಿ ಇದ್ದಲ್ಲಿ ಮಾತ್ರ ಅವುಗಳನ್ನು ಚನಾವಣೆ ನಂತರ ಹಿಂತಿರುಗಿಸಲಾಗುವುದು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
40 ನಾಮಪತ್ರ ಸಲ್ಲಿಕೆ ಕರಾವಳಿಯ 101 ಗ್ರಾಪಂಗಳ ಚುನಾವಣೆಗೆ ನಾಮಪತ್ರ ಸಲ್ಲಿಕೆ ಸೋಮವಾರದಿಂದ ಪ್ರಾರಂಭವಾಗಿದ್ದು, ಮೊದಲ ದಿನವೇ 40 ನಾಮಪತ್ರಗಳು ಸಲ್ಲಿಕೆಯಾಗಿವೆ. ಕುಮಟಾದಲ್ಲಿ 15, ಭಟ್ಕಳದಲ್ಲಿ 13, ಕಾರವಾರದಲ್ಲಿ 7, ಅಂಕೋಲಾದಲ್ಲಿ 3, ಹೊನ್ನಾವರದಲ್ಲಿ 2 ನಾಮಪತ್ರ ಸಲ್ಲಿಕೆಯಾಗಿವೆ.